Advertisement

T20 match; 3ನೇ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಗೆದ್ದ ಹಾರ್ದಿಕ್‌ ಪಡೆ

12:01 AM Aug 09, 2023 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ಮಂಗಳವಾರದ ಸರಣಿ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ,  ವೆಸ್ಟ್‌ ಇಂಡೀಸ್‌ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದು, ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಸೂರ್ಯಕುಮಾರ್‌ ಯಾದವ್‌ ಅಮೋಘ 83 ರನ್‌ ಗಳಿಸಿ ಗೆಲುವಿಗೆ ನೆರವಾದರು. ಉಳಿದ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದ್ದು, ಎರಡರಲ್ಲೂ ಗೆದ್ದರೆ ಮಾತ್ರ ಭಾರತಕ್ಕೆ ಸರಣಿ ವಶವಾಗಲಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 159 ರನ್‌ ಗಳಿಸಿತ್ತು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ವಿಂಡೀಸ್‌, ನಂತರದಲ್ಲಿ ದಿಢೀರನೇ ಕುಸಿತ ಕಂಡಿತು. ಸ್ಪಿನ್ನರ್‌ ಕುಲದೀಪ್‌ ಯಾದವ್‌ ವಿಂಡೀಸ್‌ ಬ್ಯಾಟಿಗರನ್ನು ಬಹುವಾಗಿ ಕಾಡಿದರು. ಸದ್ಯ ಭಾರತ 2-1ರ ಹಿನ್ನಡೆಯಲ್ಲಿದೆ.

ವಿಂಡೀಸ್‌ನ 159 ರನ್‌ ಗುರಿ ಪಡೆದ ಭಾರತಕ್ಕೆ ಆಘಾತ ಕಾಡಿತು. ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಯಶಸ್ವಿ ಜೈಸ್ವಾಲ್‌, ಮಿಂಚುವಲ್ಲಿ ವಿಫ‌ಲರಾದರು. ಕೇವಲ 1 ರನ್‌ ಗಳಿಸಿ ಔಟಾದರು. ಶುಭಮನ್‌ ಗಿಲ್‌ ಕೂಡ ಈ ಪಂದ್ಯದಲ್ಲಿ ವಿಫ‌ಲಲಾರದು.

ನಂತರ ಬಂದ ಸೂರ್ಯಕುಮಾರ್‌ ಯಾದವ್‌ 44 ಎಸೆತಗಳಲ್ಲಿ 4 ಸಿಕ್ಸರ್‌, 10 ಬೌಂಡರಿಗಳ ಮೂಲಕ 83 ರನ್‌ ಗಳಿಸಿ, ಜೋಸೆಫ್ ಬೌಲಿಂಗ್‌ನಲ್ಲಿ ಔಟಾದರು. ಇನ್ನೊಂದು ಕಡೆ ತಿಲಕ್‌ ವರ್ಮ ಕೂಡ ಗಟ್ಟಿಯಾಗಿ ನಿಂತು ಅಜೇಯ 49 ರನ್‌ ಗಳಿಸಿ ಭಾರತವನ್ನು ಗೆಲುವಿನ ಮೆಟ್ಟಿಲು ಹತ್ತಿಸಿದರು. ಹಾರ್ದಿಕ್‌ ಪಾಂಡ್ಯ 20 ರನ್‌ ಗಳಿಸಿದರು.

ವಿಂಡೀಸ್‌ ಉತ್ತಮ ಆರಂಭ
ಬ್ರ್ಯಾಂಡನ್‌ ಕಿಂಗ್‌ ಮತ್ತು ಕೈಲ್‌ ಮೇಯರ್ ವಿಂಡೀಸಿಗೆ ಉತ್ತಮ ಆರಂಭ ಒದಗಿಸಿದರು. 7.4 ಓವರ್‌ಗಳಿಂದ 55 ರನ್‌ ಒಟ್ಟುಗೂಡಿತು. ಆಗ ಅಕ್ಷರ್‌ ಪಟೇಲ್‌ ಮೊದಲ ಬ್ರೇಕ್‌ ಒದಗಿಸಿದರು. ಮೇಯರ್ 25 ರನ್‌ ಗಳಿಸಿ ವಾಪಸಾದರು. 10 ಓವರ್‌ ಅಂತ್ಯಕ್ಕೆ ವಿಂಡೀಸ್‌ ಸ್ಕೋರ್‌ ಒಂದಕ್ಕೆ 73 ರನ್‌ ಆಗಿತ್ತು. ಮತ್ತೂಬ್ಬ ಸ್ಪಿನ್ನರ್‌ ಕುಲದೀಪ್‌ 12 ರನ್‌ ಮಾಡಿದ ಜಾನ್ಸನ್‌ ಚಾರ್ಲ್ಸ್‌ ಅವರನ್ನು ಪೆವಿಲಿಯನ್‌ಗೆ ರವಾನಿಸಿದರು.

Advertisement

ಕಳೆದ ಪಂದ್ಯದ ಹೀರೋ ನಿಕೋಲಸ್‌ ಪೂರನನ್‌ ಕ್ರೀಸ್‌ ಇಳಿದವರೇ ಮುನ್ನುಗ್ಗಿ ಬೀಸಲಾರಂಭಿಸಿದರು. ಕುಲದೀಪ್‌ ಮೇಲೆರಗಿ ಹೋಗಿ ಬೌಂಡರಿ, ಸಿಕ್ಸರ್‌ ಸಿಡಿಸತೊಡಗಿದರು. ಆದರೆ ಇವರ ಅಬ್ಬರ 20ರ ಗಡಿ ದಾಟಲಿಲ್ಲ. ಕುಲದೀಪ್‌ ಅವರೇ ಕಂಟಕವಾಗಿ ಕಾಡಿದರು. 28ಕ್ಕೆ 3 ವಿಕೆಟ್‌ ಉರುಳಿಸಿದ ಕುಲದೀಪ್‌ ಅವರೇ ಭಾರತದ ಯಶಸ್ವಿ ಬೌಲರ್‌.

15ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಆರಂಭಕಾರ ಬ್ರ್ಯಾಂಡನ್‌ ಕಿಂಗ್‌ ಅವರದು ವಿಂಡೀಸ್‌ ಸರದಿಯ ಸರ್ವಾಧಿಕ ಗಳಿಕೆ. ಅವರು ಎಸೆತಕ್ಕೊಂದರಂತೆ 42 ರನ್‌ ಹೊಡೆದರು(5 ಬೌಂಡರಿ, 1 ಸಿಕ್ಸರ್‌). ನಾಯಕ ರೋವ¾ನ್‌ ಪೊವೆಲ್‌ ಅಜೇಯ 40 ರನ್‌ ಬಾರಿಸಿ ತಂಡದ ಮೊತ್ತವನ್ನು 160ರ ಸಮೀಪ ಕೊಂಡೊಯ್ದರು(19 ಎಸೆತ, 1 ಬೌಂಡರಿ, 3 ಸಿಕ್ಸರ್‌).

ಸಂಕ್ಷಿಪ್ತ ಸ್ಕೋರ್‌:
ವೆಸ್ಟ್‌ ಇಂಡೀಸ್‌-5 ವಿಕೆಟಿಗೆ 159 (ಕಿಂಗ್‌ 42, ಪೊವೆಲ್‌ ಔಟಾಗದೆ 40, ಮೇಯರ್ 25, ಪೂರಣ್‌ 20, ಕುಲದೀಪ್‌ 28ಕ್ಕೆ 3).ಭಾರತ – 3 ವಿಕೆಟ್‌ಗೆ 164 (ಸೂರ್ಯಕುಮಾರ್‌ ಯಾದವ್‌ 83, ತಿಲಕ್‌ ವರ್ಮ 49. ಜೋಸೆಫ್ 25/2)

Advertisement

Udayavani is now on Telegram. Click here to join our channel and stay updated with the latest news.

Next