ಆಡಿಲೇಡ್ : ಟಿ20 ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಕಾದಾಟದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ ಕಾದಾಡಲಿದ್ದು ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಏಕದಿನ ವಿಶ್ವಕಪ್ ಚಾಂಪಿಯನ್ ಖ್ಯಾತಿಯ, ಕೂಟದ ಬಲಿಷ್ಠ ತಂಡಗಳಲ್ಲೊಂದಾದ ಇಂಗ್ಲೆಂಡ್ ತಂಡವನ್ನು ರೋಹಿತ್ ಪಡೆ ಎದುರಿಸಲಿದ್ದು, ತನ್ನ 3ನೇ ಟಿ20 ವಿಶ್ವಕಪ್ ಫೈನಲ್ ಗುರಿಯನ್ನು ಸಾಕಾರಗೊಳಿಸಬೇಕಿದೆ.
ಇದೀಗ ವಿಶ್ವ ಕ್ರಿಕೆಟ್ ಪ್ರೇಮಿಗಳ ಚಿತ್ತ ಆಡಿಲೇಡ್‍ನತ್ತ ನೆಟ್ಟಿದೆ. ರೋಹಿತ್ ತಂಡ ಯಾವ ರೀತಿ ಬಟ್ಲರ್ ಪಡೆಯ ಮೇಲೆ ಹಿಡಿತ ಸಾಧಿಸಲಿದೆ ಎಂದು ಕಾದುನೋಡಬೇಕಾಗಿದೆ.
ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಮುಂದಿನ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೆಣೆಸಲಿದೆ. ಹಾಗಾಗಿ ಇಂದಿನ ಪಂದ್ಯ ತುಂಬಾ ರೋಚಕವಾಗಲಿದೆ.
Related Articles
ಈವರೆಗಿನ ಟಿ20 ವಿಶ್ವಕಪ್ ಇತಿಹಾಸವನ್ನು ಅವಲೋಕಿಸುವಾಗ ಭಾರತ, ಇಂಗ್ಲೆಂಡ್ ಸಮಬಲದ ಸಾಧನೆ ದಾಖಲಿಸಿರುವುದನ್ನು ಮರೆಯುವಂತಿಲ್ಲ. ಇತ್ತಂಡಗಳು ಒಮ್ಮೆ ಚಾಂಪಿಯನ್ ಆಗಿದ್ದು, ಮತ್ತೊಮ್ಮೆ ಫೈನಲ್‌ನಲ್ಲಿ ಮುಗ್ಗರಿಸಿವೆ.
ಭಾರತ 2007ರ ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಮೆರೆದಾಡಿದ ತಂಡ. ಅನಂತರ 2014ರ ಫೈನಲ್‌ನಲ್ಲಿ ಶ್ರೀಲಂಕಾಕ್ಕೆ 6 ವಿಕೆಟ್‌ಗಳಿಂದ ಶರಣಾಯಿತು.
ಇನ್ನೊಂದೆಡೆ ಇಂಗ್ಲೆಂಡ್ 2010ರಲ್ಲಿ ಆಸ್ಟ್ರೇಲಿಯವನ್ನು ಮಣಿಸಿ ಟಿ20 ವಿಶ್ವ ಚಾಂಪಿಯನ್ ಎನಿಸಿತು. ಇದು ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್‌ಗೆ ಒಲಿದ ಮೊದಲ ವಿಶ್ವಕಪ್ ಕೂಡ ಹೌದು. 2016ರಲ್ಲಿ ಮತ್ತೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತಾದರೂ ಅಲ್ಲಿ ವೆಸ್ಟ್ ಇಂಡೀಸ್‌ಗೆ 4 ವಿಕೆಟ್‌ಗಳಿಂದ ತಲೆ ಬಾಗಿತು. 3ನೇ ಫೈನಲ್ ಟಿಕೆಟ್ ಯಾರಿಗೆಂಬುದು ಇಂದಿನ ಪಂದ್ಯದ ಕುತೂಹಲವಾಗಿದೆ.
ಇದನ್ನೂ ಓದಿ : ಚುನಾವಣೆಯಲ್ಲಿ ಸೋಮಶೇಖರ ರೆಡ್ಡಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಕಷ್ಟ: ರಾಮಲಿಂಗಪ್ಪ ಅಸಮಾಧಾನ