Advertisement

ಬಿಸಿಲಬ್ಬರಕ್ಕೆ ಐವರ ಸಾವು

02:47 AM Mar 31, 2017 | Karthik A |

ಹೊಸದಿಲ್ಲಿ: ಹಿಂದೆಂದೂ ಕಂಡರಿಯದಂತಹ, ನೆತ್ತಿ ಸುಡುವ, ಅಕ್ಷರಶಃ ಬೆವರಿಳಿಸುವ ಬಿಸಿಲು!  ಭಾರೀ ಬಿಸಿಲಿಗೆ ದಕ್ಷಿಣ, ಕೇಂದ್ರ ಮತ್ತು ಉತ್ತರದ ಹಲವು ರಾಜ್ಯಗಳು ಬೆಚ್ಚಿ ಬಿದ್ದಿವೆ. ಬಿಹಾರ ಹಾಗೂ ಮಹಾರಾಷ್ಟ್ರಗಳಲ್ಲಿ ಗರಿಷ್ಠ 46.5 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ತಾಪ ಕಂಡುಬಂದಿದೆ. ಈ ಬಿಸಿಲಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಐದು ಮಂದಿ ಅಸುನೀಗಿದ್ದಾರೆ.

Advertisement

ಮಹಾರಾಷ್ಟ್ರದ ಅಕೋಲಾ (44.1 ಡಿ.ಸೆ), ರಾಜಸ್ಥಾನದ ಬರ್ಮೇರ್‌ (43.4 ಡಿ.ಸೆ), ಹರ್ಯಾಣದ ನನೌìಲ್‌ (42 ಡಿ.ಸೆ)ಉಷ್ಣಾಂಶ ಹಾಗೂ ಪಂಜಾಬ್‌ನ ಲೂಧಿಯಾನದಲ್ಲಿ ಸಾಮಾನ್ಯಕ್ಕಿಂತ 7 ಡಿಗ್ರಿ ಹೆಚ್ಚು (36.7 ಡಿ.ಸೆ.) ತಾಪಮಾನ ದಾಖಲಾಗಿದೆ. ಇನ್ನೊಂದೆಡೆ ಉತ್ತರ ಪ್ರದೇಶ ಅತಿ ಹೆಚ್ಚು ಕನಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿದ್ದು, ರಾಜ್ಯದ ವಾರಣಾಸಿ, ಅಲಹಾಬಾದ್‌, ಹಮೀರ್‌ಪುರ್‌ ಮತ್ತು ಆಗ್ರಾದಲ್ಲಿ ಕನಿಷ್ಠ 40 ಡಿ.ಸೆ. ತಾಪಮಾನ ದಾಖಲಾಗಿದೆ. ಇತ್ತ ರಾಷ್ಟ್ರರಾಜಧಾನಿ ದಿಲ್ಲಿಯಲ್ಲೂ ಪರಿಸ್ಥಿತಿ ಬಿಸಿಯಾಗಿದ್ದು, ಸಹಜಕ್ಕಿಂತಲೂ ಆರು ಅಂಶಗಳಷ್ಟು ಬಿಸಿಲು ಹೆಚ್ಚಿ, 38.2 ಡಿ.ಸೆ. ತಲುಪಿದೆ. ಅಲ್ಲದೆ ಡೆಹ್ರಾಡೂನ್‌ ಮತ್ತು ಶ್ರೀನಗರದಲ್ಲೂ ವಾಡಿಕೆಗಿಂತ ಹೆಚ್ಚು ಬಿಸಿಲು ದಾಖಲಾಗಿದೆ. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಉರಿ ಬಿಸಿಲಿನೊಂದಿಗೆ ಬಿಸಿ ಗಾಳಿ ಕೂಡ ಬೀಸುತ್ತಿರುವುದು ವರದಿಯಾಗಿದೆ.


ಉತ್ತರದಲ್ಲಿ ತನ್ನ ಪ್ರತಾಪ ತೋರುತ್ತಿರುವ ಸೂರ್ಯ, ದಕ್ಷಿಣ ಭಾರತದಲ್ಲೂ ಕೆಂಡಾಮಂಡಲವಾಗಿದ್ದಾನೆ. ಆಂಧ್ರಪ್ರದೇಶದ ರಾಯಲ್‌ಸೀಮಾ ಭಾಗದಲ್ಲಿ ಕೆಲ ದಿನಗಳಿಂದ ಉಷ್ಣಾಂಶ 40 ಡಿ.ಸೆ.ಗಿಂತಲೂ ಹೆಚ್ಚಿದೆ. ಎಂದು ಹವಾಮಾನ ಇಲಾಖೆ ತಿಳಿಸಿದೆ. ‘ಬಿಹಾರದ ಸಹ್ಯಾದ್ರಿ ಗಿರಿ ಶ್ರೇಣಿಗಳ ಅಕ್ಕಪಕ್ಕದ ಗ್ರಾಮಗಳಲ್ಲಿ 46.5 ಡಿ.ಸೆ ತಾಪಮಾನ ದಾಖಲಾಗಿರುವುದು ಅಚ್ಚರಿ ಮೂಡಿಸಿದೆ,” ಎಂದು ಮುಂಬಯಿಯ ಕೊಲಾಬಾದ ಪ್ರಾದೇಶಿಕ ಹವಾಮಾನ ಇಲಾಖೆಯ ವಿಭಾಗೀಯ ಅಧಿಕಾರಿ ಎಸ್‌.ಜಿ. ಕಾಂಬ್ಳೆ ತಿಳಿಸಿದ್ದಾರೆ.

ಮೇ ತನಕ ಇದೇ ಸ್ಥಿತಿ!
ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಬಿಸಿ ಗಾಳಿ, ಮೇ ತಿಂಗಳ ಮಧ್ಯ ಭಾಗದವರೆಗೂ ಮುಂದುವರಿಯಲಿದೆ. ದಿಲ್ಲಿಯಲ್ಲಿ ಬಿಸಿ ಗಾಳಿಯ ಭಯವಿಲ್ಲದಿದ್ದರೂ ಮೇ ಅಂತ್ಯದವರೆಗೂ ತಾಪಮಾನ ಹೆಚ್ಚುತ್ತಲೇ ಸಾಗಲಿದೆ. ಮೇ ತಿಂಗಳಲ್ಲಿ ಬಹುತೇಕ ನಗರಗಳ ಗರಿಷ್ಠ ಉಷ್ಣಾಂಶ 40 ಡಿ.ಸೆ. ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next