ಟೋಕಿಯೊ: ರಾಣಿ ರಾಮ್‌ಪಾಲ್ ನೇತೃತ್ವದ ಭಾರತ ವನಿತೆಯರ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಿಂದ ಸೋತು ಇತಿಹಾಸ ಬರೆಯುವಲ್ಲಿ ವಿಫಲವಾಗಿದೆ.
ಆ ಮೂಲಕ ಭಾರತದ ವನಿತೆಯರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಖಾತೆ ತೆರೆಯುವ ಕನಸು ಭಗ್ನವಾಗಿದೆ.
ಗ್ರೇಟ್ ಬ್ರಿಟನ್ ಪಡೆಯನ್ನು ಸಮರ್ಥವಾಗಿ ಎದುರಿಸಿದ ಭಾರತ ತಂಡ ಒಂದು ಹಂತದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿತ್ತು.ಮಾತ್ರವಲ್ಲದೆ ಕೊನೆಯ ಹಂತದವರೆಗೂ ಅಪ್ರತಿಮ ಪ್ರದರ್ಶನ ಮುಂದುವರೆಸಿತ್ತು. ಅದರೆ ಬ್ರಿಟನ್ ತಂಡ ತನ್ನ ಚಾಂಪಿಯನ್ ಆಟವಾಡಿದ್ದರಿಂದ, ರಾಣಿ ರಾಮ್ ಪಾಲ್ ಪಡೆ ಸೋಲಬೇಕಾಯಿತು. ಅದಾಗ್ಯೂ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದೆ.
ದ್ವಿತೀಯ ಕ್ವಾರ್ಟರ್ ನಲ್ಲಿ 2 ಗೋಲುಗಳಿಂದ ಮುನ್ನಡೆಯಲ್ಲಿದ್ದ ಬ್ರಿಟನ್ ವಿರುದ್ಧ, ಭಾರತದ ವನಿತೆಯರು ತಿರುಗಿ ಬಿದ್ದರು. ಗುರ್ಜಿತ್ ಕೌರ್ 2 ಗೋಲು ದಾಖಲಿಸಿದರೆ, ವಂದನಾ ಕಟಾರಿಯಾ 1 ಗೋಲು ಬಾರಿಸುವ ಮೂಲಕ 3-2ರ ಅಂತರದಿಂದ ಮುನ್ನಡೆ ಸಾಧಿಸಿದರು. ಆದರೆ ಕೊನೆಯ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ಬ್ರಿಟನ್ ಮತ್ತೆರೆಡು ಗೋಲು ಬಾರಿಸಿ 3-4 ಅಂತರ ಪಡೆದಿತ್ತು.
ಕೊನೆಯ ಹಂತದಲ್ಲಿ ಭಾರತದ ವನಿತೆಯರು ಅಪ್ರತಿಮ ಹೋರಾಟ ನಡೆಸಿದರೂ ಗೋಲಾಗಿಸುವಲ್ಲಿ ವಿಫಲರಾದರು. ಆ ಮೂಲಕ ವಿರೋಚಿತ ಸೋಲು ಕಂಡು, ಒಲಂಪಿಕ್ಸ್ ನಲ್ಲಿ ಮೊದಲ ಪದಕ ಗೆಲ್ಲುವ ಕನಸು ಭಗ್ನವಾಯಿತು.
ಭಾರತ ಮತ್ತು ಗ್ರೇಟ್ ಬ್ರಿಟನ್ ಒಂದೇ ಬಣದ ತಂಡಗಳು. ಲೀಗ್ ಹಂತದಲ್ಲಿ ಬ್ರಿಟನ್ ವಿರುದ್ಧ ಭಾರತ 1-4 ಅಂತರದ ಸೋಲನುಭವಿಸಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಗೆದ್ದ ಭಾರತ, ತನ್ನ ನಾಕೌಟ್ ಅದೃಷ್ಟಕ್ಕಾಗಿ ಇದೇ ಗ್ರೇಟ್ ಬ್ರಿಟನ್‌ನತ್ತ ಮುಖ ಮಾಡಿತ್ತು. ಅದು ಐರ್ಲೆಂಡ್‌ಗೆ ಸೋಲುಣಿಸಿದ ಕಾರಣ ಭಾರತಕ್ಕೆ ನಾಕೌಟ್ ಕದ ತೆರೆಯಲ್ಪಟ್ಟಿತ್ತು.