Advertisement

ಭಾರತಕ್ಕೆ ಲಾಭವೂ ಇದೆ

07:51 AM Jan 06, 2018 | |

ಭಾರತೀಯರ ಅಮೆರಿಕನ್‌ ಡಾಲರ್‌ ಕನಸಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯವಸ್ಥಿವಾಗಿ ಕೊಳ್ಳಿ ಇಡುತ್ತಿದ್ದಾರೆ. ಕಳೆದ ವರ್ಷ ವಿಸಾ ನಿಯಮಗಳನ್ನು ಬಿಗಿಗೊಳಿಸಿ ವಲಸಿಗರಿಗೆ ಕಡಿವಾಣ ಹಾಕಲು ಮುಂದಾಗಿದ್ದ ಟ್ರಂಪ್‌ ಆಡಳಿತ ಇದೀಗ ಎಚ್‌1ಬಿ ವಿಸಾ ನಿಯಮಗಳಿಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಮಂಡಿಸಿರುವ ಈ ಪ್ರಸ್ತಾವಕ್ಕೇನಾದರೂ ಟ್ರಂಪ್‌ ಅಂಕಿತ ಹಾಕಿದರೆ ಮೊದಲ ಹೊಡೆತ ಬೀಳುವುದು ಭಾರತೀಯರ ಮೇಲೆ. ಏಕೆಂದರೆ ಎಚ್‌1ಬಿ ವಿಸಾದ ಸಿಂಹಪಾಲು ಭಾರತೀಯ ಸಂಜಾತರಲ್ಲಿದೆ. ಉಳಿದಂತೆ ಚೀನ ಮತ್ತು ಫಿಲಿಪ್ಪೀನ್ಸ್‌ಗೆ ತುಸು ಸಮಸ್ಯೆಯಾಗಬಹುದು. ಒಂದು ಅಂದಾಜಿನ ಪ್ರಕಾರ ಸುಮಾರು ಶೇ. 80 ಎಚ್‌1ಬಿ ವಿಸಾ ಭಾರತೀಯ ಮೂಲದವರ ಬಳಿಯಿದೆ. ಅಂದರೆ ನಿಯಮ ಜಾರಿಗೆ ಬಂದದ್ದೇ ಆದರೆ ಸುಮಾರು ಏಳೂವರೆ ಲಕ್ಷ ಭಾರತೀಯರ ತವರು ದೇಶಕ್ಕೆ ಗಂಟುಮೂಟೆ ಕಟ್ಟಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲೇ “ಅಮೆರಿಕ ಫ‌ಸ್ಟ್‌’ ಎನ್ನುವುದು ಟ್ರಂಪ್‌ ಪ್ರಚಾರದ ಮುಖ್ಯ ವಿಷಯವಾಗಿತ್ತು. ಇದಕ್ಕೆ 

Advertisement

ಅನುಗುಣವಾಗಿ ಅವರು ಹೊಸ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಪ್ರಸ್ತುತ “ಬೈ ಅಮೆರಿಕನ್‌, ಹೈರ್‌ ಅಮೆರಿಕನ್‌’ ನೀತಿ ಘೋಷಿಸಿದ್ದು, ಐಟಿಯಂತಹ ಸೇವಾ ಉದ್ಯಮ ಕ್ಷೇತ್ರದ ನೌಕರಿಯಲ್ಲಿ ಅಮೆರಿಕದವರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಅಮೆರಿಕದ ಮಟ್ಟಿಗೆ ಟ್ರಂಪ್‌ ನಿರ್ಧಾರ ಸರಿ ಎಂದು ಕಂಡುಬಂದರೂ ದಶಕಗಳಿಂದ ಅಲ್ಲಿ ಬದುಕು ಕಟ್ಟಿಕೊಂಡು ದೇಶದ ಅಭಿವೃದ್ಧಿಗೆ ತಮ್ಮ ಕಾಣಿಕೆಯನ್ನೂ ನೀಡಿರುವವರು ಒಂದು ನಿಯಮದಿಂದಾಗಿ ನಿರಾಶ್ರಿತರಂತಾಗುವ ಸ್ಥಿತಿಯನ್ನು ಊಹಿಸುವಾಗ ಕಳವಳವಾಗುವುದು ಸಹಜ. 

ಎಚ್‌1ಬಿ ವಿಸಾವನ್ನು ಮೂರು ವರ್ಷದ ಅವಧಿಗೆ ನೀಡಲಾಗುತ್ತದೆ. ಮತ್ತೆ ಮೂರು ವರ್ಷದ ಅವಧಿಗೆ ವಿಸ್ತರಿಸುವ ಅವಕಾಶವಿದೆ. ಅನಂತರ ಅವರು ಸ್ವದೇಶಕ್ಕೆ ವಾಪಸಾಗಬೇಕಾಗುತ್ತದೆ. ಈ ನಡುವೆ ಗ್ರೀನ್‌ಕಾರ್ಡ್‌ ಗಾಗಿ ಸಲ್ಲಿಸಿದ ಅರ್ಜಿ ಅಂಗೀಕರಿಸಲ್ಪಟ್ಟಿದ್ದರೆ ವಿಸಾ ವಿಸ್ತರಣೆ ಮಾಡಿಕೊಂಡು ಅಮೆರಿಕದಲ್ಲಿರಬಹುದು. ಗಂಡ ಅಥವಾ ಹೆಂಡತಿ ಪೈಕಿ ಯಾರಾದರೊಬ್ಬರ ಬಳಿ ಎಚ್‌1ಬಿ ವಿಸಾ ಇದ್ದರೆ ಅವರನ್ನು ಅವಲಂಬಿಸಿ ಇನ್ನೊಬ್ಬರು ಇರಲು ಅವಕಾಶವಿದೆ. ಇದೀಗ ಟ್ರಂಪ್‌ ರದ್ದುಪಡಿಸಲು ಮುಂದಾಗಿರುವುದು ಈ ನಿಯಮವನ್ನು. ಅಮೆರಿಕದಲ್ಲಿರುವ ಶೇ. 40ಕ್ಕಿಂತಲೂ ಹೆಚ್ಚು ಭಾರತೀಯ ಮೂಲದವರಿಗೆ ಇನ್ನೂ ಗ್ರೀನ್‌ ಕಾರ್ಡ್‌ ಸಿಕ್ಕಿಲ್ಲ. ಇವರೆಲ್ಲ ನಿಯಮ ಜಾರಿಗೆ ಬಂದ ಮರುದಿನವೇ ವಿಮಾನ ಏರಬೇಕಾಗುತ್ತದೆ. ಹೀಗಾಗಿ ಅನೇಕ ಮಂದಿ ಈಗಾಗಲೇ ಬೇರೆ ದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಪಕ್ಕದಲ್ಲೇ ಇರುವ ಕೆನಡ ಈಗ ಸಂತ್ರಸ್ತರಾಗಬಹುದಾದವರ ನೆಚ್ಚಿನ ತಾಣವಾಗಿದೆ.  ಹಾಗೆಂದು ಎಚ್‌1ಬಿ ವಿಸಾ ನಿಯಮ ಬದಲಾದ ಕೂಡಲೇ ಅಮೆರಿಕಕ್ಕೆ ಭಾರೀ ಲಾಭವಾಗುತ್ತದೆ ಮತ್ತು ಭಾರತ ಕಂಗಾಲಾಗುತ್ತದೆ ಎಂದಲ್ಲ. ತಜ್ಞರ ಪ್ರಕಾರ ಇದರಿಂದ ಅಮೆರಿಕಕ್ಕೆ ಲಾಭಕ್ಕಿಂತ ಹೆಚ್ಚು ಹಾನಿಯಾಗಲಿದೆ ಹಾಗೂ ಭಾರತಕ್ಕೆ ಪರೋಕ್ಷವಾಗಿ ಯಾದರೂ ಲಾಭವಾಗಲಿದೆ. ಭಾರೀ ಸಂಖ್ಯೆಯಲ್ಲಿ ಪ್ರತಿಭಾವಂತರು ದೇಶಕ್ಕೆ ವಾಪಸಾಗುವುದರಿಂದ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಪ್ರಯೋಜನವಾಗಲಿದೆ. ಅಂತೆಯೇ ವಾಪಸು ಬಂದವರು ಹೊಸ ಸ್ಟಾರ್ಟ್‌ ಅಪ್‌ಗ್ಳಲ್ಲಿ ಬಂಡವಾಳ ಹೂಡಿದರೆ ಉದ್ಯೋಗ ಸೃಷ್ಟಿಯಾಗಲಿದೆ. ಹೀಗಾಗಿ ಟ್ರಂಪ್‌ ನಿರ್ಧಾರದಿಂದ ಆಗುವ ಪರಿಣಾಮ ತಾತ್ಕಾಲಿಕ ಎನ್ನುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅಮೆರಿಕದ ಹಲವು ಸಂಸದರು ಅದರಲ್ಲೂ ಭಾರತೀಯ ಮೂಲದ ತುಳಸಿ ಗಬ್ಬರ್ಡ್‌, ರಾಜ ಕೃಷ್ಣಮೂರ್ತಿ, ರೋ ಖನ್ನ ಮತ್ತಿತರರು ಟ್ರಂಪ್‌ ನೀತಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಎಚ್‌1ಬಿ ವಿಸಾ ನಿಯಮ ಜಾರಿಗೆ ಬಂದರೆ ಕುಟುಂಬಗಳು ಛಿದ್ರವಾಗು ವುದಲ್ಲದೆ ಭಾರೀ ಸಂಖ್ಯೆಯಲ್ಲಿ ಪ್ರತಿಭಾ ಪಲಾಯನವಾಗಲಿದೆ. ಭಾರತದ ಜತೆಗಿನ ಬಾಂಧವ್ಯದ ಮೇಲೂ ವ್ಯತಿರಿಕ್ತ ಪರಿಣಾಮವಾಗ ಬಹುದು ಎಂದು ಗಬ್ಬರ್ಡ್‌ ಎಚ್ಚರಿಸಿದ್ದಾರೆ. ಅಮೆರಿಕದ ಸಣ್ಣ-ಮಧ್ಯಮ ಸ್ತರದ ಸೇವಾ ಉದ್ಯಮ ಮುಖ್ಯವಾಗಿ ಎಚ್‌1ಬಿ ವಿಸಾ ಮೂಲಕ ಬಂದಿರುವ ಪ್ರತಿಭಾ ವಂತರನ್ನು ಅವಲಂಬಿಸಿದೆ. ಇವರನ್ನು ಓಡಿಸಿದರೆ ಈ ಉದ್ಯಮಗಳೆಲ್ಲ ನೆಲಕಚ್ಚಲಿವೆ. ಇದರಿಂದ ಹೊರಗುತ್ತಿಗೆ ನೀಡುವ ಅನಿವಾರ್ಯತೆ ಹೆಚ್ಚಿ ಅದಕ್ಕೆ ತಕ್ಕಂತೆ ಬಂಡವಾಳದ ಹೊರಹರಿಯುವಿಕೆ ಹೆಚ್ಚಾಗಲಿದೆ ಎನ್ನುವ ಕಳವಳ ಅಮೆರಿಕದ ಆರ್ಥಿಕ ತಜ್ಞರದ್ದು.  

Advertisement

Udayavani is now on Telegram. Click here to join our channel and stay updated with the latest news.

Next