ಮುಂಬಯಿ: ಪ್ರಧಾನಿ ಮುಖಕ್ಕಾಗಿ ಇಂಡಿಯಾ ಮೈತ್ರಿಕೂಟದಲ್ಲಿ ಹಲವು ಆಯ್ಕೆಗಳಿವೆ, ಆದರೆ ಎನ್‌ಡಿಎಗೆ ಪ್ರಧಾನಿ ಮೋದಿ ಬಿಟ್ಟರೆ ಬೇರೆ ಯಾರಿದ್ದಾರೆ?” ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ‘ಇಂಡಿಯಾ’ ಮೈತ್ರಿಕೂಟದ ಮೂರನೇ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.
“ಕರ್ನಾಟಕದಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. ಅವರು ಬಜರಂಗ ಬಲಿಯನ್ನು ತರಬೇಕಾಯಿತು. ಆದರೆ ದೇವರು ಅವರನ್ನು ಆಶೀರ್ವದಿಸಲಿಲ್ಲ” ಎಂದರು.
ಬಿಜೆಪಿಯ ಆಡಳಿತವನ್ನು ಬ್ರಿಟಿಷ್ ರಾಜ್‌ಗೆ ಹೋಲಿಸಿ. ಬ್ರಿಟಿಷರೂ ಅಭಿವೃದ್ಧಿ ಕೆಲಸಗಳನ್ನು ಮಾಡಿದರು, ಆದರೆ ನಾವು ಅವರನ್ನು ಪೂರ್ಣ ಬಲದಿಂದ ಓಡಿಸದಿದ್ದರೆ ನಾವು ಸ್ವಾತಂತ್ರ್ಯವನ್ನು ಪಡೆಯುತ್ತಿರಲಿಲ್ಲ, ನಮಗೆ ಅಭಿವೃದ್ಧಿ ಬೇಕು ಆದರೆ ನಮಗೂ ಸ್ವಾತಂತ್ರ್ಯ ಬೇಕು ಎಂದರು.
ಇಂಡಿಯಾ ಮೈತ್ರಿಕೂಟದ ಸಭೆಯ ಕುರಿತು ಮಾತನಾಡಿ, ”ಮುಂಬೈನಲ್ಲಿ ಗುರುವಾರ ಆರಂಭವಾಗಲಿರುವ ಎರಡು ದಿನಗಳ ಸಮಾವೇಶದಲ್ಲಿ 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ” ಎಂದರು.