Advertisement

ಕೊಹ್ಲಿ ಕ್ಯಾಪ್ಟನ್ಸ್ ನಾಕ್ ; ಕೆರಿಬಿಯನ್ನರಿಗೆ ಸೋಲಿನ ಶಾಕ್ : ಭಾರತಕ್ಕೆ ಏಕದಿನ ಸರಣಿ

10:18 AM Dec 23, 2019 | Hari Prasad |

ಕಟಕ್: ಅತ್ಯಂತ ರೋಮಾಂಚಕವಾಗಿ ಸಾಗಿದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಸರ್ವಾಂಗೀಣ ಪ್ರದರ್ಶನವನ್ನು ನೀಡಿದ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು 04 ವಿಕೆಟ್ ಗಳಿಂದ ಮಗುಚಿ ಗೆದ್ದಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.


ಕೊನೆಯವರೆಗೂ ಅತ್ಯಂತ ರೋಮಾಂಚಕವಾಗಿ ಸಾಗಿದ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳೂ ಸಮಬಲದ ಹೋರಾಟವನ್ನು ನೀಡಿದವು. ಒಂದು ಹಂತದಲ್ಲಿ ಇಂಡೀಸ್ ಬೌಲರ್ ಗಳು ಮೇಲುಗೈ ಸಾಧಿಸಿದರೆ ಬಳಿಕ ಪಂದ್ಯದ ಅಂತ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಯುವ ಬ್ಯಾಟ್ಸ್ ಮನ್ ಶಾರ್ದೂಲ್ ಠಾಕೂರ್ ದಿಟ್ಟ ಜೊತೆಯಾಟ ಭಾರತಕ್ಕೆ ಗೆಲುವಿನ ಸಂಭ್ರಮವನ್ನು ತಂದುಕೊಟ್ಟಿತು. ಕೊನೆಯಲ್ಲಿ ಭಾರತ ತಂಡವು 48.4 ಓವರ್ ಗಳಲ್ಲಿ 06 ವಿಕೆಟ್ ಗಳನ್ನು ಕಳೆದುಕೊಂಡು 316 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು.


ಸರಣಿ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 316 ರನ್ ಗಳ ಕಠಿಣ ಗುರಿಯನ್ನು ಭಾರತೀಯ ಓಪನರ್ ಗಳು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದರು. ಆರಂಭಿಕರಾದ ರೋಹಿತ್ ಶರ್ಮಾ (63) ಮತ್ತು ಕೆ.ಎಲ್. ರಾಹುಲ್ (77) ಅವರು ದೀರ್ಘ ಚೇಸಿಂಗ್ ಗೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟರು. ಇವರಿಬ್ಬರು 122 ರನ್ನುಗಳ ಉತ್ತಮ ಜೊತೆಯಾಟ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಅವರು ಔಟಾದರು. ಅವರು 63 ಎಸೆತಗಳಲ್ಲಿ 63 ರನ್ ಗಳಿಸಿದರು.

Advertisement

ರಾಹುಲ್ ಜೊತೆಯಾದ ಕ್ಯಾಪ್ಟನ್ ಕೊಹ್ಲಿ ತಂಡದ ಮೊತ್ತವನ್ನು ಏರಿಸುತ್ತಲೇ ಹೋದರು. ಆದರೆ ತಂಡದ ಮೊತ್ತ 167 ಆಗಿದ್ದಾಗ ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ (77) ಔಟಾದರು. ಆ ಬಳಿಕ ಬಂದ ಅಯ್ಯರ್, ಪಂತ್ ಮತ್ತು ಜಾಧವ್ ಬೆನ್ನು ಬೆನ್ನಿಗೆ ಔಟಾಗುವುದರೊಂದಿಗೆ ತಂಡ ಸಂಕಷ್ಟಕ್ಕೆ ಸಿಲುಕಿತು.

ಒಂದು ತುದಿಯಲ್ಲಿ ಕೊಹ್ಲಿ ನಾಯಕನ ಆಟವಾಡುತ್ತಿದ್ದರೆ ಇನ್ನೊಂದು ತುದಿಯಲ್ಲಿ ಅವರಿಗೆ ಸೂಕ್ತ ಬೆಂಬಲವೇ ಸಿಗಲಿಲ್ಲ. ಶ್ರೇಯಸ್ ಐಯ್ಯರ್ (07), ರಿಷಭ್ ಪಂತ್ (07) ಮತ್ತು ಕೇದಾರ್ ಜಾಧವ್ (09) ವಿಕೆಟ್ ಗಳನ್ನು ಕಳೆದುಕೊಂಡಾಗ ಕ್ಯಾಪ್ಟನ್ ಕೊಹ್ಲಿ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿದರು. ಆದರೆ ಈ ಹಂತದಲ್ಲಿ ಬ್ಯಾಟಿಂಗ್ ಗೆ ಬಂದ ಅನುಭವಿ ರವೀಂದ್ರ ಜಡೇಜಾ (ಅಜೇಯ 39) ನಾಯಕನಿಗೆ ಉತ್ತಮ ಬೆಂಬಲ ನೀಡಿದರು.


ಆದರೆ ಈ ಹಂತದಲ್ಲಿ ಶತಕದತ್ತ ದಾಪುಗಾಲು ಹಾಕುತ್ತಿದ್ದ ವಿರಾಟ್ ಕೊಹ್ಲಿ ಪೌಲ್ ಬೌಲಿಂಗ್ ನಲ್ಲಿ ಬೌಲ್ಡಾದರು. ಕೊಹ್ಲಿ 81 ಎಸೆತಗಳನ್ನು ಎದುರಿಸಿ 85 ರನ್ ಬಾರಿಸಿದರು. ತಮ್ಮ ಈ ಕ್ಯಾಪ್ಟನ್ಸ್ ನಾಕ್ ನಲ್ಲಿ ಅವರು 09 ಬೌಂಡರಿಗಳನ್ನು ಬಾರಿಸಿದ್ದರು.

ಕೊಹ್ಲಿ ಔಟಾದಾಗ ತಂಡದ ಮೊತ್ತ 286 ಆಗಿತ್ತು ಮತ್ತು ಜಯಕ್ಕೆ 23 ಎಸೆತಗಳಲ್ಲಿ 30 ರನ್ ಗಳ ಅವಶ್ಯಕತೆ ಇತ್ತು. ಆಗ ಜಡೇಜಾ ಜೊತೆ ಸೇರಿದ ಶಾರ್ದೂಲ್ ಠಾಕೂರ್ (16) ಬಿರುಸಿನ ಆಟಕ್ಕಿಳಿದರು. ಅವರು ಕೇವಲ 6 ಎಸೆತಗಳಲ್ಲಿ 17 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 02 ಬೌಂಡರಿ ಮತ್ತು 01 ಸಿಕ್ಸರ್ ಇತ್ತು. ಜವಾಬ್ದಾರಿಯುತ ಆಟವಾಡಿದ ರವೀಂದ್ರ ಜಡೇಜಾ 31 ಎಸೆತಗಳಲ್ಲಿ 39 ರನ್ ಬಾರಿಸಿ ಅಜೇಯರಾಗಿ ಉಳಿದರು.


ವೆಸ್ಟ್ ಇಂಡೀಸ್ ಪರ ಉತ್ತಮ ದಾಳಿ ಸಂಘಟಿಸಿದ ಆಲ್ ರೌಂಡರ್ ಕಿಮೋ ಪೌಲ್ 03 ವಿಕೆಟ್ ಪಡೆದರು. ನಾಯಕನ ಆಟವಾಡಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.


Advertisement

Udayavani is now on Telegram. Click here to join our channel and stay updated with the latest news.

Next