Advertisement

ಆಫ್ಘಾನ್‌ಗೆ ಹಸ್ತಕ್ಷೇಪ ಬೇಡ; ದಿಲ್ಲಿಯ ಸಮ್ಮೇಳನದಲ್ಲಿ ಪಾಕ್‌ಗೆ ತಿವಿತ

07:54 PM Nov 10, 2021 | Team Udayavani |

ನವದೆಹಲಿ/ಬೀಜಿಂಗ್‌:”ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಮತ್ತು ಅವರ ಕಿಡಿಗೇಡಿತನದ ಚಟುವಟಿಕೆಗಳಿಗೆ ತರಬೇತಿ ನೀಡಲು ಬಳಕೆ ಮಾಡಲು ಅವಕಾಶ ನೀಡಲೇಬಾರದು. ಜತೆಗೆ ಆ ದೇಶದ ಆಂತರಿಕ ವಿಚಾರದಲ್ಲಿ ಮತ್ತೊಂದು ದೇಶದ ಹಸ್ತಕ್ಷೇಪ ಇರಲೇಬಾರದು’ – ಹೀಗೆಂದು ಭಾರತದ ನೇತೃತ್ವದಲ್ಲಿ ನವದೆಹಲಿಯಲ್ಲಿ ಬುಧವಾರ ನಡೆದ ಎಂಟು ರಾಷ್ಟ್ರಗಳ ಒಕ್ಕೂಟ ಅಫ್ಘಾನಿಸ್ತಾನ ವಿಚಾರವಾಗಿ ಆಯೋಜಿಸಿದ್ದ “ಪ್ರಾದೇಶಿಕ ಭದ್ರತಾ ಸಮ್ಮೇಳನ’ದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಜತೆಗೆ ಎಲ್ಲರನ್ನೂ ಒಳಗೊಂಡ ಸರ್ಕಾರ ಆ ದೇಶದಲ್ಲಿ ಅಸ್ತಿತ್ವಕ್ಕೆ ಬರಬೇಕು ಎಂದೂ ನಿರ್ಣಯಲ್ಲಿ ಪ್ರತಿಪಾದಿಸಲಾಗಿದೆ.

Advertisement

ಭಾರತ, ರಷ್ಯಾ, ಇರಾನ್‌, ಕಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ತುರ್ಕ್‌ಮೇನಿಸ್ತಾನ, ತಜಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು (ಎನ್‌ಎಸ್‌ಎ) ಸಮ್ಮೇಳನದಲ್ಲಿದ್ದರು.

ಸದ್ಯ ತಾಲಿಬಾನ್‌ ವಶದಲ್ಲಿರುವ ಅಫ್ಘಾನಿಸ್ತಾನಕ್ಕೆ ಎಲ್ಲ ರೀತಿಯ ಮಾನವೀಯತೆಯ ನೆರವು ನೀಡಬೇಕು ಎಂದೂ ನಿರ್ಧರಿಸಲಾಗಿದೆ. ಆ ದೇಶದಲ್ಲಿ ಸ್ಥಿರವಾಗಿರುವ, ಶಾಂತಿಯುತ ಮತ್ತು ದೃಢವಾಗಿರುವ ಸರ್ಕಾರ ಮತ್ತು ಸಾಮಾನ್ಯ ಪರಿಸ್ಥಿತಿ ನೆಲೆಯೂರಬೇಕು. ಅದಕ್ಕಾಗಿ ಯಾವುದೇ ರಾಷ್ಟ್ರದ ಹಸ್ತಕ್ಷೇಪ ಅಫ್ಘಾನಿಸ್ತಾನದ ಮೇಲೆ ಇರಬಾರದು ಎಂದು ಸಮ್ಮೇಳನ ಪ್ರತಿಪಾದಿಸಿದೆ. ಹೀಗೆನ್ನುವ ಮೂಲಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಪ್ರಾಬಲ್ಯ ಮತ್ತೂಮ್ಮೆ ಮೆರೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ಉಗ್ರ ಸಂಘಟನೆಯ ಜತೆಗೆ ನಿಕಟ ಬಾಂಧವ್ಯ ಹೊಂದುವ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ನಿರ್ಣಯ ಮಹತ್ವದ್ದಾಗಿದೆ.

ಇದನ್ನೂ ಓದಿ:ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ : ತಂಗಡಗಿ

ದಾಳಿಗಳಿಗೆ ಖಂಡನೆ:
ಕಂದಹಾರ್‌, ಕುಂಡುಜ್‌, ಕಾಬೂಲ್‌ಗ‌ಳಲ್ಲಿ ಇತ್ತೀಚೆಗೆ ನಡೆದ ಉಗ್ರರ ಬಾಂಬ್‌ ಸ್ಫೋಟ ಮತ್ತು ಇತರ ಹಿಂಸಾಕೃತ್ಯಗಳನ್ನು ಕಟುವಾಗಿ ಟೀಕಿಸಲಾಗಿದೆ. ಹೀಗಾಗಿ, ಆ ದೇಶದ ನೆಲವನ್ನು ಭಯೋತ್ಪಾದಕ ಕೃತ್ಯಗಳಿಗೆ ಮತ್ತು ಅವರಿಗೆ ಆಶ್ರಯ ನೀಡುವ ಸ್ಥಳವನ್ನಾಗಿಸಲು ಅವಕಾಶ ನೀಡಲೇಬಾರದು ಎಂದು ನಿರ್ಧರಿಸಲಾಗಿದೆ.

Advertisement

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಫ್ಘಾನಿಸ್ತಾನದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಂಟೂ ರಾಷ್ಟ್ರಗಳು ಸದ್ಯ ಮಾಡಬೇಕಾದುದೇನೆಂದರೆ, ಭದ್ರತೆ, ಸಹಕಾರ ಏರ್ಪಡಿಸಿಕೊಳ್ಳಬೇಕು. ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೊ ಒಳಗೊಂಡ ಸುಭದ್ರ ಸರ್ಕಾರ, ಸ್ಥಿರವಾಗಿರುವ ಪರಿಸ್ಥಿತಿ ನಿರ್ಮಾಣವಾಗಬೇಕು. ಅಫ್ಘಾನಿಸ್ತಾನದ ಸಾರ್ವಭೌಮತ್ವ, ಏಕತೆ, ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವತ್ತ ಎಂಟೂ ರಾಷ್ಟ್ರಗಳೂ ಕೈಜೋಡಿಸಬೇಕು ಎಂದು ನಿರ್ಧರಿಸಲಾಯಿತು.

ಪ್ರಸ್ತಾವಿಕವಾಗಿ ಮಾತನಾಡಿದ ದೇಶದ ಎನ್‌ಎಸ್‌ಎ ಅಜಿತ್‌ ದೊವಾಲ್‌ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬೆಳವಣಿಗೆಗಳು ಕೇವಲ ಅಲ್ಲಿನವರಿಗೆ ಮಾತ್ರವಲ್ಲ. ಏಷ್ಯಾದ ಕೇಂದ್ರ ಭಾಗ ಮತ್ತು ದಕ್ಷಿಣ ಭಾಗಕ್ಕೆ ನೇರವಾಗಿ, ಜಗತ್ತಿನ ಒಟ್ಟೂ ವ್ಯವಸ್ಥೆಗೆ ಪ್ರತಿಕೂಲ ಪರಿಣಾಮ ಬೀರಲಿವೆ ಎಂದರು.

ಪ್ರಧಾನಿ ಜತೆಗೆ ಭೇಟಿ:
ಸಮ್ಮೇಳನ ಮುಕ್ತಾಯದ ಬಳಿಕ ಎಂಟೂ ರಾಷ್ಟ್ರಗಳ ಎನ್‌ಎಸ್‌ಎಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪಾಕಿಸ್ತಾನ ಸಮ್ಮೇಳನಕ್ಕೆ ಚೀನಾ
ಅಫ್ಘಾನಿಸ್ತಾನದ ಭದ್ರತೆ ವಿಚಾರದಲ್ಲಿ ಬರಲೊಲ್ಲೆ ಎಂದು ಹೇಳಿದ ಚೀನಾ ಮತ್ತೊಮ್ಮೆ ಕುತ್ಸಿತ ಬುದ್ಧಿಯನ್ನು ತೋರಿದೆ. ಗುರುವಾರ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಬೀಜಿಂಗ್‌ ಹೇಳಿಕೊಂಡಿದೆ. ಪಾಕಿಸ್ತಾನ ಆಯೋಜನೆ ಮಾಡಿರುವ ಆಫ್ಘಾನ್‌ ಕುರಿತ ಸಮ್ಮೇಳನದಲ್ಲಿ ಅಮೆರಿಕ, ಚೀನಾ, ರಷ್ಯಾ ಮತ್ತು ಆತಿಥೇಯ ರಾಷ್ಟ್ರ ಭಾಗವಹಿಸಲಿದೆ.

ಭಾಗವಹಿಸಿದ್ದ ರಾಷ್ಟ್ರಗಳು
ಭಾರತ, ರಷ್ಯಾ, ಇರಾನ್‌, ಕಜಕಿಸ್ತಾನ, ಕಿರ್ಗಿಸ್ತಾನ, ಉಜ್ಬೇಕಿಸ್ತಾನ, ತುರ್ಕ್‌ಮೇನಿಸ್ತಾನ, ತಜಕಿಸ್ತಾನ

ಏನು ನಿರ್ಣಯಗಳು?
– ಅಫ್ಘಾನಿಸ್ತಾನದಲ್ಲಿ ಉಗ್ರ ಸಂಬಂಧಿ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು.
– ಯಾವುದೇ ಇತರ ದೇಶ, ಆಫ್ಘಾನ್‌ನ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು
– ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆ, ಭದ್ರತೆ, ಏಕತೆಗೆ ಆದ್ಯತೆ ನೀಡಬೇಕು.
– ಆ ದೇಶದಲ್ಲಿ ಎಲ್ಲರನ್ನೂ ಒಳಗೊಂಡ ಸರ್ಕಾರ ಜಾರಿಯಾಗಬೇಕು.
– ಇತ್ತೀಚೆಗೆ ನಡೆದ ಉಗ್ರ ಕೃತ್ಯಗಳು ಖಂಡನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next