ಪ್ಯಾರಿಸ್ : ಫ್ರಾನ್ಸ್ ದೇಶವನ್ನು ಏಳನೇ ಸ್ಥಾನಕ್ಕೆ ತಳ್ಳುವ ಮೂಲಕ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕತೆಯಾಗಿ ಮೂಡಿ ಬಂದಿರುವುದಾಗಿ ವಿಶ್ವ ಬ್ಯಾಂಕಿನ 2017ರ ಅಂಕಿ ಅಂಶಗಳು ತಿಳಿಸಿವೆ.
ಕಳೆದ ವರ್ಷಾಂತ್ಯ ಭಾರತದ ಜಿಡಿಪಿ 2.597 ಟ್ರಿಲಿಯ ಡಾಲರ್ ಆಗಿತ್ತು; ಫ್ರಾನ್ಸ್ ನದ್ದು 2.582 ಟ್ರಿಲಿಯ ಡಾಲರ್ ಆಗಿತ್ತು. ಭಾರತದ ಆರ್ಥಿಕತೆ 2017ರ ಜುಲೈಯಲ್ಲಿ, ಹಲವು ತ್ತೈಮಾಸಿಕಗಳ ನಿಧಾನಗತಿಯ ಬಳಿಕ, ಅತ್ಯಂತ ಸದೃಢವಾಗಿ ಹೊರಹೊಮ್ಮಿದೆ ಎಂದ ವಿಶ್ವ ಬ್ಯಾಂಕ್ ಹೇಳಿದೆ.
ಪ್ರಕೃತ 1.34 ಬಿಲಿಯ ಜನಸಂಖ್ಯೆ ಹೊಂದಿರುವ ಭಾತದ ವಿಶ್ವದ ಅತ್ಯಧಿಕ ಜನಸಂಖ್ಯೆಯ ದೇಶವಾಗಲು ಸಜ್ಜಾಗಿದೆ. ಫ್ರಾನ್ಸ್ ನ ಜನಸಂಖ್ಯೆ 67 ದಶಲಕ್ಷದಲ್ಲೇ ನಿಂತಿದೆ. ಫ್ರಾನ್ಸ್ ನ ತಲಾ ಜಿಡಿಪಿಯು ಭಾರತಕ್ಕಿಂತ 20 ಪಟ್ಟು ಹೆಚ್ಚಿದೆ ಎಂದು ವಿಶ್ವ ಬ್ಯಾಂಕ್ ಅಂಕಿ ಅಂಶ ತಿಳಿಸಿದೆ.
ಕಳೆದ ವರ್ಷ ಉತ್ಪಾದನೆ ಮತ್ತು ಬಳಕೆದಾರರ ಖರ್ಚು ಭಾರತದ ಆರ್ಥಿಕತೆಯನ್ನು ಬಲಿಷ್ಠ ಗೊಳಿಸಿದ್ದವು; ಆದರೆ ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡಿತು ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಐಎಂಎಫ್ ಅಂದಾಜಿನ ಪ್ರಕಾರ ಭಾರತ ಈ ವರ್ಷ ಶೇ.7.4ರ ಆರ್ಥಿಕಾಭಿವೃದ್ಧಿಯನ್ನು ದಾಖಲಿಸಲಿದೆ. 2019ರಲ್ಲಿ ಇದು ಶೇ.7.8 ಆಗಲಿದೆ.