ನವದೆಹಲಿ: “ಇದೇ ಮೊದಲ ಬಾರಿಗೆ, ಮೊಬೈಲ್ ಆಧಾರಿತ ಹಣ ಪಾವತಿಯ ಪ್ರಮಾಣ, ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವ ಪ್ರಮಾಣವನ್ನು ಮೀರಿಸಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಭಾರತ, ವಿಶ್ವದಲ್ಲೇ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಆರ್ಥಿಕ ವಲಯದಲ್ಲಿ ತಂತ್ರಜ್ಞಾನದ ಅಳವಡಿಕೆ ಹಾಗೂ ಬೆಳವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ “ಫಿನ್‌ಟೆಕ್’ ಕ್ಷೇತ್ರದ ಸಲಹಾ ಮಂಡಳಿಯ ರೂಪದಲ್ಲಿ ಹೊಸದಾಗಿ ರಚನೆಯಾಗಿರುವ “ಇನ್ಫಿನಿಟಿ ಫೋರಂ’ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರ ಲೋಕಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.
“ನಮ್ಮ ಸರ್ಕಾರ ಜಾರಿಗೊಳಿಸಿದ ನಗದು ರಹಿತ ಪಾವತಿಯ ವ್ಯವಸ್ಥೆಯು ಇಂದು ಗಮನಾರ್ಹವಾಗಿ ಬೆಳೆದು ನಿಂತಿದೆ. ಯಾವುದೇ ಭೌತಿಕ ಶಾಖೆಯಿಲ್ಲದ ಪೂರ್ಣಪ್ರಮಾಣದ ಡಿಜಿಟಲ್ ಬ್ಯಾಂಕುಗಳು ಇಂದು ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಮುಂದಿನ 10 ವರ್ಷಗಳಲ್ಲಿ ಇದೊಂದು ಸಾಮಾನ್ಯ ಸಂಗತಿಯಾಗಬಹುದು” ಎಂದು ಅವರು ಆಶಿಸಿದರು.
ಇದನ್ನೂ ಓದಿ:ಸಂಸದ ತೇಜಸ್ವಿ ಸೂರ್ಯ ಜನತೆಯ ದಾರಿ ತಪ್ಪಿಸುತ್ತಿದ್ದಾರೆ : ಡಾ.ಶಂಕರ್ ಗುಹಾ
ಅಲ್ಲದೆ, “ಈ ಕ್ಷೇತ್ರದಲ್ಲಿ ಉದಯಿಸುವ ಪ್ರತಿಯೊಂದು ಸ್ಟಾರ್ಟಪ್‌ಗ್ಳನ್ನು ದೇಶದ ಪ್ರತಿಯೊಬ್ಬ ನಾಗರಿಕರ ಆರ್ಥಿಕ ಸಬಲೀಕರಣಕ್ಕಾಗಿ ಬಳಕೆಯಾಗುವಂತೆ ರೂಪಿಸಬೇಕಾದ ಅವಶ್ಯಕತೆಯಿದೆ” ಎಂದು ಅಭಿಪ್ರಾಯಪಟ್ಟರು.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಇನ್ಫಿನಿಟಿ ಫೋರಂ, ಸರ್ಕಾರದ ನೀತಿ ನಿರೂಪಣೆ-ಫಿನ್‌ಟೆಕ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು- ಈ ಕ್ಷೇತ್ರದ ಸಹಭಾಗಿ ಸಂಸ್ಥೆಗಳ ನಡುವೆ ಉತ್ತಮ ಅನುಸಂಧಾನ ಸಾಧಿಸುವ ಕೆಲಸ ಮಾಡಲಿದೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.