ಮುಂಬಯಿ :ದೇಶವು ಇಬ್ಬರು ‘ರಾಷ್ಟ್ರ ಪಿತ’ರನ್ನು ಹೊಂದಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಹೇಳಿಕೆ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ನವ ಭಾರತದ ಪಿತಾಮಹ ಎಂದು ಬಣ್ಣಿಸಿದ್ದಾರೆ.
“ನಮ್ಮಲ್ಲಿ ಇಬ್ಬರು ‘ರಾಷ್ಟ್ರ ಪಿತ’ರಿದ್ದಾರೆ. ನರೇಂದ್ರ ಮೋದಿ ಅವರು ನವ ಭಾರತದ ಪಿತಾಮಹ ಮತ್ತು ಮಹಾತ್ಮ ಗಾಂಧಿ ಅವರು ಹಿಂದಿನ ಕಾಲದ ರಾಷ್ಟ್ರದ ಪಿತಾಮಹರಾಗಿದ್ದಾರೆ ಎಂದು ಬ್ಯಾಂಕರ್ ಮತ್ತು ಗಾಯಕಿ ಅಮೃತಾ ಅಣಕು ನ್ಯಾಯಾಲಯದ(ಅಭಿರೂಪ್ ನ್ಯಾಯಾಲಯ) ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿಯ ಉನ್ನತ ನಾಯಕನ ಪತ್ನಿಯ ಈ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವೆ ಯಶೋಮತಿ ಠಾಕೂರ್ ಅವರು ಕಿಡಿ ಕಾರಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು ಅನುಸರಿಸುತ್ತಿರುವ ಜನರು ಗಾಂಧೀಜಿಯನ್ನು ಮತ್ತೆ ಮತ್ತೆ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳನ್ನು ಪುನರಾವರ್ತಿಸುವ ಮೂಲಕ ಮತ್ತು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳನ್ನು ನಿಂದಿಸುವ ಮೂಲಕ ಇತಿಹಾಸವನ್ನು ಬದಲಾಯಿಸುವ ಗೀಳು ಹೊಂದಿರುವ ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ” ಎಂದು ಠಾಕೂರ್ ಹೇಳಿದ್ದಾರೆ.
ಅಣಕು ನ್ಯಾಯಾಲಯದ ಸಂದರ್ಶನದಲ್ಲಿಅಮೃತಾ ಅವರು ಕಳೆದ ವರ್ಷ ಮೋದಿಯವರನ್ನು ರಾಷ್ಟ್ರಪಿತ ಎಂದು ಕರೆದ ಬಗ್ಗೆ ಕೇಳಲಾಯಿತು. ಮೋದಿಯವರು ರಾಷ್ಟ್ರಪಿತರೇ, ಹಾಗಾದರೆ ಮಹಾತ್ಮ ಗಾಂಧಿ ಯಾರು ಎಂದು ಸಂದರ್ಶಕರು ಆಕೆಯನ್ನು ಕೇಳಿದರು.
ಮಹಾತ್ಮ ಗಾಂಧಿ ದೇಶದ ರಾಷ್ಟ್ರಪಿತ ಮತ್ತು ಮೋದಿ ನವಭಾರತದ ರಾಷ್ಟ್ರಪಿತ ಎಂದು ಅಮೃತಾ ಉತ್ತರಿಸಿ ” ನರೇಂದ್ರ ಮೋದಿ ನವ ಭಾರತದ ರಾಷ್ಟ್ರಪಿತ ಮತ್ತು ಮಹಾತ್ಮ ಗಾಂಧಿ ಹಿಂದಿನ ಯುಗದ ರಾಷ್ಟ್ರಪಿತ, ”ಎಂದು ಉತ್ತರಿಸಿದರು.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಾಡಿದ ಟೀಕೆಗಳ ವಿರುದ್ಧ ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸಿದ ಕೆಲವು ದಿನಗಳ ನಂತರ ಅಮೃತಾ ಅವರ ಹೇಳಿಕೆಗಳು ಬಂದಿವೆ.