Advertisement

India-Bangla: 3 ಪ್ರಮುಖ ಯೋಜನೆಗಳಿಗೆ ಜಂಟಿ ಚಾಲನೆ

09:48 PM Nov 01, 2023 | Team Udayavani |

ನವದೆಹಲಿ: ಭಾರತ-ಬಾಂಗ್ಲಾ ನಡುವಿನ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಮೂರು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಬುಧವಾರ ಜಂಟಿಯಾಗಿ ಚಾಲನೆ ನೀಡಿದ್ದಾರೆ.
ತ್ರಿಪುರಾದ ನಿಶ್ಚಿತಾಪುರದಿಂದ ಬಾಂಗ್ಲಾದ ಗಂಗಾಸಾಗರ್‌ಗೆ ಸಂಪರ್ಕ ಒದಗಿಸುವ ರೈಲ್ವೆ ಮಾರ್ಗವೂ ಸೇರಿದಂತೆ ಸಂಪರ್ಕ ಹಾಗೂ ಇಂಧನ ಸಹಕಾರಕ್ಕೆ ಪೂರಕವಾದ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉಭಯ ಪ್ರಧಾನಿಗಳು ಉದ್ಘಾಟಿಸಿದರು.
ಈ ಕುರಿತು ಮಾತನಾಡಿದ ಮೋದಿ, ಭಾರತ-ಬಾಂಗ್ಲಾದ ನಡುವಿನ ಸಹಕಾರಕ್ಕೆ ಈ ಕ್ಷಣಗಳು ಸಾಕ್ಷಿಯಾಗಿವೆ. ಹಲವು ದಶಕಗಳಿಂದಲೂ ಸಾಧ್ಯವಾಗದಂಥ ಅಭಿವೃದ್ಧಿಯನ್ನು 9 ವರ್ಷಗಳಲ್ಲಿ ಜಂಟಿಯಾಗಿ ನಾವು ಪೂರ್ಣಗೊಳಿಸಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದೇ ವೇಳೆ ಉಭಯ ರಾಷ್ಟ್ರಗಳ ನಡುವಿನ ಮೂಲಸೌಕರ್ಯ ಅಭಿವೃದ್ಧಿ ಸಹಯೋಗವನ್ನು ಯೋಜನೆಗಳು ಬಲಪಡಿಸುತ್ತವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ..

Advertisement

ಯಾವ ಯೋಜನೆ?
ಅಗರ್ತಲಾ -ಅಖೌರಾ ಗಡಿಯಾಚೆಗಿನ ರೈಲು ಸಂಪರ್ಕ
ಈಶಾನ್ಯರಾಜ್ಯಗಳನ್ನು ಬಾಂಗ್ಲಾದೇಶದೊಂದಿಗೆ ಸಂಪರ್ಕಿಸುವ ಮೊದಲ ರೈಲು ಯೋಜನೆ. 12.24 ಕಿ.ಮೀ. ವ್ಯಾಪ್ತಿಯ ಈ ಯೋಜನೆ ಗಡಿಯಾಚೆಗಿನ ವ್ಯಾಪಾರ ಉತ್ತೇಜನಕ್ಕೆ ಅನುಕೂಲ

ಖುಲಾ°-ಮೊಂಗ್ಲಾ ಬಂದರು ರೈಲುಮಾರ್ಗ
ಮೊಂಗ್ಲಾ ಬಂದರನ್ನು ಹಾಗೂ ಖುಲಾ°ದಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲದ ನಡುವೆ ಸಂಪರ್ಕಿಸುವ 65 ಕಿ.ಮೀ.ವ್ಯಾಪ್ತಿಯ ಬ್ರಾಡ್‌ಗೆàಜ್‌ ಮಾರ್ಗ.
ಮೈತ್ರೀ ಸೂಪರ್‌ ಥರ್ಮಲ್‌ ಪವರ್‌ಪ್ಲಾಂಟ್‌ ಯೂನಿಟ್‌-2
ಮೈತ್ರೀ ಯೂನಿಟ್‌-2 ಭಾರತ-ಬಾಂಗ್ಲಾ ಜತೆಗೂಡಿ ಸ್ಥಾಪಿಸಿರುವ ವಿದ್ಯುತ್‌ ಉತ್ಪಾದನಾ ಸ್ಥಾವರ. 1,320 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಅದಕ್ಕೆ ಇದೆ.

392. 52 ಕೋಟಿ ರೂ.- ಭಾರತ ಬಾಂಗ್ಲಾಕ್ಕೆ ನೀಡಿದ ನೆರವು.

Advertisement

Udayavani is now on Telegram. Click here to join our channel and stay updated with the latest news.

Next