“ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ” ಇದು ಭಗವದ್ಗೀತೆಯ 3ನೇ ಅಧ್ಯಾಯದ 14ನೇ ಶ್ಲೋಕದ ಸಾಲುಗಳು. ಈ ಸಾಲುಗಳು ಎಲ್ಲಾ ಜೀವಿಗಳು ಆಹಾರವನ್ನು ಅವಲಂಭಿಸಿಕೊಂಡು ಜೀವಿಸುತ್ತವೆ, ಸುರಿವ ಮಳೆಯು ಭೂಮಿಯಲ್ಲಿ ಆಹಾರವನ್ನು ಬೆಳೆಸುತ್ತದೆ ಎಂದು ತಿಳಿಸುತ್ತದೆ.
ಮಾನವ ಅದೆಷ್ಟೇ ಸಾಧನೆ ಮಾಡಲಿ, ಯಾವುದೇ ಗ್ರಹಕ್ಕೆ ಹೋಗಲಿ ಆದರೆ ಆತನಿಗೆ ಆಹಾರವಿಲ್ಲದೆ ಬಾಳಲು ಅಸಾಧ್ಯ. ಕನಕದಾಸರೇ ತನ್ನ ದಾಸ ಪದಗಳಲ್ಲಿ ಹೇಳಿರುವ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಸಾಲುಗಳೇ ತಿಳಿಸುತ್ತದೆ ಮಾನವನ ಜೀವನ ನಿಂತಿರುವುದು ಸೇವಿಸುವ ಆಹಾರದಲ್ಲಿ ಎಂದು. ಜೀವ ಉಳಿಸಲು ಸ್ವಲ್ಪ ಅನ್ನ, ಮಾನ ಮುಚ್ಚಲು ಬಟ್ಟೆ ಇದಕ್ಕೆಂದೇ ಮಾನವನು ಹಗಲು ರಾತ್ರಿ ಎನ್ನದೆ ದುಡಿಯುತ್ತಾನೆ. ಆದರೆ ಇಡೀ ಪ್ರಪಂಚದಲ್ಲಿ ವರ್ಷಕ್ಕೆ ಅದೆಷ್ಟೋ ಆಹಾರವು ಹಸಿದವನಿಗೆ ಸಿಗದೆ ಮಣ್ಣು ಪಾಲಾಗುತ್ತದೆ.
ಯೂನಿಸೆಫ್ ಸಂಸ್ಥೆಯು ಬಿಡುಗಡೆಗೊಳಿಸಿದ ವರದಿಯ ಪ್ರಕಾರ 2018ರಲ್ಲಿ ಭಾರತದಲ್ಲಿ ಸುಮಾರು 8.8 ಲಕ್ಷದಷ್ಟು ಐದು ವರ್ಷ ವಯಸ್ಸಿಗಿಂತ ಮಕ್ಕಳು ಹಸಿವಿನಿಂದ ಮರಣಹೊಂದಿದ್ದಾರೆ. ಸುಮಾರು 20 ಕೋಟಿ ಜನರು ಖಾಲಿ ಹೊಟ್ಟೆಯಲ್ಲಿ ಮಲಗಿದ್ದಾರೆ. ಒಂದು ದಿನಕ್ಕೆ ಸುಮಾರು 7000 ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ಸುಮಾರು 25 ಲಕ್ಷ ಭಾರತೀಯರು ಹಸಿವಿಗೆ ತುತ್ತಾಗಿದ್ದಾರೆ.
ಆಹಾರದ ಅಗತ್ಯವಿರುವವರಿಗೆ ಸರಿಯಾಗಿ ಆಹಾರ ಲಭಿಸದೇ ಇರುವ ಕಾರಣ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಹೀಗಿದ್ದಾಗ ಅದೆಷ್ಟೋ ಮಂದಿ ಆಹಾರದ ಬೆಲೆ ತಿಳಿಯದೆ ದಿನಕ್ಕೆ ಅದೆಷ್ಟೋ ಆಹಾರವನ್ನು ಪೋಲು ಮಾಡುತ್ತಾರೆ.
ಉಳ್ಳವನಿಗುಂಟು, ಇಲ್ಲದವನಿಗಿಲ್ಲ ಎನ್ನುವಂತೆ ಇಲ್ಲಿ ತಿನ್ನುವವನು ತಿಂದಾನು, ಬಿಟ್ಟರೂ ಬಿಟ್ಟಾನು. ಯಾರು ಕೇಳುವವರಿಲ್ಲ, ಯಾರೂ ಹೇಳುವವರಿಲ್ಲ. ಆದರೆ ಪ್ರಪಂಚದಲ್ಲಿ ಅದೆಷ್ಟೋ ಜನರು ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದಾರೆ.
ಜಗತ್ತಿನಾದ್ಯಾಂತ ಜನಸಂಖ್ಯೆ ಹೆಚ್ಚಾದಂತೆ ಆಹಾರಕ್ಕೆ ಬೇಡಿಕೆಯು ಹೆಚ್ಚಾಗುತ್ತದೆ. ಜೊತೆಗೆ ಆಹಾರ ಪೋಲಾಗುವ ಪ್ರಮಾಣವೂ ಕೂಡ ಅಧಿಕವಾಗುತ್ತದೆ.
ಶ್ರೀಮಂತ ರಾಷ್ಟ್ರಗಳಲ್ಲಿ ಅತಿಯಾದ ಆಹಾರ ಖರೀದಿ, ಆಹಾರದ ಗುಣಮಟ್ಟ ಹೀಗೆ ಹಲವಾರು ಕಾರಣಗಳಿಂದ ಆಹಾರ ಪೋಲಾದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸರಿಯಾಗಿ ಆಹಾರ ಪೂರೈಕೆಯಿಲ್ಲದೆ, ಆಹಾರ ಸಂಗ್ರಹಣೆಯಲ್ಲಿನ ಅವ್ಯವಸ್ಥೆಯಿಂದಾಗಿ, ಆರ್ಥಿಕ ಸಮಸ್ಯೆಯಿಂದಾಗಿ ಆಹಾರ ಪೋಲಾಗಲು ಅಥವಾ ನಷ್ಟವಾಗಲು ಕಾರಣವಾಗುತ್ತದೆ.
ವಿಶ್ವ ಜನಸಂಖ್ಯಾ ಪರಿಶೀಲನಾ ವರದಿ 2024 (World Population Review Report 2024) ಯಾವೆಲ್ಲಾ ದೇಶಗಳು ಹೆಚ್ಚು ಆಹಾರ ಪೋಲು ಮಾಡಿದೆ ಎಂದು ತಿಳಿಸಿದೆ.
ವಿಶ್ವದಲ್ಲಿಯೇ ಅತಿ ಹೆಚ್ಚು ಆಹಾರ ಪೋಲು ಮಾಡುವ ದೇಶದ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಇಲ್ಲಿ ವರ್ಷಕ್ಕೆ ಸುಮಾರು 91 ಮಿಲಿಯನ್ ಟನ್ ಗಳಷ್ಟು ಆಹಾರ ಪೋಲಾಗುತ್ತದೆ ಎಂದು ವಿಶ್ವ ಜನಸಂಖ್ಯಾ ಪರಿಶೀಲನಾ ವರದಿ ತಿಳಿಸಿದೆ. 2022 ರ ವರದಿಯ ಪ್ರಕಾರ ಚೀನಾ ಸುಮಾರು 108 ಮಿಲಿಯನ್ ಟನ್ ಗಳಷ್ಟು ಆಹಾರ ಪೋಲು ಮಾಡಿತ್ತು. ಚೀನಾ ದೇಶವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, ವರ್ಷಕ್ಕೆ ಅಧಿಕ ಆಹಾರ ಪೋಲಾಗಲು ಇದೇ ಪ್ರಮುಖ ಕಾರಣ ಇರಬಹುದು ಎಂದು ಅಂದಾಜಿಸಬಹುದು.
ಎರಡನೇಯ ಸ್ಥಾನದಲ್ಲಿ ಭಾರತವು ಇದ್ದು, ಇಲ್ಲಿ ವರ್ಷಕ್ಕೆ ಸುಮಾರು 68 ಮಿಲಿಯನ್ ಟನ್ ಗಳಿಗಿಂತಲೂ ಹೆಚ್ಚು ಆಹಾರ ಪೋಲಾಗಿದೆ. 2022 ರ ವರದಿಯ ಪ್ರಕಾರ ಭಾರತ ದೇಶದಲ್ಲಿ ಸುಮಾರು 78 ಮಿಲಿಯನ್ ಟನ್ ಗಳಷ್ಟು ಆಹಾರ ಪೋಲಾಗಿದೆ. ಜೊತೆಗೆ ಗ್ಲೋಬಲ್ ಹಂಗರ್ ಇಂಡೆಕ್ಸ್ (Global Hunger Index) 2024ರ ಪ್ರಕಾರ ಭಾರತವು ಒಟ್ಟು 125 ದೇಶಗಳಲ್ಲಿ 105 ನೇ ಸ್ಥಾನದಲ್ಲಿದೆ. ಇದು ದೇಶದೊಳಗಿನ ಹಸಿವಿನ ತೀವ್ರತೆಯ ಗಂಭೀರ ಮಟ್ಟವನ್ನು ಸೂಚಿಸುತ್ತದೆ. ಚೀನಾದಂತೆಯೇ ಭಾರತವೂ ಅತಿ ಹೆಚ್ಚಿನ ಜನ ಸಂಖ್ಯೆ ಹೊಂದಿರುವುದು ಹೆಚ್ಚಿನ ಆಹಾರ ಪೋಲಾಗುವಿಕೆಗೆ ಕಾರಣವಾಗಿರಬಹುದು.
ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೇರಿಕ ಮೂರನೇ ಸ್ಥಾನದಲ್ಲಿದ್ದು, ಇದು ವರ್ಷಕ್ಕೆ ಸುಮಾರು 19 ಮಿಲಿಯನ್ ಗಳಷ್ಟು ಆಹಾರವನ್ನು ಪೋಲು ಮಾಡುತ್ತದೆ ಎಂದು ವರದಿ ತಿಳಿಸಿದೆ.
ನಂತರದ ಸ್ಥಾನಗಳಲ್ಲಿ ಜಪಾನ್ 8 ಮಿಲಿಯನ್ ಟನ್, ಜರ್ಮನಿ 4 ಮಿಲಿಯನ್ ಟನ್, ಫ್ರಾನ್ಸ್ 5 ಮಿಲಿಯನ್ ಟನ್, ಯುಕೆ 5 ಮಿಲಿಯನ್ ಟನ್, ರಷ್ಯಾ 4 ಮಿಲಿಯನ್ ಟನ್, ಸ್ಪೇನ್ 3 ಮಿಲಿಯನ್ ಟನ್, ಆಸ್ಟ್ರೇಲಿಯಾ 2 ಮಿಲಿಯನ್ ಟನ್ ಗಳಷ್ಟು ಆಹಾರವನ್ನು ಒಂದು ವರ್ಷದಲ್ಲಿ ಪೋಲು ಮಾಡಿದೆ ಎಂದು ವರದಿಯು ತಿಳಿಸಿದೆ.
ಆಹಾರವನ್ನು ಪೋಲು ಮಾಡುವುದರಿಂದ ಪರಸರ ಮತ್ತು ಜಾಗತಿಕ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಆಹಾರ ಪೋಲು ಮಾಡುವುದರಿಂದ ಸಂಪನ್ಮೂಲ ವ್ಯರ್ಥವಾಗುವುದರ ಜೊತೆಗೆ ದೇಶದ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಪ್ರಪಂಚದಾದ್ಯಂತ ಪ್ರತಿ ವರ್ಷ, ಲಕ್ಷಾಂತರ ಟನ್ ಗಳಷ್ಟು ಆಹಾರ ನಷ್ಟವಾಗುತ್ತದೆ.
ಇವುಗಳಲ್ಲಿ ಅಭಿವೃದ್ಧಿ ಹೊಂದಿರುವ ದೇಶವೂ ಇದೆ, ಅಭಿವೃದ್ಧಿ ಹೊಂದುತ್ತಿರುವ ದೇಶವೂ ಇದೆ. ಒಂದು ದೇಶದ ಅಭಿವೃದ್ಧಿಗೆ ಆಹಾರ ಪೋಲು ಮಾರಕವಾಗುತ್ತದೆ. ಅದೆಷ್ಟೋ ಹಸಿವಿನಿಂದ ಬಳಲುವ ಜನರ ಮರಣ ಪ್ರಮಾಣ ಹೆಚ್ಚಾಗುವಲ್ಲಿ ಇದು ಪ್ರಮುಖ ಕಾರಣವಾಗುತ್ತದೆ.
-ಪೂರ್ಣಶ್ರೀ.ಕೆ