ಹೈದರಾಬಾದ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಸರಣಿ ಜಯಿಸಿದೆ. ಹೈದರಾಬಾದ್ ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದೇ ವೇಳೆ ಭಾರತ ತಂಡ ಹೊಸ ವಿಶ್ವದಾಖಲೆ ಬರೆಯಿತು. ಈ ಗೆಲುವಿನೊಂದಿಗೆ ಒಂದು ವರ್ಷದಲ್ಲಿ ಅತೀ ಹೆಚ್ಚು ಟಿ20 ಪಂದ್ಯ ಗೆದ್ದ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹಿಂದಿಕ್ಕಿತು. ಈ ಹಿಂದೆ 2021ರಲ್ಲಿ ಪಾಕಿಸ್ಥಾನವು 20 ಟಿ20 ಗೆಲುವಿನ ದಾಖಲೆಯನ್ನು ಹೊಂದಿತ್ತು. ಇದು ಇದುವರೆಗಿನ ಗರಿಷ್ಠವಾಗಿತ್ತು. ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾವು ಈ ವರ್ಷದ 21ನೇ ಟಿ20 ಗೆಲುವನ್ನು ದಾಖಲಿಸಿತು.
ಇದನ್ನೂ ಓದಿ:ಉಡುಪಿ: ಕೆ.ಎಸ್.ಆರ್.ಟಿ.ಸಿ.ಯಿಂದ ದಸರಾ ದರ್ಶನ ಪ್ಯಾಕೇಜ್
ಹೈದರಾಬದ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 186 ರನ್ ಗಳಿಸಿದರೆ, ಟೀಂ ಇಂಡಿಯಾವು 19.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಪಂದ್ಯ ಜಯಿಸಿತು. ಸೂರ್ಯಕುಮಾರ್ ಯಾದವ್ 69 ರನ್ ಮತ್ತು ವಿರಾಟ್ ಕೊಹ್ಲಿ 63 ರನ್ ಗಳಿಸಿದರು. ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಅಕ್ಷರ್ ಪಟೇಲ್ ಸರಣೀ ಶ್ರೇಷ್ಠ ಪ್ರಶಸ್ತಿ ಪಡೆದರು.