ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಅಕ್ಟೋಬರ್ 30) ತಮ್ಮ 94ನೇ ಆವೃತ್ತಿಯ ‘ಮನ್ ಕಿ ಬಾತ್’ ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳ ಕುರಿತು ಮಾತನಾಡಿ,”ಮೊದಲು ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವು ಸರ್ಕಾರಿ ವ್ಯವಸ್ಥೆಗಳ ವ್ಯಾಪ್ತಿಯಲ್ಲಿ ಸೀಮಿತವಾಗಿತ್ತು. ಈ ಬಾಹ್ಯಾಕಾಶ ಕ್ಷೇತ್ರವನ್ನು ಭಾರತದ ಯುವಕರಿಗೆ, ಭಾರತದ ಖಾಸಗಿ ವಲಯಕ್ಕೆ ತೆರೆದಾಗ, ಅದರಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರಲು ಪ್ರಾರಂಭಿಸಿದವು” ಎಂದರು.
ಇದನ್ನೂ ಓದಿ :ಮನ್ ಕೀ ಬಾತ್: ಕನ್ನಡಿಗನ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಭಾರತಕ್ಕೆ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕ್ರಯೋಜೆನಿಕ್ ತಂತ್ರಜ್ಞಾನವನ್ನು ನಿರಾಕರಿಸಿದ ಸಮಯವೊಂದಿತ್ತು, ಆದರೆ ಭಾರತೀಯ ವಿಜ್ಞಾನಿಗಳು ತಂತ್ರಜ್ಞಾನವನ್ನು ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದರು ಮತ್ತು ಈಗ ಡಜನ್ ಗಟ್ಟಲೆ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ಈ ಉಡಾವಣೆಯೊಂದಿಗೆ, ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಭಾರತವು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ, ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಇಸ್ರೋ ಇತ್ತೀಚೆಗೆ ವಾಣಿಜ್ಯ ಉಪಗ್ರಹವನ್ನು ಉಡಾವಣೆ ಮಾಡಿರುವುದನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು.
ಛತ್ ಪೂಜೆಯ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಭಾರತದ ಸಂಸ್ಕೃತಿ ಮತ್ತು ಹಬ್ಬಗಳಲ್ಲಿ ಪ್ರಕೃತಿಯನ್ನು ಸೇರಿಸುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಪ್ರಧಾನಮಂತ್ರಿಯವರು ಛತ್ ಪೂಜೆಯ ಸಂದರ್ಭವು ನಮ್ಮ ಜೀವನದಲ್ಲಿ ಸೂರ್ಯ ಮತ್ತು ಸೌರಶಕ್ತಿಯ ಪ್ರಾಮುಖ್ಯತೆಯನ್ನು ಹೇಳುತ್ತದೆ ಎಂದರು.
ಸೌರಶಕ್ತಿಯ ಪ್ರಾಮುಖ್ಯತೆ ಮತ್ತು ಗುಜರಾತ್-ಮೊಧೇರಾದಲ್ಲಿ ಸಂಪೂರ್ಣ ಸೌರಶಕ್ತಿ ಚಾಲಿತ ಹಳ್ಳಿಯ ಬಗ್ಗೆ ಮಾತನಾಡಿದರು. ಭಾರತ ಈಗ ಆಧುನಿಕ ವಿಜ್ಞಾನದಲ್ಲಿ ತನ್ನ ಸಾಂಪ್ರದಾಯಿಕ ಅನುಭವಗಳನ್ನು ಪರಿಚಯಿಸುತ್ತಿದೆ ಮತ್ತು ಅತಿದೊಡ್ಡ ವಿದ್ಯುತ್ ಉತ್ಪಾದಕರಲ್ಲಿ ಒಂದಾಗಿದೆ. “ಭಾರತದಲ್ಲಿ ಸೌರಗ್ರಾಮಗಳ ನಿರ್ಮಾಣವು ಒಂದು ದೊಡ್ಡ ಸಾಮೂಹಿಕ ಆಂದೋಲನವಾಗುವ ದಿನ ದೂರವಿಲ್ಲ ಮತ್ತು ಮೊಧೇರಾ ಗ್ರಾಮದ ಜನರು ಈಗಾಗಲೇ ಅದನ್ನು ಪ್ರಾರಂಭಿಸಿದ್ದಾರೆ” ಎಂದರು.