ನವದೆಹಲಿ: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಸಂಪೂರ್ಣ ರದ್ದಾಗಿದೆ. ಧರ್ಮಶಾಲಾದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯ ಪೂರ್ಣ ಮಳೆಗೆ ಆಹುತಿಯಾಗಿತ್ತು. ಇದೀಗ ಉಳಿದಿರುವ ಎರಡು ಪಂದ್ಯಗಳು ಕೊರೊನಾ ವೈರಸ್‌ಗೆ ಬಲಿಯಾಗಿದೆ.
ಎಲ್ಲಡೆ ಕೊರೊನಾ ಭಯ ಆವರಿಸಿದ್ದು ಆತಂಕ ಸೃಷ್ಟಿಯಾಗಿದೆ. ಇದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರೂ ಕೂಡ ಹೊರತಾಗಿಲ್ಲ. ಭಾರತದಲ್ಲಿ ದಿನೇದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೂಟದಿಂದ ಹಿಂದಕ್ಕೆ ಸರಿಯುವ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು, “ಐಪಿಎಲ್ ಬೆನ್ನಲ್ಲೇ ಭಾರತ-ಆಫ್ರಿಕಾ ಸರಣಿ ಕೂಡ ರದ್ದುಗೊಂಡಿದೆ. ಆಫ್ರಿಕಾ ಆಟಗಾರರು ಸರಣಿಯಲ್ಲಿ ಮುಂದುವರಿಯಲು ಆತಂಕ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದಷ್ಟು ಬೇಗ ತವರಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ ಎಂದರು.
ಕಳೆದ 3 ದಶಕಗಳಲ್ಲಿ ಭಾರತದಲ್ಲಿ ಎರಡನೇ ಸಲ ತಂಡವೊಂದು ಸರಣಿಯನ್ನು ಅರ್ಧದಿಂದಲೇ ಕೈಬಿಟ್ಟು ತೆರಳುತ್ತಿರುವ ದೃಷ್ಟಾಂತ ಇದಾಗಿದೆ. 2014ರಲ್ಲಿ ವಿಂಡೀಸ್ ಮಂಡಳಿಯೊಂದಿಗಿನ ವೇತನ ವಿಚಾರದ ಭಿನ್ನಮತದಿಂದಾಗಿ ಅರ್ಧದಿಂದಲೇ ಭಾರತ ಸರಣಿಯಿಂದ ವಿಂಡೀಸ್ ಕ್ರಿಕೆಟಿಗರು ಹೊರ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಎರಡನೇ ಏಕದಿನ ಪಂದ್ಯ ಲಕ್ನೋದಲ್ಲಿ ಭಾನುವಾರ ನಡೆಯಬೇಕಿತ್ತು. ಅಂತಿಮ ಪಂದ್ಯ ಕೋಲ್ಕತದಲ್ಲಿ ಮಾ.18 ರಂದು ಆಯೋಜನೆಗೊಂಡಿತ್ತು.
ಮತ್ತೆ ಬರಲಿದೆ ಆಫ್ರಿಕಾ
ಭಾರತ-ಆಫ್ರಿಕಾ ಏಕದಿನ ಸರಣಿ ತಾತ್ಕಾಲಿಕವಾಗಿ ರದ್ದುಗೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಮತ್ತೆ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
“ಬಿಸಿಸಿಐ -ಸಿಎಸ್‌ಎ ಜಂಟಿಯಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ’ ಎಂದು ಜಯ್ ಶಾ ತಿಳಿಸಿದ್ದಾರೆ.