ಹೊಸದಿಲ್ಲಿ: ಬೀಜಿಂಗ್‌ನಲ್ಲಿ “ಸೇನೆ ವಾಪಸಾತಿ’ ಮಂತ್ರ. ಎಲ್‌ಎಸಿಯಲ್ಲಿ ಮಿಲಿಟರಿ ಕಾಮಗಾರಿಗಳ ಕುತಂತ್ರ! ಎರಡು ನಾಲಿಗೆಯ ಚೀನ, ಕರಾಕೋರಂ ಪಾಸ್ ಮತ್ತು ಅಕ್ಸಾಯ್‌ಚಿನ್ ಉದ್ದಕ್ಕೂ ಚೀನ ಮಿಲಿಟರಿ ಕಾಮಗಾರಿ ಚಟುವಟಿಕೆ ಹೆಚ್ಚಿಸಿಕೊಂಡು ದ್ವಿಪಕ್ಷೀಯ ಬಾಂಧವ್ಯಕ್ಕೆ ಮತ್ತೂಂದು ದ್ರೋಹ ಬಗೆದಿದೆ. ಕರಾಕೋರಂ ಸಂಪರ್ಕಿಸಲು ಪಿಎಲ್‌ಎ ನಿರ್ಮಿಸುತ್ತಿರುವ ಪರ್ಯಾಯ ರಸ್ತೆ ನಿರ್ಮಾಣ ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿವೆ. ಅಲ್ಲದೆ, ಮಿಲಿಟರಿ ಸಂಬಂಧಿತ ಕಟ್ಟಡಗಳೂ ಅಕ್ಸಾಯ್‌ಚಿನ್ ವಲಯಗಳಲ್ಲಿ ಎದ್ದುನಿಂತಿವೆ.
ರಸ್ತೆಗಳು ಹೇಗಿವೆ?: ಕರಾಕೋರಂಗೆ ಸಂಪರ್ಕಿಸುವ ರಸ್ತೆ 8-10 ಮೀಟರ್‌ನಷ್ಟು ಅಗಲವಿದ್ದು, ಲಾಸಾದಿಂದ ಶೀಘ್ರವಾಗಿ ದೌಲತ್‌ಬೇಗ್ ಓಲ್ಡಿ ವಲಯ ಪ್ರವೇಶಿಸಲು ಇದರಿಂದ ಚೀನ ಸೇನೆಗೆ ಸಾಧ್ಯವಾಗಲಿದೆ. ಈ ಮಾರ್ಗ ಬರೋಬ್ಬರಿ 2 ತಾಸು ಉಳಿಸಲಿದೆ. “ಅಕ್ಸಾಯ್ ಚಿನ್‌ನಲ್ಲೂ ಚೀನ ವಿಸ್ತಾರ ಜಲ್ಲಿ ರಸ್ತೆ ನಿರ್ಮಿಸುತ್ತಿದೆ. ದೊಡ್ಡ ಗಾತ್ರದ ವಾಹನಗಳ ಮೂಲಕ ಬೃಹತ್ ತೂಕದ ಯುದ್ದೋಪಕರಣ ಸಾಗಿಸಲು ಪಿಎಲ್‌ಎ ಇದನ್ನು ಬಳಸಿಕೊಳ್ಳಲಿದೆ’ ಎಂದು ಸೇನೆಯ ಹಿರಿಯ ಕಮಾಂಡರ್ ದೂರಿದ್ದಾರೆ.
ಹೊಸ ಡಿಪೋ: ಗೋಲ್ಮುಡ್‌ನಲ್ಲಿ ಚೀನ ಹೊಸ ಸರಕು ಸಂಗ್ರಾಹಕ ಡಿಪೋ ನಿರ್ಮಿಸುತ್ತಿದೆ. ಡಿಪೋದ ನೆಲದಡಿಯಲ್ಲಿ ಪೆಟ್ರೋಲಿಯಂ, ತೈಲ ಸಂಗ್ರಹಕ್ಕೆ ಸುಸ ಜ್ಜಿತ ಟ್ಯಾಂಕ್ ವ್ಯವಸ್ಥೆಯನ್ನೂ ರೂಪಿಸುತ್ತಿದೆ. ಎಲ್‌ಎಸಿಯಿಂದ ಗೋಲ್ಮುಡ್ 1 ಸಾವಿರ ಕಿ.ಮೀ. ದೂರವಿ ದ್ದರೂ, ಇಲ್ಲಿಂದ ಟಿಬೆಟ್ ರೈಲ್ವೆ ಲ್ಹಾಸಾವನ್ನು ಸಂಪರ್ಕಿಸಲಿದೆ. ಟಿಬೆಟಿಯನ್ ಗಡಿಗೆ ಇಂಧನ ಸಾಗಿಸಲು ಈ ಡಿಪೋ ಬಳಕೆಯಾಗುವ ಸಾಧ್ಯತೆ ಇದೆ.
ಲಂಕಾ ಬಂದರಿನ ಹಿಂದಿದೆ ಚೀನ!: ಪಾಕಿಸ್ಥಾನ ಆಯ್ತು… ಈಗ ಶ್ರೀಲಂಕಾದ ಬೃಹತ್ ಬಂದರು ನಿರ್ಮಾಣದತ್ತ ಚೀನ ಕಣ್ಣನ್ನು ನೆಟ್ಟಿದೆ. ಶ್ರೀಲಂಕಾದ 2ನೇ ಅತಿದೊಡ್ಡ ಬಂದರು “ಹಂಬಾಂ ಟೋಟಾ ಪೋರ್ಟ್’ ಯೋಜನೆ ನಿರ್ಮಾಣದ ಹೊಣೆಯನ್ನು ಚೀನ ಕಮ್ಯುನಿಕೇಶನ್ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (ಸಿಸಿಸಿಸಿ) ವಹಿಸಿಕೊಂಡಿದೆ. ಲಂಕಾದ ಬ್ರೌನ್ಸ್ ಇನ್‌ವೆಸ್ಟ್‌ಮೆಂಟ್ ಜತೆಗೂಡಿ ಈ ಸಂಸ್ಥೆ 1 ಬಿಲಿಯನ್ ಡಾಲ ರ್ ಒಪ್ಪಂದಕ್ಕೆ ಸಹಿಹಾಕಿದೆ. ಹಂಬಾಂ ಟೋಟಾ ಬಂದರು ನಿರ್ಮಾ ಣದಲ್ಲಿ ಚೀನದ ಸಹಭಾಗಿತ್ವಕ್ಕೆ ಅಮೆರಿಕ ಈ ಹಿಂದೆಯೇ ಆಕ್ಷೇಪ ಸೂಚಿಸಿತ್ತು. ಸಿಸಿಸಿಸಿ ಸಂಸ್ಥೆಗೆ ಟ್ರಂಪ್ ಸರಕಾರ ಇತ್ತೀಚೆಗಷ್ಟೇ ನಿರ್ಬಂಧವನ್ನೂ ವಿಧಿಸಿತ್ತು.
ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಭಾರತ ಭವಿಷ್ಯದ ಯುದ್ಧಗಳನ್ನು ಗೆಲ್ಲಲಿದೆ.
ಬಿಪಿನ್ ರಾವತ್, ಸಿಡಿಎಸ್