ಹೊಸದಿಲ್ಲಿ: ಆರಂಭದಲ್ಲಿ ಯೋಗದ ಮೂಲಕ ಭಾರತೀಯರ ಮನೆಮನೆಗೂ ಪರಿಚಿತರಾಗಿ, ಅನಂತರ ಆಯುರ್ವೇದ ಫಾರ್ಮಸಿ ಮೂಲಕ ಉದ್ಯಮಿ ರೂಪ ತಳೆದು, ದಿನಬಳಕೆ ಉತ್ಪನ್ನಗಳ (ಎಫ್ಎಂಸಿಜಿ) ಕ್ಷೇತ್ರವನ್ನೂ ವ್ಯಾಪಿಸಿರುವ ಯೋಗ ಗುರು ಬಾಬಾ ರಾಮ್‌ದೇವ್, ಈಗ ಭದ್ರತಾ ಸಂಸ್ಥೆ ಆರಂಭಿಸುವುದಾಗಿಯೂ ಹೇಳಿದ್ದಾರೆ. ಈ ಮೂಲಕ ಅವರು ದೇಶದ ಮುಂದಿನ ಟಾಟಾ, ಅಂಬಾನಿ ಆಗಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಎಫ್ಎಂಸಿಜಿ ವಿಭಾಗದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಬಾಬಾ ರಾಮ್‌ದೇವ್ ಒಡೆತನದ “ಪತಂಜಲಿ’ ಸಂಸ್ಥೆ, ಕಾರ್ಪೊ ರೇಟ್ ವಲಯದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದೆ. ಕಂಪೆನಿಯ ಈ ಪ್ರ ಗತಿ ಬಹುರಾಷ್ಟ್ರೀಯ ಕಂಪೆನಿಗಳ ಬೆವರಿಳಿಸಿದೆ.
ಐದು ವರ್ಷಗಳ ಹಿಂದೆ ಸಣ್ಣ ಆಯುರ್ವೇದ ಔಷಧ ಮಾರುತ್ತಿದ್ದ ಪತಂಜಲಿ, ಕೇವಲ 10 ವರ್ಷಗಳಲ್ಲಿ ಬೃಹತ್ ಉದ್ಯಮವಾಗಿ ಬೆಳೆದಿದೆ. ಸಮೀಕ್ಷೆಯೊಂದರ ಪ್ರಕಾರ ಭಾರತದ 10 ಪ್ರಭಾವಿ ಬ್ರಾಂಡ್‌ಗಳ ಪೈಕಿ ಪತಂಜಲಿ 4ನೇ ಸ್ಥಾನದಲ್ಲಿದೆ. ಇದೀಗ ಭದ್ರತಾ ಸಂಸ್ಥೆ ಆರಂಭಿಸುವುದಾಗಿ ಬಾಬಾ ರಾಮ್‌ದೇವ್ ಘೋಷಿಸಿದ್ದು, ಇದು ಸುಮಾರು 40,000 ಕೋಟಿ ಮೌಲ್ಯದ ಭಾರತದ ಖಾಸಗಿ ಭದ್ರತಾ ಉದ್ಯಮದಲ್ಲಿ ತಲ್ಲಣ ಮೂಡಿಸಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ತಾನು ಇತರ ಉದ್ಯಮಗಳಲ್ಲೂ ತೊಡಗುವ ಸೂಚನೆ ಯನ್ನು ಪತಂಜಲಿ ಸಂಸ್ಥೆ ನೀಡಿದೆ.
ಭಾರತದಲ್ಲಿ ಪ್ರಭಾವಿ ಬ್ರಾಂಡ್‌ಗಳಾಗಿ ಗುರುತಿಸಿಕೊಂಡಿರುವ ಗೂಗಲ್, ಮೈಕ್ರೊ ಸಾಫ್ಟ್ ಮತ್ತು ಫೇಸ್‌ಬುಕ್‌ನ ಅನಂತರದ ಸ್ಥಾನದಲ್ಲಿರುವ ಪತಂಜಲಿ, ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್‌ಬಿಐ, ಏಷ್ಯಾದ ಬೃಹತ್ ಟೆಲಿಕಾಂ ಕಂಪೆನಿ ಏರ್‌ಟೆಲ್ ಅನ್ನು ಹಿಂದಿಕ್ಕುವ ಜತೆಗೆ, ರಿಲಯನ್ಸ್ ಜಿಯೋ, ಫ್ಲಿಪ್ ಕಾರ್ಟ್ ರೀತಿಯ ದಿಗ್ಗಜ ಕಂಪೆನಿಗಳಲ್ಲೂ ನಡುಕ ಹುಟ್ಟಿದೆ.