ಮಾಂಗ್ ಕಾಕ್: ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ 2023 ಕೂಟದಲ್ಲಿ ಭಾರತ ಎ ತಂಡವು ಫೈನಲ್ ತಲುಪಿದೆ. ವಿಶೇಷವೆಂದರೆ ಇದಕ್ಕಾಗಿ ಭಾರತ ಕೇವಲ ಒಂದು ಪಂದ್ಯ ಮಾತ್ರ ಆಡಿದೆ.
ಶ್ರೀಲಂಕಾ ಎ ತಂಡದ ವಿರುದ್ಧದ ಸೆಮಿ ಫೈನಲ್ ಪಂದ್ಯವೂ ಮಳೆಯಿಂದ ರದ್ದಾದ ಕಾರಣ ಉತ್ತಮ ರನ್ ರೇಟ್ ಹೊಂದಿದ್ದ ಭಾರತವು ಫೈನಲ್ ಗೆ ಅರ್ಹತೆ ಪಡೆಯಿತು.
ಕೂಟದ ಮೊದಲ ಪಂದ್ಯದಲ್ಲಿ ಭಾರತ ತಂಡವು ಹಾಂಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಅಂದು ಶ್ರೇಯಾಂಕಾ ಪಾಟೀಲ್ ಬೌಲಿಂಗ್ ಸಾಧನೆ ಕಾರಣದಿಂದ ಹಾಂಕಾಂಗ್ ಕೇವಲ 34 ರನ್ ಗೆ ಆಲೌಟಾಗಿತ್ತು. ಭಾರತ ತಂಡ ಐದು ಓವರ್ ನಲ್ಲಿ ಗುರಿ ತಲುಪಿತ್ತು. ಈ ಪಂದ್ಯದ ಕಾರಣದಿಂದ ಶ್ವೇತಾ ಸೆಹ್ರಾವತ್ ತಂಡವು +5.425 ನೆಟ್ ರನ್ ರೇಟ್ ಗಳಿಸಿತ್ತು.
ಭಾರತದ ಉಳಿದ ಪಾಕಿಸ್ತಾನ, ನೇಪಾಳ ವಿರುದ್ಧದ ಪಂದ್ಯಗಳು ರದ್ದಾಗಿದ್ದವು. ಸೋಮವಾರ ನಡೆಯಬೇಕಿದ್ದ ಭಾರತ- ಶ್ರೀಲಂಕಾ ನಡುವಿನ ಸೆಮಿ ಫೈನಲ್ ಪಂದ್ಯ ಮಳೆಯ ಕಾರಣದಿಂದ ಇಂದಿಗೆ ಮುಂದೂಡಲಾಗಿತ್ತು. ಇಂದೂ ಮಳೆಯ ಕಾರಣದಿಂದ ಪಂದ್ಯ ರದ್ದಾಗಿದೆ.
8 ಪಂದ್ಯ ರದ್ದು: ಜೂ. 12ರಂದು ಆರಂಭಗೊಂಡ ಈ ಪಂದ್ಯಾವಳಿ ಕಿರಿಯ ಕ್ರಿಕೆಟಿಗರ ಅಂತಾರಾಷ್ಟ್ರೀಯ ಅನುಭವವನ್ನು ಹೆಚ್ಚಿಸಲು ನೆರವಾಗಬೇಕಿತ್ತು. ಆದರೆ ಮೊದಲೆರಡು ದಿನದ 4 ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಮಳೆಯಿಂದ ರದ್ದಾದವು. ಮಲೇಷ್ಯಾ-ಯುಎಇ ನಡುವಿನ ಪಂದ್ಯ 5 ಓವರ್‌ಗಳಿಗೆ ಸೀಮಿತಗೊಂಡಿತು.