ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ತನ್ನ ಸೀಟು ಹಂಚಿಕೆ ಸೂತ್ರವನ್ನು ಶನಿವಾರ(ನ2) ಅಂತಿಮಗೊಳಿಸಿದೆ.
ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 43 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ 30 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಆರು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಡಪಕ್ಷಗಳು ನಿರ್ಸಾ, ಸಿಂದ್ರಿ ಮತ್ತು ಬಾಗೋದರ್ ಸೇರಿದಂತೆ ಮೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ.
ಸೀಟು ಹಂಚಿಕೆ ಸೂತ್ರದ ಪ್ರಕಾರ ಧನ್ವಾರ್, ಛತ್ರಾಪುರ ಮತ್ತು ವಿಶ್ರಾಮ್ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ನಡುವೆ ಸೌಹಾರ್ದ ಸ್ಪರ್ಧೆ ನಡೆಯಲಿದೆ. ಧನ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಬಾಬುಲಾಲ್ ಮರಾಂಡಿ ಕಣಕ್ಕಿಳಿದಿದ್ದಾರೆ.
ಧನ್ವಾರ್ ಕ್ಷೇತ್ರದಲ್ಲಿ ಸಿಪಿಐ-ಎಂಎಲ್ನೊಂದಿಗೆ ಸೌಹಾರ್ದ ಸ್ಪರ್ಧೆಗೆ ಜೆಎಂಎಂ ನಿರ್ಧರಿಸಿದೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ವಿನೋದ್ ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದಾಗ್ಯೂ, ಇಂಡಿಯಾ ಮೈತ್ರಿಕೂಟ ತಮ್ಮ ಸೀಟು ಹಂಚಿಕೆ ಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
82 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.