Advertisement

ಐಸಿಸಿ-ಬಿಸಿಸಿಐ ನಡುವೆ ಒಳಗೊಳಗೇ ಗುದ್ದಾಟ

11:11 PM Apr 10, 2020 | Sriram |

ಮುಂಬಯಿ: ಒಂದು ಕಡೆ ಕೋವಿಡ್ 19 ವೈರಸ್‌ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದೆ. ಇನ್ನೊಂದು ಕಡೆ ಅದಕ್ಕೆ ಸಿಲುಕಿಕೊಂಡು ಅಳಿವಿನಂಚಿಗೆ ಮನುಷ್ಯ ಸರಿಯುತ್ತಲೇ ಇದ್ದಾನೆ. ಮತ್ತೂಂದು ಕಡೆ ತಮ್ಮ ಕರ್ತವ್ಯವನ್ನು ಮರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಕೆಲವರು ಚಟುವಟಿಕೆಯನ್ನು ತಮ್ಮ ಮಿತಿಯಲ್ಲಿಯೇ ಮುಂದುವರಿಸಿದ್ದಾರೆ. ಅದರಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ. ಮುಂದೇನು ಮಾಡಬೇಕೆಂದು ಇನ್ನೂ ಹಲವು ಕೂಟಗಳ ಸಂಘಟಕರಿಗೆ ಖಚಿತವಾಗಿಲ್ಲ. ಆದ್ದರಿಂದ ಲೆಕ್ಕಾಚಾರ ಮುಂದುವರಿದಿದೆ.
ಈ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಹಳ ಇಕ್ಕಟ್ಟಿನಲ್ಲಿದೆ. ಮುಂದಿನ ಜುಲೈನಲ್ಲಿ ಅದರ ಚುನಾವಣೆಯಿದೆ. ಅಷ್ಟರೊಳಗೆ ಅದು ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ.

Advertisement

ಸಮಸ್ಯೆ ಏನು?
ಜುಲೈ ತಿಂಗಳಲ್ಲಿ ಐಸಿಸಿ ಚುನಾವಣೆ ನಡೆಯಲಿದೆ. ಆ ವೇಳೆಗಾಗಲೇ ಐಸಿಸಿ ಮತ್ತು ಸದಸ್ಯ ರಾಷ್ಟ್ರಗಳ ನಡುವಿನ ಭಿನ್ನಮತ ಬಗೆಹರಿಯಬೇಕು. ಇಲ್ಲವಾದರೆ ಮುಂದಿನ ಕೂಟಗಳು ಅಸ್ತವ್ಯಸ್ತವಾಗುತ್ತವೆ. ಈಗ ಐಸಿಸಿ ಚುನಾವಣೆ ಎಂದಿನಂತಿಲ್ಲ. ಐಸಿಸಿಗೆ ಮುಖ್ಯಸ್ಥರಾ ಗುವವರಿಗೆ ಯಾವುದೇ ರಾಷ್ಟ್ರಗಳ ಹಂಗಿರುವುದಿಲ್ಲ. ಅವರು ಸ್ವತಂತ್ರರಾಗಿ ತಮ್ಮ ಸಾಮರ್ಥಯದ ಮೇಲೆ ಸ್ಪರ್ಧಿಸಬಹುದು. ಆ ವ್ಯಕ್ತಿಗೆ ಈ ಜಟಾಪಟಿಯನ್ನೆಲ್ಲ ಬಗೆಹರಿಸಬೇಕಾದ ತಾಪತ್ರಯ ಎದುರಾಗುತ್ತದೆ. ಇಲ್ಲಿ ಯಾವುದೇ ರಾಷ್ಟ್ರಗಳ ಬೆಂಬಲ ಸಿಕ್ಕದಿದ್ದರೆ ಕಷ್ಟ. ಇಲ್ಲಿ ಪ್ರತೀವರ್ಷ ವಿಶ್ವಕೂಟ ನಡೆಸುವುದಕ್ಕೆ ಬಿಸಿಸಿಐ, ಎಸಿಎ, ಇಸಿಬಿ ಸಿದ್ಧವಿಲ್ಲ. ಪ್ರತೀವರ್ಷದ ಕೂಟಗಳಿಂದ ಈ ರಾಷ್ಟ್ರಗಳು ದೇಶೀಯವಾಗಿ ನಡೆಸುವ ಐಪಿಎಲ್‌, ಬಿಗ್‌ಬಾಷ್‌, ದಿ ಹಂಡ್ರೆಡ್‌ನ‌ಂತಹ ಕೂಟಗಳ ಮೇಲೆ ಒತ್ತಡ ಬೀಳುತ್ತದೆ. ಆಟಗಾರರ ಹೊಂದಾಣಿಕೆ, ದಿನಾಂಕದ ಹೊಂದಾಣಿಕೆ ಇವೆಲ್ಲ ಸಮಸ್ಯೆಯಾಗುತ್ತದೆ. ಇವಕ್ಕೆ ಈ ಕೂಟಗಳಿಂದಲೇ ಗರಿಷ್ಠ ಆದಾಯ ಬರುವುದು. ಇನ್ನು ಇವು ದ್ವಿಪಕ್ಷೀಯ ಪಂದ್ಯ ನಡೆಸಲು ಬೇರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಅವೂ ರದ್ದಾಗುತ್ತವೆ. ಅದರಿಂದ ಬಿಸಿಸಿಐಗೆ ಪ್ರತೀ ಪಂದ್ಯಕ್ಕೆ ಮಾಧ್ಯಮ ಹಕ್ಕಿನ ರೂಪದಲ್ಲೇ 60 ಕೋಟಿ ರೂ. ನಷ್ಟ ಸಂಭವಿಸುವ ನಿರೀಕ್ಷೆಯಿದೆ.
ಐಸಿಸಿ ಕೂಟಗಳು ನಡೆದಾಗ ಆದಾಯ ಐಸಿಸಿ ಮತ್ತು ಆತಿಥೇಯ ರಾಷ್ಟ್ರದ ನಡುವೆ ಹಂಚಿ ಹೋಗುತ್ತದೆ. ಉಳಿದ ರಾಷ್ಟ್ರಗಳಿಗೆ ಸಿಗುವುದೇನು? ಆದ್ದರಿಂದ ಪ್ರತೀವರ್ಷ ವಿಶ್ವಕೂಟ ಬೇಡ ಎಂದು ಇವು ತಕರಾರು ತೆಗೆಯುತ್ತಿವೆ.

ಪರಿಸ್ಥಿತಿ ಏನು
ಐಸಿಸಿ 2023ರಿಂದ 31ರ ಅವಧಿಯಲ್ಲಿ ಪುರುಷರ ಕ್ರಿಕೆಟ್‌ನ 8 ಪ್ರಮುಖ ವಿಶ್ವಕೂಟಗಳು ಸೇರಿ, ಒಟ್ಟು 28 ಪ್ರಮುಖ ಕೂಟಗಳನ್ನು ಆಯೋಜಿಸಲಿದೆ. ಇದರಲ್ಲಿ 2024 ಮತ್ತು 28ರಲ್ಲಿ ನಡೆಯುವ ಟಿ20 ಚಾಂಪಿಯನ್ಸ್‌ ಟ್ರೋಫಿಯೂ ಸೇರಿದೆ. ಜತೆಗೆ 19 ವಯೋಮಿತಿ ವಿಶ್ವಕಪ್‌, ಎರಡು ವರ್ಷಗಳಿಗೊಮ್ಮೆ ಬರುವ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ ಫೈನಲ್‌, ಮಹಿಳಾ ಕ್ರಿಕೆಟ್‌ ಕೂಟಗಳ ಆತಿಥ್ಯವನ್ನೆಲ್ಲ ಸೇರಿಸಿ, ಸದಸ್ಯ ರಾಷ್ಟ್ರಗಳು, ಸಹ ಸದಸ್ಯ ರಾಷ್ಟ್ರಗಳಿಗೆ ಐಸಿಸಿ ಮಾಹಿತಿ ರವಾನಿಸಿದೆ. ವಿಶೇಷವೆಂದರೆ ಒಟ್ಟು 18 ರಾಷ್ಟ್ರಗಳು ಪ್ರತಿಕ್ರಿಯಿಸಿ, 93 ಬೇಡಿಕೆಗಳನ್ನಿಟ್ಟಿವೆಯಂತೆ. ಇದರಲ್ಲಿ 15 ರಾಷ್ಟ್ರಗಳು ತಮ್ಮ ಬಯಕೆಯನ್ನು ನಿರ್ದಿಷ್ಟವಾಗಿ ತಿಳಿಸಿದ್ದರೂ, ಮೂರು ರಾಷ್ಟ್ರಗಳು ಮಾತ್ರ, ತಮ್ಮ ಆಸಕ್ತಿಯನ್ನು ಸ್ಪಷ್ಟಪಡಿಸಿಲ್ಲ. ಅವು ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಎಂದು ಊಹಿಸಲಾಗಿದೆ. ಇದನ್ನು ಬಗೆಹರಿಸಿಕೊಳ್ಳುವ ದಾರಿ ಕಾಣದೇ ಐಸಿಸಿ ಕಂಗಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next