Advertisement

ಸೆಮಿ ಸಿದ್ಧತೆಯಲ್ಲಿ ಭಾರತ

03:34 PM Jun 08, 2017 | Harsha Rao |

ಲಂಡನ್‌: ಸೊಲ್ಲೆತ್ತಲಾಗದ ರೀತಿಯಲ್ಲಿ ಪಾಕಿಸ್ಥಾನವನ್ನು ಸೋಲಿನ ಸುಳಿಗೆ ತಳ್ಳಿದ ಭಾರತವೀಗ ಏಶ್ಯದ ಮತ್ತೂಂದು ತಂಡವಾದ ಶ್ರೀಲಂಕಾಕ್ಕೆ ಇದೇ ಗತಿ ಕಾಣಿಸಬೇಕೆಂಬ ಯೋಜನೆಯೊಂದಿಗೆ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ 2ನೇ ಮುಖಾಮುಖೀಗೆ ಅಣಿಯಾಗಿದೆ. ಗುರುವಾರ ಲಂಡನ್ನಿನ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ “ಬಿ’ ವಿಭಾಗದ ಈ ಪಂದ್ಯ ನಡೆಯಲಿದೆ. ಆದರೆ ಪಂದ್ಯದ ಮೇಲೆರಗಿ ಇದರ ಕುತೂಹಲವನ್ನೆಲ್ಲ ನೀರುಪಾಲು ಮಾಡಲು ಮಳೆರಾಯ ತುದಿಗಾಲಲ್ಲಿ ನಿಂತಿದ್ದಾನೆ ಎಂಬುದು ಮಾತ್ರ “ಬ್ಯಾಡ್‌ ನ್ಯೂಸ್‌’!

Advertisement

ಪಾಕಿಸ್ಥಾನವನ್ನು 124 ರನ್ನುಗಳಿಂದ ಮಣಿಸಿದ ಉತ್ಸಾಹದಲ್ಲಿರುವ ಭಾರತಕ್ಕೆ ಶ್ರೀಲಂಕಾ ದೊಡ್ಡ ಸಮಸ್ಯೆಯಾಗಿ ಕಾಡಲಿಕ್ಕಿಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಸಂಗಕ್ಕರ-ಜಯವರ್ಧನ ಕಾಲ ದಷ್ಟು ಬಲಶಾಲಿಯಾಗಿರದ ಲಂಕಾ ಈಗ ಒಂದು ಸಾಮಾನ್ಯ ತಂಡ. ಅಲ್ಲದೇ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 96 ರನ್ನುಗಳಿಂದ ಸೋತ ಆಘಾತದಲ್ಲಿದೆ. ಸೆಮಿಫೈನಲ್‌ ಪ್ರವೇಶಿಸ ಬೇಕಾದರೆ ಕೊಹ್ಲಿ ಪಡೆಯನ್ನು ಮಣಿಸಲೇಬೇಕಾದ ಒತ್ತಡವನ್ನೂ ಹೇರಿಕೊಂಡಿದೆ. ಸೋತರೆ ಅದು ಕೂಟದಿಂದ ಹೊರಬೀಳುವುದು ಬಹುತೇಕ ಖಚಿತ. 

ಭಾರತ ಬೊಂಬಾಟ್‌ ಆಟ
ಲಂಕೆಗೆ ಹೋಲಿಸಿದರೆ ಭಾರತದ ಬ್ಯಾಟಿಂಗ್‌, ಬೌಲಿಂಗ್‌ ಬಹಳ ಎತ್ತರದಲ್ಲಿದೆ. ಸುಧಾರಿಸಬೇಕಾದುದು ಫೀಲ್ಡಿಂಗ್‌ ಮಾತ್ರ.

ಪಾಕ್‌ ವಿರುದ್ಧ ಭಾರತದ ಅಗ್ರ ಕ್ರಮಾಂಕದ ಅಷ್ಟೂ ಮಂದಿ ಬ್ಯಾಟ್ಸ್‌ಮನ್‌ಗಳು ಅರ್ಧ ಶತಕ ಬಾರಿಸಿದ್ದರು. ರೋಹಿತ್‌, ಧವನ್‌, ಕೊಹ್ಲಿ, ಯುವರಾಜ್‌ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಪಾಕ್‌ ದಾಳಿಯನ್ನು ಚೆಂಡಾಡಿದ್ದರು. ಕೊನೆಯಲ್ಲಿ ಪಾಂಡ್ಯ ಹ್ಯಾಟ್ರಿಕ್‌ ಸಿಕ್ಸರ್‌ನೊಂದಿಗೆ ಸಿಡಿದು ನಿಂತದ್ದು ಕಣ್ಣಿಗೊಂದು ಹಬ್ಬವಾಗಿತ್ತು!

ಬೌಲಿಂಗ್‌ನಲ್ಲಿ ಎಲ್ಲರೂ ನಿಯಂತ್ರಣ ಸಾಧಿಸಿದ್ದರು. ಯಾದವ್‌, ಭುವನೇಶ್ವರ್‌, ಪಾಂಡ್ಯ, ಜಡೇಜ, ಬುಮ್ರಾ ಅವರ ಕಾಂಬಿನೇಶನ್‌ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿತ್ತು. ಹೀಗಾಗಿ ಅಶ್ವಿ‌ನ್‌ ಕೊರತೆ ಎಲ್ಲೂ ಕಾಡಲಿಲ್ಲ. 
ಶ್ರೀಲಂಕಾ ವಿರುದ್ಧವೂ ಭಾರತ ಇದೇ ಹನ್ನೊಂದು ಮಂದಿಯ ಆಡುವ ಬಳಗವನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ. ಹೀಗಾಗಿ ರಹಾನೆ, ಶಮಿ ಮತ್ತೆ ಹೊರಗುಳಿಯುವುದು ಅನಿವಾರ್ಯವಾಗಬಹುದು.

Advertisement

ಲಂಕಾ: ಸಮಸ್ಯೆಗಳ ಸಾಲು
ಶ್ರೀಲಂಕಾ ತಂಡದೊಳಗೂ ಸಾಕಷ್ಟು ಸಮಸ್ಯೆಗಳಿವೆ. ನಾಯಕ ಏಂಜೆಲೊ ಮ್ಯಾಥ್ಯೂಸ್‌ ಗಾಯಾಳಾಗಿದ್ದು, ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಅವರು ಗುಣಮುಖರಾಗಿದ್ದಾರೆಯೇ, ಭಾರತದ ವಿರುದ್ಧ ಆಡುವರೇ ಎಂಬ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮ್ಯಾಥ್ಯೂಸ್‌ ಬದಲು ತಂಡವನ್ನು ಮುನ್ನಡೆಸಿದ ಉಪನಾಯಕ ಉಪುಲ್‌ ತರಂಗ ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲರಾಗಿ 2 ಪಂದ್ಯಗಳ ನಿಷೇಧಕ್ಕೊಳಗಾಗಿದ್ದಾರೆ. ಹೀಗಾಗಿ ಭಾರತ ಹಾಗೂ ಅನಂತರದ ಪಾಕಿಸ್ಥಾನ ವಿರುದ್ಧದ ಪಂದ್ಯಗಳ ವೇಳೆ ಕೇವಲ ವೀಕ್ಷಕ ರಾಗಿರುತ್ತಾರೆ. ಈ ರಾಶಿ ರಾಶಿ ಸಮಸ್ಯೆಗಳನ್ನು ಮೀರಿ ನಿಲ್ಲಬೇಕಾದರೆ ಭಾರತದ ವಿರುದ್ಧ ಶ್ರೀಲಂಕಾ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಬೇಕಾದುದು ಅಗತ್ಯ.

ಡಿಕ್ವೆಲ್ಲ, ಮೆಂಡಿಸ್‌, ಚಂಡಿಮಾಲ್‌, ಕಪುಗೆಡರ, ಪೆರೆರ ಅವರನ್ನೆಲ್ಲ ಬ್ಯಾಟಿಂಗ್‌ ಸರದಿಯಲ್ಲಿ ಹೊಂದಿರುವ ಶ್ರೀಲಂಕಾ ಯಾವ ವಿಧದಲ್ಲೂ ಭಾರತದ ಬ್ಯಾಟಿಂಗಿಗೆ ಸಾಟಿಯಲ್ಲ; ಭಾರತದ ಹತ್ತಿರಕ್ಕೂ ಸುಳಿಯಲು ಸಾಧ್ಯವಿಲ್ಲ. ಲಂಕೆಯ ಬೌಲಿಂಗ್‌ ಕೂಡ ಘಾತಕವಾಗಿಲ್ಲ. ಮುಖ್ಯವಾಗಿ ಪ್ರಧಾನ ವೇಗಿ ಮಾಲಿಂಗ ಅವರ ಫಾರ್ಮ್ ಕೈಕೊಟ್ಟಿದೆ. ಲಕ್ಮಲ್‌, ಪ್ರದೀಪ್‌, ಗುಣರತ್ನೆ, ಪ್ರಸನ್ನ… ಎಲ್ಲರೂ ಆಫ್ರಿಕಾ ವಿರುದ್ಧ ದುಬಾರಿಯಾಗಿದ್ದಾರೆ. ಭಾರತದ ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ನಿಯಂತ್ರಿಸಲು ಸಾಧ್ಯ ವಾದೀತೆಂಬ ನಂಬಿಕೆ ಸ್ವತಃ ಲಂಕಾ ಬೌಲರ್‌ಗಳಿಗೇ ಇದ್ದಂತಿಲ್ಲ!

ಲಂಡನ್‌ನಲ್ಲೇ ಇರುವ ಕುಮಾರ 
ಸಂಗಕ್ಕರ ಹೇಳಿದಂತೆ, “ಭಾರತದ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಶ್ರೀಲಂಕಾ ಆಟಗಾರರು ಅತ್ಯಂತ ಆಕ್ರಮಣಕಾರಿ ಆಟವಾಡಬೇಕಿದೆ. ಆದರೆ ಇದು ಅಷ್ಟು ಸುಲಭವಲ್ಲ…!’

Advertisement

Udayavani is now on Telegram. Click here to join our channel and stay updated with the latest news.

Next