ನವದೆಹಲಿ: ನೂತನ ರೂಪಾಂತರಿತ ಕೋವಿಡ್ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬ್ರಿಟನ್ ನಿಂದ ಭಾರತಕ್ಕೆ ಆಗಮಿಸುವ ವಿಮಾನ ಸಂಚಾರದ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಿರುವುದಾಗಿ ಬುಧವಾರ(ಡಿಸೆಂಬರ್ 30, 2020) ಕೇಂದ್ರ ಸರ್ಕಾರ ತಿಳಿಸಿದೆ.
ಭಾರತದಿಂದ ಬ್ರಿಟನ್ ಗೆ ಸಂಚರಿಸುವ ವಿಮಾನ ಯಾನವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದ ದಿನಾಂಕವನ್ನು ಇದೀಗ ಜನವರಿಗೆ (2021) 7ರವರೆಗೆ ವಿಸ್ತರಿಸಲು ನಿರ್ಧಾರ ತೆಗೆದುಕೊಂಡಿರುವುದಾಗಿ ಭಾರತ ಸರ್ಕಾರ ಹೇಳಿದೆ.
ಬ್ರಿಟನ್ ನಲ್ಲಿ ರೂಪಾಂತರಿತ ಕೋವಿಡ್ ವೈರಸ್ ಪತ್ತೆಯಾದ ನಂತರ ಭಾರತ ಡಿಸೆಂಬರ್ 23ರಿಂದ 31ರವರೆಗೆ ಬ್ರಿಟನ್ ವಿಮಾನ ಸಂಚಾರವನ್ನು ನಿಷೇಧಿಸಿತ್ತು.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಬ್ರಿಟನ್ ನಿಂದ ಭಾರತಕ್ಕೆ ಆಗಮಿಸಿದ್ದ 20 ಮಂದಿಗೆ ನೂತನ ರೂಪಾಂತರಿತ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದೆ. ಮಂಗಳವಾರ ಆರು ಮಂದಿಯಲ್ಲಿ ನೂತನ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಅವರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:LIVE: ಗ್ರಾ.ಪಂ ಫಲಿತಾಂಶ: ಸಮಬಲದ ಹೋರಾಟ: ಲಾಟರಿ ಮೂಲಕ ಆಯ್ಕೆಯಾದ ಅಭ್ಯರ್ಥಿ
ಅಲ್ಲದೇ ಬ್ರಿಟನ್ ನಿಂದ ಆಗಮಿಸಿದ್ದವರ ಸಹ ಪ್ರಯಾಣಿಕರು, ಕುಟುಂಬದ ಸಂಪರ್ಕಿತರು ಹಾಗೂ ಇತರರನ್ನು ಕೂಡಾ ಪತ್ತೆ ಹಚ್ಚಲಾಗುತ್ತಿದೆ. ನೂತನ ರೂಪಾಂತರಿತ ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.