Advertisement

ಶ್ರೀಲಂಕಾದ ರಾಜಕೀಯ ವಿಪ್ಲವ: ಭಾರತಕ್ಕೆ ಸಂಕಷ್ಟ ಕಾಲ 

06:00 AM Oct 29, 2018 | Team Udayavani |

ಶ್ರೀಲಂಕಾದಲ್ಲಿ ನಡೆದಿರುವ ಹಠಾತ್‌ ರಾಜಕೀಯ ವಿಪ್ಲವ ಆ ದೇಶದಲ್ಲಿ ಗಂಭೀರವಾದ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿರುವುದಲ್ಲದೆ ಭಾರತಕ್ಕೂ ಕಳವಳಕಾರಿ ವಿಷಯವಾಗಿ ಪರಿಣಮಿಸಿದೆ. ಗಂಭೀರವಾದ ಭ್ರಷ್ಟಾಚಾರದ ಆರೋಪ ಹೊತ್ತುಕೊಂಡಿದ್ದ ಮಹಿಂದ ರಾಜಪಕ್ಸ 2014ರ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡು ರಣಿಲ್‌ ವಿಕ್ರಮಸಿಂಘೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೆ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನಡುವಿನ ಸಂಬಂಧ ಹಿತಕರವಾಗಿರಲಿಲ್ಲ. ಆದಾಗ್ಯೂ ಇಷ್ಟು ವರ್ಷ ಸರಕಾರ ನಡೆಸಿಕೊಂಡು ಬರುವಲ್ಲಿ ವಿಕ್ರಮಸಿಂಘೆ ಯಶಸ್ವಿಯಾಗಿದ್ದರು. ಇದರಲ್ಲಿ ಭಾರತದ ಪಾತ್ರವೂ ಇತ್ತು. ಸಿರಿಸೇನ ಮತ್ತು ವಿಕ್ರಮಸಿಂಘೆ ನಡುವೆ ಸಂಧಾನ ಮಾಡಿದ್ದೇ ಭಾರತ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಒಂದರ್ಥದಲ್ಲಿ ಭಾರತದ ರಾಜತಾಂತ್ರಿಕತೆಯ ವೈಫ‌ಲ್ಯವೂ ಹೌದು. 

Advertisement

ಇದೀಗ ಕಾಣಿಸಿಕೊಂಡಿರುವ ರಾಜಕೀಯ ಬಿಕ್ಕಟ್ಟಿನ ಸೂತ್ರಧಾರ ಸಿರಿಸೇನ ಎನ್ನಲಾಗುತ್ತಿದೆ. ವಿಕ್ರಮಸಿಂಘೆಯನ್ನು ಪದಚ್ಯುತಗೊಳಿಸಿ ರಾಜಪಕ್ಸ ಅವರನ್ನು ಪ್ರಧಾನಿ ಮಾಡುವ ಕಾರ್ಯಾಚರಣೆಯನ್ನು ಬಹಳ ರಹಸ್ಯವಾಗಿ ಮತ್ತು ವ್ಯವಸ್ಥಿತವಾಗಿ ಮಾಡಲಾಗಿತ್ತು. ಅಲ್ಲಿನ ರಾಜಕೀಯ ವಲಯಕ್ಕಾಗಲಿ, ಜನರಿಗಾಗಲಿ ಇದರ ಸುಳಿವು ಸಿಕ್ಕಿರಲಿಲ್ಲ. ಟಿವಿವಾಹಿನಿಗಳಲ್ಲಿ ರಾಜಪಕ್ಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದೃಶ್ಯಗಳು ಪ್ರಸಾರವಾದವಾಗಲೇ ಜನರಿಗೆ ತಮ್ಮ ದೇಶದ ಪ್ರಧಾನಿ ಬದಲಾಗಿರುವ ವಿಚಾರ ತಿಳಿದದ್ದು. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಈ ಮಾದರಿಯ ರಹಸ್ಯ ರಾಜಕೀಯ ಬೆಳವಣಿಗೆ ನಡೆಯುವುದು ಪ್ರಜಾತಂತ್ರದ ದೃಷ್ಟಿಯಿಂದ ಅಪಾಯಕಾರಿ. ಇದು ಒಂದು ರೀತಿಯಲ್ಲಿ ಸಿರಿಸೇನ ಅವರ ಸರ್ವಾಧಿಕಾರಿ ವರ್ತನೆಯಂತೆ ಕಾಣಿಸುತ್ತದೆ. 

ಶ್ರೀಲಂಕಾದ ರಾಜಕೀಯ ವಿಚಾರಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಲು ತೊಡಗಿದ ಬಳಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುವ ಆರೋಪದಲ್ಲಿ ಹುರುಳಿದೆ. ಚೀನಾ ಮೂಗುತೂರಿಸಿದೆಡೆಯಲ್ಲೆಲ್ಲ ಪ್ರಜಾಪ್ರಭುತ್ವ ಅಪಾಯಕ್ಕೀಡಾಗುತ್ತಿದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ ಮಾಲ್ಡೀವ್ಸ್‌, ಇದೀಗ ಶ್ರೀಲಂಕಾ. ಸ್ವತಃ ಚೀನಾದಲ್ಲಿ ಪ್ರಜಾಪ್ರಭುತ್ವವನ್ನು ಕೈಕಾಲು ಕಟ್ಟಿ ಬಂಧನದಲ್ಲಿಡಲಾಗಿದೆ. ಅಲ್ಲೀಗ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಮುಖವಾಡ ಧರಿಸಿರುವ ಸರ್ವಾಧಿಕಾರ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಜೀವ ಪರ್ಯಂತ ಅಧಿಕಾರ ಪಡೆದುಕೊಂಡಿದ್ದಾರೆ. ಹೀಗಿರುವ ಚೀನಾ ಇತರ ದೇಶಗಳ ವ್ಯವಹಾರಗಳಲ್ಲೂ ಕೈ ಹಾಕಿ ಪ್ರಜಾಪ್ರಭುತ್ವದ ಕತ್ತು ಹಿಚುಕುತ್ತಿರುವುದನ್ನು ಜಾಗತಿಕ ವೇದಿಕೆಯಲ್ಲಿ ಖಂಡಿಸುವ ಅಗತ್ಯವಿದೆ.ಆದರೆ ಬಲಾಡ್ಯ ಚೀನಾವನ್ನು ಎದುರು ಹಾಕಿಕೊಳ್ಳಲು ಯಾವ ರಾಷ್ಟ್ರವೂ ಮುಂದಾಗದಿರುವುದು ದುರದೃಷ್ಟಕರ. 

ಪ್ರಧಾನಮಂತ್ರಿಯನ್ನು ವಿನಾಕಾರಣ ಪದಚ್ಯುತಗೊಳಿಸುವುದನ್ನು ತಡೆಯಲು 2015ರಲ್ಲಿ ಶ್ರೀಲಂಕಾದ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಈ 19ನೇ ತಿದ್ದುಪಡಿ ಪ್ರಕಾರ ಪ್ರಧಾನಮಂತ್ರಿ ತಾನಾಗಿ ರಾಜೀನಾಮೆ ನೀಡದ ಅಥವಾ ವಿಶ್ವಾಸಮತ ಕಳೆದುಕೊಳ್ಳದ ಹೊರತು ಪದಚ್ಯುತಗೊಳಿಸುವಂತಿಲ್ಲ. ಈ ದೃಷ್ಟಿಯಿಂದ ನೋಡಿದರೂ ಸಿರಿಸೇನ ಮಾಡಿರುವುದು ಸಂವಿಧಾನದ ಸಾರಾಸಗಟು ಉಲ್ಲಂಘನೆ. ಶುಕ್ರವಾರ ಸಂಜೆ ದಿಢೀರ್‌ ಎಂದು ರಾಜಕೀಯ ವಿಪ್ಲವ ನಡೆದಿರುವುದರ ಹಿಂದೆಯೂ ನಿಖರ ಲೆಕ್ಕಾಚಾರವಿದೆ. ಸೋಮವಾರದ ತನಕ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ಅಸಾಧ್ಯವಾಗಿರುವುದರಿಂದ ಶುಕ್ರವಾರವನ್ನೇ ಆಯ್ದುಕೊಳ್ಳಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಇದು ವ್ಯವಸ್ಥಿತ ಪಿತೂರಿಯೊಂದರ ಭಾಗ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. 

ವಿಕ್ರಮಸಿಂಘೆ ಭಾರತದ ಪರವಾದ ಒಲವು ಹೊಂದಿದ್ದರು. ರಾಜಪಕ್ಸ ಕಾಲದಲ್ಲಿ ಚೀನಾದತ್ತ ವಾಲಿದ್ದ ಶ್ರೀಲಂಕಾವನ್ನು ಮರಳಿ ಭಾರತದತ್ತ ತರುವಲ್ಲಿ ಅವರ ಪಾತ್ರ ಹಿರಿದಾಗಿತ್ತು. ತಮಿಳು ಉಗ್ರರ ಹುಟ್ಟಡಗಿಸಿದ ಕಾರಣಕ್ಕೆ ರಾಜಪಕ್ಸ ಶ್ರೀಲಂಕನ್ನರ ದೃಷ್ಟಿಯಲ್ಲಿ ಹೀರೊ ಆಗಿದ್ದರೂ ಅವರ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಆರೋಪಗಳೂ ಇವೆ. ದೇಶದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವರು ಹೆಚ್ಚಾಗಿ ಚೀನವನ್ನು ಆವಲಂಬಿಸಿದ್ದರು. ಶ್ರೀಲಂಕಾದ ಒಂದು ಬಂದರನ್ನೇ ಅವರು ಚೀನಾಕ್ಕೊಪ್ಪಿಸಿದ್ದರು. ವ್ಯೂಹಾತ್ಮಕ ದೃಷ್ಟಿಯಲ್ಲಿ ಭಾರತಕ್ಕೆ ಇದು ಅಪಾಯದ ಸೂಚನೆಯಾಗಿತ್ತು. ಕೆಲ ತಿಂಗಳ ಹಿಂದೆಯಷ್ಟೇ ವಿಕ್ರಮಸಿಂಘೆ ಭಾರತದ ಜತೆಗೆ ಹಲವು ಮೂಲಸೌಕರ್ಯ ಯೋಜನೆಗಳ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಶ್ರೀಲಂಕಾ ಜತೆಗಿನ ಸಂಬಂಧ ಮರುಸ್ಥಾಪಿಸುವಲ್ಲಿ ಈ ಒಪ್ಪಂದಗಳು ಮುಖ್ಯವಾಗಿದ್ದವು. ಅಲ್ಲಿ ಈಗ ಆಡಳಿತ ಕೈಬದಲಾಯಿ ಸಿರುವುದರಿಂದ ಮತ್ತೆ ಚೀನಾದ ಪ್ರಭಾವ ದಟ್ಟವಾಗುವ ಸಾಧ್ಯತೆಯಿದೆ. ರಾಜಪಕ್ಸ ಚೀನಾ ಪರ ಮತ್ತು ಭಾರತ ವಿರೋಧಿ ಎನ್ನುವುದು ಸ್ಪಷ್ಟ. ಇದೀಗ ಅವರೇ ಹಿಂದಿನ ಬಾಗಿಲಿನ ಮೂಲಕ ಬಂದು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವುದರಿಂದ ಭಾರತ ರಾಜತಾಂತ್ರಿಕವಾಗಿ ಎಚ್ಚರಿಕೆಯ ನಡೆಯಿಡಬೇಕು. 

Advertisement
Advertisement

Udayavani is now on Telegram. Click here to join our channel and stay updated with the latest news.

Next