Advertisement

ಭಿನ್ನಾಭಿಪ್ರಾಯ ಬಗೆಹರಿಸುವಲ್ಲಿ ಭಾರತ-ಚೀನ ಮುತ್ಸದ್ದಿತನ

10:11 AM Jun 02, 2018 | Team Udayavani |

ಸಿಂಗಾಪುರ: ಭಾರತ ಮತ್ತು ಚೀನ ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವಲ್ಲಿ ಹೆಚ್ಚಿನ ಮುತ್ಸದ್ದಿತನವನ್ನು ತೋರಿಸಿವೆ. ಎರಡೂ ರಾಷ್ಟ್ರಗಳು ಪರಸ್ಪರ ನಂಬಿಕೆಯಿಂದ ಹೆಜ್ಜೆಯಿಟ್ಟಲ್ಲಿ, ಏಷ್ಯಾ ಮತ್ತು ಜಗತ್ತಿನ ಇತರ ಭಾಗಗಳಿಗೆ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

Advertisement

ಸಿಂಗಾಪುರದಲ್ಲಿ ವಾರ್ಷಿಕ ಭದ್ರತಾ ಸಮ್ಮೇಳನ ಶಾಂಗ್ರಿ-ಲಾದಲ್ಲಿ ಪ್ರಮುಖ ಭಾಷಣ ಮಾಡಿದ ಅವರು, ಏಷ್ಯಾ ವಲಯದ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ಧೋರಣೆ ಇದ್ದರೆ ಶತಮಾನಗಳ ಕಾಲ ಉತ್ತಮವಾಗಿ ಜೀವಿಸುವ ವಾತಾವರಣ ನಿರ್ಮಿಸಿದಂತಾಗುತ್ತದೆ ಎಂದಿದ್ದಾರೆ. 

ಜಲ, ಸಾಗರ ಮಾರ್ಗಗಳನ್ನು ಮುಕ್ತವಾಗಿ ಬಳಕೆ ಮಾಡುವ ಬಗ್ಗೆ ಭಾರತ ಒಲವು ಹೊಂದಿದೆ. ಅದರಲ್ಲಿ ತಾರತಮ್ಯ ಉಂಟಾಗಲು ಅವಕಾಶ ಇರಬಾರದು. ಇಂಡೋ-ಪೆಸಿಫಿಕ್‌ ವಲಯ ದಲ್ಲಿ ಅದೇ ನಿಯಮ ಜಾರಿಯಾಗಬೇಕು ಎಂದಿದ್ದಾರೆ ಪ್ರಧಾನಿ. ಈ ಮೂಲಕ ಚೀನಗೆ ಪರೋಕ್ಷವಾಗಿ ಚುಚ್ಚಿದ್ದಾರೆ.

ಆಸಿಯಾನ್‌ ಉದಾಹರಣೆ: ವಿವಿಧ ರಾಷ್ಟ್ರಗಳ ನಡುವಿನ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ಆಸಿಯಾನ್‌ ಮತ್ತು ಭಾರತ ನಡುವಿನ ಸಂಬಂಧವನ್ನು ಪ್ರಧಾನಿ ಪ್ರಸ್ತಾವಿಸಿದರು. ಪರಸ್ಪರ ಸ್ಪರ್ಧೆ ಮತ್ತು ಭಿನ್ನಾಭಿಪ್ರಾಯ ಮರೆತು ಒಂದಾಗಿ ಕೆಲಸ ಮಾಡುವುದನ್ನು ಸದ್ಯದ ಪರಿಸ್ಥಿತಿ ಬಯಸುತ್ತಿದೆ. ಇದು ನಮಗೆ ಸಾಧ್ಯವಿದೆ. ಅದಕ್ಕೆ ಆಸಿಯಾನ್‌ ರಾಷ್ಟ್ರಗಳೇ ಉದಾಹರಣೆ ಎಂದರು ಪ್ರಧಾನಿ.

8 ಒಪ್ಪಂದ: ಇದಕ್ಕೂ ಮೊದಲು, ರಕ್ಷಣೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿ ಕುರಿತು ಮಾತುಕತೆ ನಡೆಸಿದ ಮೋದಿ ಮತ್ತು ಸಿಂಗಾಪುರ ಪ್ರಧಾನಿ ಲಿ ಸೈನ್‌ ಲೂಂಗ್‌, 8 ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯ ನಿರ್ಮಾಣ ವಿಚಾರ ಪ್ರಸ್ತಾಪಿಸಿದ ಸಿಂಗಾಪುರ ಪ್ರಧಾನಿ, “ಅದು ಪ್ರಗತಿಯಲ್ಲಿದೆ’ ಎಂದಿದ್ದಾರೆ. ನನ್ಯಾಂಗ್‌ ತಾಂತ್ರಿಕ ವಿವಿ ವಿದ್ಯಾರ್ಥಿಗಳ ಜತೆ ಪಿಎಂ ಮೋದಿ ಸಂವಾದ ನಡೆಸಿದರು. 

Advertisement

ಬುದ್ಧನ ವಿಗ್ರಹ ಉಡುಗೊರೆ
ಪ್ರಧಾನಿ ಮೋದಿ ಅವರು ಸಿಂಗಾಪುರ ಪ್ರಧಾನಿ ಲೂಂಗ್‌ಗೆ ಆರನೇ ಶತಮಾನದ ಬುದ್ಧಗುಪ್ತ ಸ್ಟೆಲೆಯ ಪ್ರತಿರೂಪದ ವಿಗ್ರಹ ಉಡುಗೊರೆಯಾಗಿ ನೀಡಿದ್ದಾರೆ. ಅದರಲ್ಲಿ ಆಗ್ನೇಯ ಏಷ್ಯಾಕ್ಕೆ ಬೌದ್ಧ ಧರ್ಮ ಹೇಗೆ ಪ್ರಚಾರವಾಯಿತು ಎಂಬುದನ್ನು ವಿವರಿಸುವ ಸಂಸ್ಕೃತ ಶ್ಲೋಕಗಳನ್ನು ಕೆತ್ತಲಾಗಿದೆ. ಇದೇ ವೇಳೆ, ಸಿಂಗಾಪುರದ ಮಾಜಿ ರಾಜತಾಂತ್ರಿಕ ಅಧಿಕಾರಿ ಟಾಮಿ ಕೊಹ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next