ಹೊಸದಿಲ್ಲಿ : 157 ಜೀವ ಬಲಿಪಡೆದಿರುವ ಇಥಿಯೋಪಿಯನ್ ಏರ್ ಲೈನ್ಸ್ ಬೋಯಿಂಗ್ ವಿಮಾನ ಪತನವನ್ನು ಅನುಸರಿಸಿ ನಾಗರಿಕ ವಾಯು ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿನ್ನೆ ಮಂಗಳವಾರದಿಂದಲೇ ತತ್‌ಕ್ಷಣ ಜಾರಿಗೆ ಬರುವಂತೆ ದೇಶದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಬಳಕೆಯನ್ನು ನಿಷೇಧಿಸಿದೆ.
ಹಾಗಿದ್ದರೂ ದೇಶದಲ್ಲಿನ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ತಮ್ಮಲ್ಲಿನ ಬೋಯಿಂಗ್ ವಿಮಾನಗಳನ್ನು ಬಳಕೆಯಿಂದ ಹೊರಗಿಡುವುದಕ್ಕೆ ಇಂದು ಬುಧವಾರ ಮಧ್ಯಾಹ್ನ 4 ಗಂಟೆಯ ವರೆಗೆ ಕಾಲಾವಕಾಶ ನೀಡಿದೆ. ಜತೆಗೆ ದೇಶದಲ್ಲಿನ ಎಲ್ಲ ವಿಮಾನಯಾನ ಸಂಸ್ಥೆಗಳ ತುರ್ತು ಸಭೆಯನ್ನು ಇಂದು ಬುಧವಾರ ಸಂಜೆ ಕರೆದಿದೆ.
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಿತಿಗತಿ ಮತ್ತು ಬೋಯಿಂಗ್ ವಿಮಾನಗಳನ್ನು ನಿರ್ವಹಣೆ ಸೌಕರ್ಯಗಳ ತಾಣಗಳಲ್ಲಿ ಇರಿಸುವುದಕ್ಕೆ ಅಗತ್ಯವಿರುವ ಸಮಯಾವಕಾಶವನ್ನು ದೃಷ್ಟಿಯಲ್ಲಿರಿಸಿಕೊಂಡು ಬೋಯಿಂಗ್ ವಿಮಾನಗಳನ್ನು ಬಳಕೆಯಿಂದ ಹೊರಗಿಡುವ ಕಾಲಾವಕಾಶ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.
ಭಾರತದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ನಿರ್ವಹಣೆ, ಹಾರಾಟ ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ಇಂದು ಬುಧವಾರ ಮಧ್ಯಾಹ್ನ 4 ಗಂಟೆಯ ತನಕ ಬೋಯಿಂಗ್ ವಿಮಾನಗಳನ್ನು ಬಳಕೆಯಿಂದ ಹೊರಗಿಡುವುದಕ್ಕೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಡಿಜಿಸಿಎ ಸ್ಪಷ್ಟೀಕರಣ ನೀಡಿದೆ.
ಬೋಯಿಂಗ್ 737 ವಿಮಾನಗಳ ಬಳಕೆಯನ್ನು ಚೀನ, ಫ್ರಾನ್ಸ್, ಜರ್ಮನಿ, ಮಲೇಶ್ಯ, ಬ್ರಝಿಲ್, ಆರ್ಜೆಂಟೀನಾ, ಮೆಕ್ಸಿಕೋ, ಯುಕೆ ಮತ್ತು ದಕ್ಷಿಣ ಆಫ್ರಿಕ ದೇಶಗಳು ಈಗಾಗಲೇ ನಿಷೇಧಿಸಿದ್ದು ಈ ಪಟ್ಟಿಗೆ ಈಗ ಭಾರತವೂ ಸೇರಿದೆ.