ಕೆಂಭಾವಿ: ಭಾರತ ವಿವಿಧ ಜಾತಿ ಧರ್ಮಗಳ ಹೊಂದಿದ ಬಹು ಸಂಸ್ಕೃತಿ ರಾಷ್ಟ್ರವಾಗಿದೆ. ಮಾನವೀಯ ಮೌಲ್ಯಗಳಿಗೆ ನಮ್ಮ ಜನತೆ ಪ್ರಾಮುಖ್ಯತೆ ನೀಡುತ್ತಾರೆ ಎಂದು ಶಾಸಕ ರಾಜುಗೌಡ ಹೇಳಿದರು.
ಕರಡಕಲ್ ಕೋರಿಸಿದ್ದೇಶ್ವರ ಮಠದಲ್ಲಿ ನಡೆದ ಶಾಂತರುದ್ರಮುನಿ ಸ್ವಾಮಿಗಳ 30ನೇ ವರ್ಷದ ಮೌನ ತಪೋನುಷ್ಠಾನ ಮಂಗಲ, 1008 ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ 211ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಜನ್ಮ
ದೇವರು ಕೊಟ್ಟ ಕಾಣಿಕೆ, ಇರುವಷ್ಟು ದಿನ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಮ, ಕ್ರೋಧ, ಲೋಭ, ಮದ, ಮತ್ಸರಗಳನ್ನು ದೂರಮಾಡಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿ ಸನ್ಮಾರ್ಗದತ್ತ ಕೊಂಡುಯ್ಯುವ ಶಕ್ತಿ ಜಗನ್ಮಾತೆಯಲ್ಲಿದೆ ಎಂದು ತಿಳಿಸಿದರು.
ಕರಡಕಲ್ ಶ್ರೀ ಮಠ ಧಾರ್ಮಿಕ ಸಾಮಾಜಿಕ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು. ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಮೊಮ್ಮಗಳಾದ ವಸಂತಾ ಕವಿತಾ ರೆಡ್ಡಿ, ಉ ಕ. ಕರವೇ ಅಧ್ಯಕ್ಷ ಶರಣು ಗದ್ದುಗೆ, ಸಂಗನಗೌಡ ವಜ್ಜಲ, ಬಸನಗೌಡ ಹಳ್ಳಿಕೋಟೆ, ಎಚ್.ಸಿ. ಪಾಟೀಲ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಹಣಮಂತ ಕರಡ್ಡಿ, ಶರಣು ನಾಯಕ ಬೈರಿಮಡ್ಡಿ ಇದ್ದರು. ಡಿ.ಎನ್. ಪಾಟೀಲ ಉಪನ್ಯಾಸ ನೀಡಿದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಿಸಿ, ವಂದಿಸಿದರು.