Advertisement

ಐಒಸಿಯಲ್ಲಿ ಭಾರತ

01:00 AM Mar 05, 2019 | Harsha Rao |

ಮುಸ್ಲಿಮ್‌ ದೇಶಗಳ ಸಹಕಾರ ಸಂಘಟನೆಯ (ಐಒಸಿ) ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲು ಭಾರತ ಆಹ್ವಾನಿಲ್ಪಟ್ಟದ್ದು ದೇಶದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗಿದೆ. ಕಳೆದ ಶುಕ್ರವಾರ ನಡೆದ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾಗವಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಗುವಿನ ಪರಿಸ್ಥಿತಿ ಇರುವಾಗಲೇ ನಡೆದ ಈ ಸಮ್ಮೇಳನವನ್ನು ಸುಷ್ಮಾ ಭಯೋತ್ಪಾದನೆ ಪಿಡುಗಿನತ್ತ ಇಸ್ಲಾಮ್‌ ದೇಶಗಳ ಗಮನ ಸೆಳೆ ಯಲು ಸಮರ್ಥವಾಗಿ ಬಳಸಿ ಕೊಂಡಿ ದ್ದಾರೆ. ಭಾರತವನ್ನು ಆಹ್ವಾನಿ ಸಿರುವುದನ್ನು ಆಕ್ಷೇಪಿಸಿ ಸಂಘಟ ನೆಯ ಸ್ಥಾಪಕ ಸದಸ್ಯ ದೇಶವಾಗಿರುವ ಪಾಕಿಸ್ತಾನ ಈ ಸಮಾವೇಶದಲ್ಲಿ ಭಾಗವಹಿ ಸಿರಲಿಲ್ಲ. 

Advertisement

1969ರಲ್ಲಿ ಮುಸ್ಲಿಂ ದೇಶಗಳ ಸಹಕಾರ ಸಂಘಟನೆಯ ಸ್ಥಾಪಿನೆಯಾದಾಗಲೇ ಉದ್ಘಾ ಟನಾ ಸಮಾರಂಭಕ್ಕೆ ಭಾರತವನ್ನು ಆಹ್ವಾನಿಸುವ ಪ್ರಸ್ತಾವ ಇತ್ತು. ಆದರೆ ಪಾಕಿಸ್ತಾನ ತನ್ನ ಪ್ರಭಾವ ಬಳಸಿ ಈ ಪ್ರಸ್ತಾವವನ್ನು ಹಿಂದೆಗೆದುಕೊಳ್ಳುವಂತೆ ಮಾಡುವಲ್ಲಿ ಸಫ‌ಲವಾಗಿತ್ತು. ಆದರೆ ಇದೀಗ 50 ವರ್ಷಗಳ ಬಳಿಕ ಪಾಕಿಸ್ತಾನದ ಪ್ರಬಲ ವಿರೋಧವನ್ನು ಲೆಕ್ಕಿಸದೆ ಭಾರತವನ್ನು ಆಹ್ವಾನಿಸಲಾಗಿದ್ದು, ಇದು ಮುಸ್ಲಿಂ ದೇಶಗಳ ಜತೆಗಿನ ಸಂಬಂಧ ಸಂವರ್ಧನೆಯಲ್ಲಿ ಭಾರತಕ್ಕೆ ಸಿಕ್ಕಿರುವ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವು. ಸುಮಾರು 19 ಕೋಟಿ ಮುಸ್ಲಿಮರಿರುವ ಭಾರತಕ್ಕೆ ಇಸ್ಲಾಮ್‌ ದೇಶಗಳ ಸಹಕಾರ ಸಂಘಟನೆಯಲ್ಲಿ ಭಾಗವಹಿಸುವ ಎಲ್ಲ ಅರ್ಹತೆ ಇದೆ. 

ಮುಸ್ಲಿಂ ಜಗತ್ತಿನ ಹಿತಾಸಕ್ತಿಯಯನ್ನು ಸಂರಕ್ಷಿಸುತ್ತಾ ಜಾಗತಿಕ ಶಾಂತಿ ಮತ್ತು ಭಾವೈಕ್ಯತೆಯನ್ನು ಕಾಪಿಡುವುದು ಈ ಸಲದ ಸಮಾವೇಶದ ತಿರುಳಾಗಿತ್ತು. ಕೆಲವು ದೇಶಗಳ ಬೆಂಬಲ ಮತ್ತು ಪ್ರಾಯೋಜನೆಯೊಂದಿಗೆ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳು ಜಾಗತಿಕ ಶಾಂತಿಗೆ ಹೇಗೆ ಕಂಟಕವಾಗಿ ಪರಿಣಮಿಸುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಭಾರತ ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದೆ. ನೆರೆ ದೇಶದಿಂದ ರಫ್ತಾಗುತ್ತಿರುವ ಭಯೋತ್ಪಾದನೆ ಭಾರತ ಮಾತ್ರವಲ್ಲದೆ ಒಟ್ಟಾರೆ ವಿಶ್ವಕ್ಕೆ ಮಾರಕ ಎನ್ನುವುದನ್ನು ಸುಷ್ಮಾ ಸ್ವರಾಜ್‌ ಪರಿಣಾಮಕಾರಿಯಾಗಿ ಹೇಳಿದ್ದಾರೆ. 

ಅತ್ಯಧಿಕ ಮುಸ್ಲಿಮ್‌ ಜನಸಂಖ್ಯೆಯುಳ್ಳ ಮೂರನೇ ದೇಶವಾಗಿದ್ದರೂ ಭಾರತಕ್ಕೆ ಈ ಒಕ್ಕೂಟದ ವೀಕ್ಷಕ ದೇಶದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಇದೀಗ ಸಿಕ್ಕಿರುವ ಈ ಅವಕಾಶವನ್ನು ಮುಸ್ಲಿಮ್‌ ದೇಶಗಳ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸುವುದಕ್ಕೆ ಬಳಸಿಕೊಳ್ಳುವ ಮೂಲಕ ಈ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಮುಖ್ಯವಾಗಿ ಸೌದಿ ಅರೇಬಿಯ ಮತ್ತು ಯುಎಇ ಭಾರತಕ್ಕೆ ರಾಜಕೀಯವಾಗಿ ಮಾತ್ರ ವಲ್ಲದೆ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ ಪ್ರಮುಖ ದೇಶಗಳಾಗಿವೆ. 

ಈ ಸಲದ ಸಮಾವೇಶದ ಮುಖ್ಯ ನಿರ್ಣಯದಲ್ಲಿ ಕಾಶ್ಮೀರ ವಿವಾದ ಮತ್ತು ಭಾರತ-ಪಾಕಿಸ್ತಾನ ಸಂಬಂಧದ ವಿಚಾರಗಳು ಇರಲಿಲ್ಲ. ಆದರೆ ಪೂರಕ ನಿರ್ಣಯದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸೆರೆ ಸಿಕ್ಕಿದ್ದ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆಗೊಳಿಸಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಮೂಲಕ ಮುಸ್ಲಿಮ್‌ ದೇಶಗಳ ಸಹಕಾರ ಸಂಘಟನೆ ತನ್ನ ಮೂಲ ಸಿದ್ಧಾಂತಕ್ಕೆ ಮರಳಿದೆ ಎಂದು ಕೆಲವರು ವಿಶ್ಲೇಷಿಸಿದ್ದಾರೆ. ಆದರೆ ಇದು ಪಾಕಿಸ್ತಾನವನ್ನು ಸಮಾಧಾನಪಡಿಸಲು ಮಾಡಿದ ಕ್ರಮ ಎಂದೂ ಅರ್ಥೈಸಿಕೊಳ್ಳಬಹುದು. ಭಾರತವನ್ನು ಆಹ್ವಾನಿಸಿರುವುದರಿಂದ ಮುನಿಸಿಕೊಂಡು ಸಮಾವೇಶವನ್ನು ಬಹಿಷ್ಕರಿಸಿದ್ದ ಪಾಕಿಸ್ತಾನವನ್ನು ಈ ಮೂಲಕ ಸಂತೈಸಲು ಸಂಘಟನೆ ಮುಂದಾಗಿದೆ. ಕಾಶ್ಮೀರ ವಿವಾದ ನಮ್ಮ ಆಂತರಿಕ ವಿಷಯ ಎಂದು ಭಾರತ ಈಗಾಗಲೇ ಇದಕ್ಕೆ ತಿರುಗೇಟು ನೀಡಿದೆ. 

Advertisement

ಏನೇ ಆದರೂ ಬಲಿಷ್ಠ ಜಾಗತಿಕ ವೇದಿಕೆಯೊಂದನ್ನು ನಮ್ಮ ನಿಲುವನ್ನು ಪ್ರತಿಪಾದಿಸಲು ಬಳಸಿಕೊಳ್ಳುವಲ್ಲಿ ಸಫ‌ಲರಾಗಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟ ತೀವ್ರಗೊಂಡಿರುವ ಸಮಯದಲ್ಲೇ ನಡೆದ ಈ ಸಮ್ಮೇಳನ ನೆರೆ ರಾಷ್ಟ್ರವನ್ನು ತಿವಿಯಲು ಸಿಕ್ಕಿದ ಒಂದು ಸುವರ್ಣಾವಕಾಶವಾಗಿತ್ತು. ಆದರೆ ಇದನ್ನು ಬರೀ ಪಾಕಿಸ್ತಾನವನ್ನು ಟೀಕಿಸಲು ಸಿಕ್ಕಿದ ಅವಕಾಶ ಎಂಬಷ್ಟಕ್ಕೆ ಸೀಮಿತಗೊಳಿಸದೆ ರಚನಾತ್ಮಕ ಕೆಲಸಗಳ ಮೂಲಕ ಇಸ್ಲಾಂ ದೇಶಗಳ ಜತೆಗಿನ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬಳಸಿಕೊಳ್ಳುವ ಜಾಣ್ಮೆಯನ್ನು ತೋರಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next