ವಾಷಿಂಗ್ಟನ್ : ಉಗ್ರ ನಿಗ್ರಹದಲ್ಲಿ ಭಾರತವು ಅಮೆರಿಕದ ಅತ್ಯಂತ ನಿಕಟ ಮತ್ತು ಅತ್ಯದ್ಭುತ ಮೌಲ್ಯದ ಪಾಲುದಾರ ದೇಶವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತೆ ಇಂದು ಗುರುವಾರ ಪ್ರಶಂಸಿಸಿದೆ.
ಉಗ್ರ ನಿಗ್ರಹ ವಿಷಯದಲ್ಲಿ ಉಭಯ ದೇಶಗಳ ಸಹಕಾರಕ್ಕೆ ಅತ್ಯುಜ್ವಲ ಭವಿಷ್ಯವಿದೆ ಎಂದು ಅದು ಹೇಳಿದೆ.
ಟ್ರಂಪ್ ಅವರು ಆಡಳಿತ ವಹಿಸಿಕೊಂಡ ತರುಣದಲ್ಲಿ ನಡೆದಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಮಾತುಕತೆಯು ಅತ್ಯಂತ ಮಹತ್ವದ್ದಾಗಿದ್ದು ಉಗ್ರ ನಿಗ್ರಹ ವಿಷಯದಲ್ಲಿ ಉಭಯ ದೇಶಗಳ ನಡುವೆ ಸದೃಢ ಮತ್ತು ಶಕ್ತಿಯುತ ಪಾಲುದಾರಿಕೆ ಏರ್ಪಡಲು ಕಾರಣೀಭೂತವಾಗಿದೆ ಎಂದು ಅಮೆರಿಕದ ಉಗ್ರ ನಿಗ್ರಹ ಸಂಚಾಲಕ ನಥಾನ್ ಸ್ಯಾಲಿಸ್ ಹೇಳಿದ್ದಾರೆ.
ಐಸಿಸ್ ಉಗ್ರ ಸಂಘಟನೆಯನ್ನು ಸೋಲಿಸುವ ಕಾನೂನು ಅನುಷ್ಠಾನ ಯತ್ನಗಳ ಸಮಾವೇಶದ ಕೊನೆಯಲ್ಲಿ ಸುದ್ದಿಗಾರರೊಂದಿಗೆ ನಡೆಸಿದ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಿದ್ದ ಸ್ಯಾಲಿಸ್ ಅವರು, “ಭಾರತವು ಅಮೆರಿಕದ ಅತ್ಯಂತ ನಿಕಟ ಮತ್ತು ನಂಬಲರ್ಹ ಹಾಗೂ ಪ್ರಬಲ ಉಗ್ರ ನಿಗ್ರಹ ಮಿತ್ರ ದೇಶವಾಗಿದ್ದು ಈ ದಿಶೆಯಲ್ಲಿನ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ, ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಉಜ್ವಲಗೊಳ್ಳಲಿದೆ’ ಎಂದು ಹೇಳಿದರು.