Advertisement

ಏಷ್ಯಾ ಕಪ್‌ ಹಾಕಿ: ಫೈನಲ್‌ ಸನಿಹ ಭಾರತ; ಇಂದು ದಕ್ಷಿಣ ಕೊರಿಯಾ ಎದುರಾಳಿ

11:24 PM May 30, 2022 | Team Udayavani |

ಜಕಾರ್ತಾ: ಹಾಲಿ ಚಾಂಪಿಯನ್‌ ಭಾರತ ಏಷ್ಯಾ ಕಪ್‌ ಫೈನಲ್‌ ಹಾದಿಯಲ್ಲಿ ಮುನ್ನಡೆದಿದೆ. ಮಂಗಳವಾರದ ಸೂಪರ್‌-4 ಹಂತದ ಕೊನೆಯ ಲೀಗ್‌ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದ್ದು, ಇಲ್ಲಿ ಗೆದ್ದರೆ ಪ್ರಶಸ್ತಿ ಸುತ್ತಿಗೆ ನೆಗೆಯಲಿದೆ.

Advertisement

ಆದರೆ ಉಳಿದ ತಂಡಗಳ ಫ‌ಲಿತಾಂಶವನ್ನು ಗಮನಿಸುವಾಗ ಭಾರತ ಈಗಾಗಲೇ ಒಂದು ಕಾಲನ್ನು ಫೈನಲ್‌ಗೆ ಇರಿಸಿಯಾಗಿದೆ. ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ಸೇಡು ತೀರಿಸಿಕೊಂಡ ಭಾರತ, ಬಳಿಕ ರವಿವಾರ ಮಲೇಷ್ಯಾ ವಿರುದ್ಧ 3-3 ಡ್ರಾ ಸಾಧಿಸಿತ್ತು.
ಸದ್ಯ ಸೂಪರ್‌-4 ಅಂಕಪಟ್ಟಿಯಲ್ಲಿ ದಕ್ಷಿಣ ಕೊರಿಯಾ +2 ಗೋಲ್‌ ವ್ಯತ್ಯಾಸದೊಂದಿಗೆ ಅಗ್ರಸ್ಥಾನದಲ್ಲಿದೆ (5-3). ಭಾರತ +1 ಗೋಲ್‌ ಡಿಫ‌ರೆನ್ಸ್‌ ಹೊಂದಿದ್ದು (5-4), ದ್ವಿತೀಯ ಸ್ಥಾನಿಯಾಗಿದೆ. ಇಲ್ಲಿ ಅಗ್ರಸ್ಥಾನ ಪಡೆದ ತಂಡಗಳೆರಡು ಪ್ರಶಸ್ತಿಗಾಗಿ ಸೆಣಸಲಿವೆ.

ಎರಡೂ ಪಂದ್ಯಗಳಲ್ಲಿ ಸೋಲುಂಡ ಜಪಾನ್‌ ಈಗಾಗಲೇ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಮಲೇಷ್ಯಾ ಮುಂದೆ ಕ್ಷೀಣ ಅವಕಾಶವೊಂದಿದೆ. ಅದು ಜಪಾನ್‌ ವಿರುದ್ಧ ಕನಿಷ್ಠ 2 ಗೋಲುಗಳ ಅಂತರದಿಂದ ಗೆದ್ದರೆ, ಭಾರತ-ದಕ್ಷಿಣ ಕೊರಿಯಾ ಪಂದ್ಯ ಡ್ರಾಗೊಂಡರೆ ಆಗ ಲೆಕ್ಕಾಚಾರ ಬದಲಾ ಗಲಿದೆ. ಹೀಗಾಗಿ ದಕ್ಷಿಣ ಕೊರಿಯಾ ವಿರುದ್ಧದ ಮೇಲಾಟದಲ್ಲಿ ಭಾರತ ಗೆದ್ದು ಬರುವುದು ಕ್ಷೇಮ.

ದಕ್ಷಿಣ ಕೊರಿಯಾ ಸೂಪರ್‌-4 ಹಂತದಲ್ಲಿ ಮಲೇಷ್ಯಾ ವಿರುದ್ಧ 2-2 ಡ್ರಾ ಸಾಧಿಸಿದರೆ, ಜಪಾನ್‌ ಎದುರು 3-1ರಿಂದ ಗೆದ್ದು ಬಂದಿದೆ.

15 ಗೋಲುಗಳ ಸವಾಲು
ಲೀಗ್‌ ಹಂತದಲ್ಲಿ ಆತಿಥೇಯ ಇಂಡೋನೇಷ್ಯಾ ವಿರುದ್ಧ 15 ಗೋಲುಗಳ ಅಂತರದಿಂದ ಮಣಿಸ ಬೇಕಾದ ಅತ್ಯಂತ ಕಠಿನ ಸವಾಲು ಪಡೆದ ಭಾರತ ಇದರಲ್ಲಿ ತನ್ನ ಪರಾಕ್ರಮ ಮೆರೆದುದನ್ನು ಮರೆಯುವಂತಿಲ್ಲ. ಈ ಸವಾಲವನ್ನು ಸ್ವೀಕರಿಸಿದ ಭಾರತ 16-0 ಗೋಲುಗಳ ಪ್ರಚಂಡ ಗೆಲುವು ಸಾಧಿಸಿತ್ತು. ಇತ್ತೀಚಿನ ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ದಾಖಲಾದ ದೊಡ್ಡ ಅಂತರದ ಗೆಲುವು ಇದಾಗಿದೆ.

Advertisement

ರವಿವಾರ ಮಲೇಷ್ಯಾ ವಿರುದ್ಧವೂ ಭಾರತದ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು. 2-0 ಹಿನ್ನಡೆ ಬಳಿಕ 3-2 ಲೀಡ್‌ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಾಝಿ ಇಬ್ರಾಹಿಂ ಬಾರಿಸಿದ ಗೋಲು ಮತ್ತು ಅವರ ಹ್ಯಾಟ್ರಿಕ್‌ ಸಾಧನೆಯಿಂದಾಗಿ ಭಾರತ ಗೆಲುವಿನಿಂದ ವಂಚಿತವಾಗಿತ್ತು.

ಫಾರ್ವರ್ಡ್‌ ಬಲಿಷ್ಠ
ಭಾರತದ ಫಾರ್ವರ್ಡ್‌ ವಿಭಾಗ ಅತ್ಯಂತ ಬಲಿಷ್ಠವಾಗಿ ಗೋಚರಿಸುತ್ತಿದೆ. ಉತ್ತಮ್‌ ಸಿಂಗ್‌, ಎಸ್‌.ವಿ. ಸುನೀಲ್‌, ಪವನ್‌ ರಾಜ್‌ಬಾರ್‌ ಮೊದಲಾದವರು ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಗೋಲ್‌ಪೋಸ್ಟ್‌ ನಲ್ಲಿ ಸೂರಜ್‌ ಕರ್ಕೇರ ಗೋಡೆಯಂತೆ ನಿಂತು, ಎದುರಾಳಿಯ ಬಹಳಷ್ಟು ಅವಕಾಶಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಂಡದ ಮಿಡ್‌ಫಿಲ್ಡ್‌ ವಿಭಾಗ ಈವರೆಗೆ ಯಶಸ್ಸು ಕಂಡಿದೆ. ಆದರೆ ಬೀರೇಂದ್ರ ಲಾಕ್ರಾ ನೇತೃತ್ವದ ಬ್ಯಾಕ್‌-ಲೈನ್‌ ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ. ಮಲೇಷ್ಯಾಕ್ಕೆ ಅನಗತ್ಯ ಪೆನಾಲ್ಟಿ ಕಾರ್ನರ್‌ ನೀಡಿದ್ದು ಈ ವಿಭಾಗದ ವೈಫ‌ಲ್ಯಕ್ಕೆ ಸಾಕ್ಷಿ. ದಕ್ಷಿಣ ಕೊರಿಯಾ ವಿರುದ್ಧ ಎಲ್ಲರೂ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next