ಮೊಹಾಲಿ: ಸಾಂಪ್ರದಾಯಿಕ ಮಾದರಿ ಟೆಸ್ಟ್, 50 ಓವರ್ ಗಳ ಏಕದಿನ ಕ್ರಿಕೆಟ್ ಮತ್ತು ಆಧುನಿಕ ಚುಟುಕು ಮಾದರಿ ಟಿ20 ಕ್ರಿಕೆಟ್… ಹೀಗೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ಪುರುಷರ ತಂಡ ಇದೀಗ ಅಗ್ರ ಶ್ರೇಯಾಂಕದಲ್ಲಿದೆ. ಟೆಸ್ಟ್ ಮತ್ತು ಟಿ20 ಯಲ್ಲಿ ಮೊದಲ ರ್ಯಾಂಕ್ ಹೊಂದಿದ್ದ ಭಾರತವು ಶುಕ್ರವಾರ ರಾತ್ರಿ ಏಕದಿನ ಮಾದರಿಯಲ್ಲಿಯೂ ಮೊದಲ ಸ್ಥಾನಕ್ಕೇರಿದೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಭಾರತ ತಂಡ ಐಸಿಸಿ ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆದಿದೆ. ಈ ಮೂಲಕ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ. ಭಾರತ ಸದ್ಯ 116 ಅಂಕ ಹೊಂದಿದ್ದರೆ, ಪಾಕ್ 115 ಅಂಕಗಳನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 11 ಅಂಕಗಳನ್ನು ಹೊಂದಿದೆ.
ಆಸೀಸ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದರೆ ಭಾರತ ನಂಬರ್ ಒನ್ ದೇಶವಾಗಿ ವಿಶ್ವಕಪ್ ಪ್ರವೇಶಿಸಲಿದೆ. ಒಂದು ವೇಳೆ ಸರಣಿಯ ಉಳಿದೆರಡು ಪಂದ್ಯ ಸೋತರೆ ಪಾಕಿಸ್ತಾನ ಮತ್ತೆ ಅಗ್ರ ಶ್ರೇಯಾಂಕ ಪಡೆಯಲಿದೆ.
ಟೆಸ್ಟ್ ಪಟ್ಟಿಯಲ್ಲಿ 118 ಅಂಕಗಳೊಂದಿಗೆ ಭಾರತ ಮೊದಲ ಸ್ಥಾನಲ್ಲಿದೆ. ಅಷ್ಟೇ ಅಂಕ ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನಿಯಾಗಿದೆ. ಮೂರನೇ ಸ್ಥಾನದಲ್ಲಿ 115 ಅಂಕ ಹೊಂದಿರುವ ಇಂಗ್ಲೆಂಡ್ ತಂಡವಿದೆ.
ಟಿ20 ರ್ಯಾಂಕಿಂಗ್ ನಲ್ಲಿ ಭಾರತವು 264 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 261 ಅಂಕ ಹೊಂದಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದ್ದರೆ, 254 ಅಂಕ ಹೊಂದಿರುವ ಪಾಕಿಸ್ತಾನ ಮೂರನೇ ರ್ಯಾಂಕ್ ನಲ್ಲಿದೆ.