Advertisement

ಲಾಸ್ಟ್‌ ಬಾಲ್‌ ಥ್ರಿಲ್ಲರ್‌; ಭಾರತಕ್ಕೆ ಏಶ್ಯ ಕಪ್‌ ಲಕ್‌

06:00 AM Sep 30, 2018 | Team Udayavani |

ದುಬಾೖ: ಅಂತಿಮ ಎಸೆತದ ರೋಮಾಂಚನಕ್ಕೆ ಸಾಕ್ಷಿಯಾದ, ನಡು ರಾತ್ರಿ ದಾಟಿದ ಬಳಿಕವೂ ಕ್ರಿಕೆಟ್‌ ಪ್ರೇಮಿಗಳ ಕಣ್ಣೆವೆಯನ್ನು ತೆರೆದೇ ಇರಿಸಿದ, ಎಲ್ಲರ ಹೃದಯ ಬಡಿತವನ್ನು ಏರುಪೇರುಗೊಳಿಸಿದ “ಸೂಪರ್‌ ಥ್ರಿಲ್ಲರ್‌’ ಏಶ್ಯ ಕಪ್‌ ಫೈನಲ್‌ ಅದೃಷ್ಟಪರೀಕ್ಷೆಯಲ್ಲಿ ಭಾರತ ಗೆದ್ದಿದೆ. 

Advertisement

ಸಣ್ಣ ಮೊತ್ತದ ಪಂದ್ಯವಾದರೂ ತೀವ್ರ ಪೈಪೋಟಿಯೊಡ್ಡಿದ ಬಾಂಗ್ಲಾದೇಶವನ್ನು ಕಟ್ಟಕಡೆಯ ಎಸೆತದಲ್ಲಿ ಮಣಿಸಿದ ಟೀಮ್‌ ಇಂಡಿಯಾ ದಾಖಲೆ 7ನೇ ಸಲ ಏಶ್ಯನ್‌ ಕಿಂಗ್‌ ಆಗಿ ಮೆರೆದಿದೆ.ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 48.3 ಓವರ್‌ಗಳಲ್ಲಿ 222ಕ್ಕೆ ಆಲೌಟಾದರೆ, ಭಾರತ ಭರ್ತಿ 50 ಓವರ್‌ಗಳಲ್ಲಿ 7 ವಿಕೆಟಿಗೆ 223 ರನ್‌ ಬಾರಿಸಿ ಸಂಭ್ರಮ ಆಚರಿಸಿತು. ಇನ್ನೇನು ಭಾರತವನ್ನು ಬಲೆಗೆ ಬೀಳಿಸಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಬಾಂಗ್ಲಾವೇ ಸೋಲಿನ ಬಲೆಗೆ ಸಿಲುಕಿತು. 


“ಯಾವಾಗ ತಮಿಮ್‌ ಇಕ್ಬಾಲ್‌ ಕೂಟದ ಆರಂಭಿಕ ಪಂದ್ಯದಲ್ಲಿ ಒಂದೇ ಕೈಯಲ್ಲಿ ಬ್ಯಾಟಿಂಗ್‌ ಮಾಡುವ ಕೆಚ್ಚು ಪ್ರದರ್ಶಿಸಿದರೋ ಆಗಲೇ ನನ್ನ ಏಶ್ಯ ಕಪ್‌ ಕನಸು ನನಸಾಗಿತ್ತು’ ಎಂಬುದಾಗಿ ಪಂದ್ಯದ ಮೊದಲೇ ಹೇಳಿದ್ದ ಮಶ್ರಫೆ ಮೊರ್ತಜ ಸೋಲಿನಲ್ಲೂ ಗೆಲುವಿನ ಸೇನಾನಿಯಂತೆ ಕಂಡರು.

ಅಂತಿಮ ಓವರ್‌, 6 ರನ್‌…
ಶುಕ್ರವಾರದ ಸಣ್ಣ ಮೊತ್ತದ ಪ್ರಶಸ್ತಿ ಸಮರ ಸಮಬಲದಲ್ಲೇ ಸಾಗಿತ್ತು. ಇಲ್ಲಿ ಯಾರೂ ಗೆಲ್ಲಬಹುದಾದ ಸಾಧ್ಯತೆ ಮುಕ್ತವಾಗಿತ್ತು. ಪಂದ್ಯ ಟೈ ಆಗಿ “ಸೂಪರ್‌ ಓವರ್‌’ಗೆ ವಿಸ್ತರಿಸಲ್ಪಡುವ ಸಾಧ್ಯತೆಯೂ ಗೋಚರಿಸಿತ್ತು. ಆದರೆ ಒಮ್ಮೆ ಸ್ನಾಯು ಸೆಳೆತಕ್ಕೆ ಸಿಲುಕಿ ವಿಶ್ರಾಂತಿ ಪಡೆದು ಬಂದ ಕೇದಾರ್‌ ಜಾಧವ್‌ ಇದಕ್ಕೆ ಅವಕಾಶ ಕೊಡಲಿಲ್ಲ.

ಭಾರತದ ಗೆಲುವಿಗೆ ಅಂತಿಮ ಓವರಿನಲ್ಲಿ ಅಗತ್ಯವಿದ್ದದ್ದು ಆರೇ ರನ್‌. 3 ವಿಕೆಟ್‌ ಕೈಯಲ್ಲಿತ್ತು. ಕ್ರೀಸಿನಲ್ಲಿದ್ದವರು ಕೇದಾರ್‌ ಜಾಧವ್‌-ಕುಲದೀಪ್‌ ಯಾದವ್‌. ಆಗ ಬಾಂಗ್ಲಾ ಕಪ್ತಾನ ಚೆಂಡನ್ನು ಸೌಮ್ಯ ಸರ್ಕಾರ್‌ ಕೈಗಿತ್ತರು. ಸರ್ಕಾರ್‌ ಇನ್ನೇನು ಬೌಲಿಂಗ್‌ ಆರಂಭಿಸಬೇಕು ಎನ್ನುವಷ್ಟರಲ್ಲಿ ಮೊರ್ತಜ ದಿಢೀರನೇ ಮನಸ್ಸು ಬದಲಿಸಿದರು. ಚೆಂಡನ್ನು ಮಹಮದುಲ್ಲ ಅವರಿಗೆ ನೀಡಿದರು!

ಯಾದವ್‌-ಜಾಧವ್‌ ಸೇರಿಕೊಂಡು ಮೊದಲ 5 ಎಸೆತಗಳಲ್ಲಿ 5 ರನ್‌ ತೆಗೆದರು. ಅಲ್ಲಿಗೆ ಸ್ಕೋರ್‌ ಸಮನಾಯಿತು. ಅಂತಿಮ ಎಸೆತ ಲೆಗ್‌ಸ್ಟಂಪ್‌ ಮೇಲೆ ಬಂತು. ಜಾಧವ್‌ ತಮ್ಮ ಪ್ಯಾಡ್‌ ಮೂಲಕ್‌ ಫ್ಲಿಕ್‌ ಮಾಡುವ ಯತ್ನದಲ್ಲಿ ವಿಫ‌ಲರಾದರು. ಚೆಂಡು ಅವರ ಕಾಲಿಗೆ ತಾಗಿ ಶಾರ್ಟ್‌ ಫೈನ್‌ ಲೆಗ್‌ ಬೌಂಡರಿಯತ್ತ ಧಾವಿಸಿತು. ಅಷ್ಟರಲ್ಲಿ ಇಬ್ಬರೂ ಸೇರಿ ಒಂದು ರನ್‌ ಕಸಿದು ಭಾರತದ ಗೆಲುವನ್ನು ಸಾರಿದರು. 2016ರಲ್ಲೂ ಬಾಂಗ್ಲಾದೇಶವನ್ನು ಮಣಿಸಿಯೇ ಭಾರತ ಏಶ್ಯ ಕಪ್‌ ಗೆದ್ದಿತ್ತು.

Advertisement

ಮಿಡ್ಲ್ ಆರ್ಡರ್‌ಗೆ ಟೆಸ್ಟ್‌!
ಕೂಟದುದ್ದಕ್ಕೂ ಭಾರತ ಆರಂಭಿಕರ ಯಶಸ್ಸಿನಿಂದ ಪಂದ್ಯವನ್ನು ಗೆಲ್ಲುತ್ತ ಬಂದಿತ್ತು. ರೋಹಿತ್‌ ಶರ್ಮ-ಶಿಖರ್‌ ಧವನ್‌, ಅಫ್ಘಾನ್‌ ವಿರುದ್ಧ ಓಪನರ್‌ಗಳಾಗಿ ಕಾಣಿಸಿದ ಕೆ.ಎಲ್‌. ರಾಹುಲ್‌-ಅಂಬಾಟಿ ರಾಯುಡು ಟೀಮ್‌ ಇಂಡಿಯಾದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಮುಂದಿನ ವರ್ಷದ ವಿಶ್ವಕಪ್‌ಗ್ೂ ಮುನ್ನ ಸುಧಾರಣೆ ಕಾಣಬೇಕೆಂದಿದ್ದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬಿದ್ದಿರಲಿಲ್ಲ. ಅಕಸ್ಮಾತ್‌ ತಂಡ ಓಪನಿಂಗ್‌ ವೈಫ‌ಲ್ಯಕ್ಕೆ ಸಿಲುಕಿದರೆ ಆಗ ಮಿಡ್ಲ್ ಆರ್ಡರ್‌ ಬ್ಯಾಟ್ಸ್‌ಮನ್‌ಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದೆಂಬ ಕುತೂಹಲ, ನಿರೀಕ್ಷೆಗಳೆರಡೂ ಇದ್ದವು. ಇದಕ್ಕೆ ಫೈನಲ್‌ ಮುಖಾಮುಖೀ ಉತ್ತಮ ನಿದರ್ಶನ ಒದಗಿಸಿತು.

ದಿನೇಶ್‌ ಕಾರ್ತಿಕ್‌ (61 ಎಸೆತಗಳಿಂದ 37), ಧೋನಿ (67 ಎಸೆತಗಳಿಂದ 36), ಕೇದಾರ್‌ ಜಾಧವ್‌ (27 ಎಸೆತಗಳಿಂದ ಅಜೇಯ 23), ರವೀಂದ್ರ ಜಡೇಜ (33 ಎಸೆತಗಳಿಂದ 23) ಭುವನೇಶ್ವರ್‌ ಕುಮಾರ್‌ (31 ಎಸೆತಗಳಿಂದ 21 ರನ್‌) ಹೊಡೆದು ಭಾರತವನ್ನು ನಿಧಾನವಾಗಿ ಗೆಲುವಿನ ಗುರಿಯತ್ತ ಸಾಗಿಸಿದರು. ಆದರೂ ಪಂದ್ಯ ಅಂತಿಮ ಎಸೆತದ ತನಕ ವಿಸ್ತರಿಸಲ್ಪಟ್ಟಿದ್ದು ಅಚ್ಚರಿಯಾಗಿ ಕಂಡಿತು. ನಿಧಾನ ಗತಿಯ ಟ್ರ್ಯಾಕ್‌, ಬಾಂಗ್ಲಾದ ಬಿಗಿ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕೂಡ ಇದಕ್ಕೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ.

ಸ್ಕೋರ್‌ಪಟ್ಟಿ
ಬಾಂಗ್ಲಾದೇಶ    48.3 ಓವರ್‌ಗಳಲ್ಲಿ 222
ಭಾರತ
ರೋಹಿತ್‌ ಶರ್ಮ    ಸಿ ನಜ್ಮುಲ್‌ ಬಿ ರುಬೆಲ್‌    48
ಶಿಖರ್‌ ಧವನ್‌    ಸಿ ಸರ್ಕಾರ್‌ ಬಿ ನಜ್ಮುಲ್‌    15
ಅಂಬಾಟಿ ರಾಯುಡು    ಸಿ ರಹೀಂ ಬಿ ಮೊರ್ತಜ    2
ದಿನೇಶ್‌ ಕಾರ್ತಿಕ್‌    ಎಲ್‌ಬಿಡಬ್ಲ್ಯು ಮಹಮದುಲ್ಲ    37
ಎಂ.ಎಸ್‌. ಧೋನಿ    ಸಿ ರಹೀಂ ಬಿ ಮುಸ್ತಫಿಜುರ್‌    36
ಕೇದಾರ್‌ ಜಾಧವ್‌    ಔಟಾಗದೆ    23
ರವೀಂದ್ರ ಜಡೇಜ    ಸಿ ರಹೀಂ ಬಿ ರುಬೆಲ್‌    23
ಭುವನೇಶ್ವರ್‌ ಕುಮಾರ್‌    ಸಿ ರಹೀಂ ಬಿ ಮುಸ್ತಫಿಜುರ್‌    21
ಕುಲದೀಪ್‌ ಯಾದವ್‌    ಔಟಾಗದೆ    5
ಇತರ        13
ಒಟ್ಟು  (50 ಓವರ್‌ಗಳಲ್ಲಿ 7 ವಿಕೆಟಿಗೆ)        223
ವಿಕೆಟ್‌ ಪತನ: 1-35, 2-46, 3-83, 4-137, 5-160, 6-212, 7-214.
ಬೌಲಿಂಗ್‌:
ಮೆಹಿದಿ ಹಸನ್‌ ಮಿರಾಜ್‌        4-0-27-0
ಮುಸ್ತಫಿಜುರ್‌ ರಹಮಾನ್‌        10-0-38-2
ನಜ್ಮುಲ್‌ ಇಸ್ಲಾಮ್‌        10-0-56-1
ಮಶ್ರಫೆ ಮೊರ್ತಜ        10-0-35-1
ರುಬೆಲ್‌ ಹೊಸೇನ್‌        10-2-26-2
ಮಹಮದುಲ್ಲ        6-0-33-1
ಪಂದ್ಯಶ್ರೇಷ್ಠ: ಲಿಟನ್‌ ದಾಸ್‌
ಸರಣಿಶ್ರೇಷ್ಠ: ಶಿಖರ್‌ ಧವನ್‌

Advertisement

Udayavani is now on Telegram. Click here to join our channel and stay updated with the latest news.

Next