Advertisement

ನನ್ನ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತ  3ನೇ ಅತೀದೊಡ್ಡ ಆರ್ಥಿಕತೆ: ಮೋದಿ

12:31 AM Dec 18, 2023 | Team Udayavani |

ಸೂರತ್‌/ವಾರಾಣಸಿ: “ಕಳೆದ 10 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲೇ 5ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದುನಿಂತಿದೆ. ಈಗ ನನ್ನ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತವು ಜಗತ್ತಿನ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಇದು ಮೋದಿಯ ಗ್ಯಾರಂಟಿ”.

Advertisement

ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಗುಜರಾತ್‌ನಲ್ಲಿ ರವಿವಾರ ವಿಶ್ವದ ಅತೀದೊಡ್ಡ ಕಾರ್ಪೊರೇಟ್‌ ಕಚೇರಿ “ಸೂರತ್‌ ಡೈಮಂಡ್‌ ಬೋರ್ಸ್‌” ಉದ್ಘಾಟಿಸಿದ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೇರಿ, ನಾನೇ ಪ್ರಧಾನಿಯಾಗುತ್ತೇನೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

“ನಮ್ಮ ಸರಕಾರ‌ವು ಮುಂದಿನ 25 ವರ್ಷಗಳ ಅವಧಿಗೆ ಟಾರ್ಗೆಟ್‌ ಹಾಕಿಕೊಂಡಿದೆ. ದೇಶವನ್ನು 5-10 ಲಕ್ಷಕೋಟಿ ಡಾಲರ್‌ನ ಆರ್ಥಿಕತೆಯಾಗಿ ರೂಪಿಸುವ ಮತ್ತು ರಫ್ತು ಪ್ರಮಾಣವನ್ನು ದಾಖಲೆ ಮಟ್ಟಕ್ಕೇರಿಸುವ ಗುರಿಯನ್ನೂ ಹಾಕಿಕೊಂಡಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

ನವಭಾರತದ ಸಂಕೇತ: ಸೂರತ್‌ ಡೈಮಂಡ್‌ ಬೋರ್ಸ್‌ ಎನ್ನುವುದು ನವಭಾರತದ ಶಕ್ತಿ ಮತ್ತು ಬದ್ಧತೆಯ ಸಂಕೇತ. ಈಗಾಗಲೇ ಸೂರತ್‌ನ ವಜ್ರೋದ್ಯಮವು 8 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ಈಗ ಹೊಸ ಬೋರ್ಸ್‌ ಉದ್ಘಾಟನೆ ಮೂಲಕ ಮತ್ತೆ 1.5 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದೂ ಮೋದಿ ಹೇಳಿದ್ದಾರೆ. ಸೂರತ್‌ನ ಕಿರೀಟಕ್ಕೆ ಮತ್ತೂಂದು ವಜ್ರ ಸೇರ್ಪಡೆಯಾಗಿದೆ. ಅದು ಸಣ್ಣ ವಜ್ರವಲ್ಲ, ವಿಶ್ವದಲ್ಲೇ ಶ್ರೇಷ್ಠವಾದದ್ದು ಎಂದೂ ಹೇಳಿದ್ದಾರೆ.

ಕಾಶಿ ತಮಿಳ್‌ ಸಂಗಮಮ್‌ 2.0ಗೆ ಚಾಲನೆ

Advertisement

ವಾರಾಣಸಿಯ ನಮೋ ಘಾಟ್‌ನಲ್ಲಿ ರವಿವಾರ ಸಂಜೆ ಪ್ರಧಾನಿ ಮೋದಿಯವರು ಕಾಶಿ ತಮಿಳ್‌ ಸಂಗಮಮ್‌ 2ನೇ ಆವೃತ್ತಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವು ಏಕ ಭಾರತ-ಶ್ರೇಷ್ಠ ಭಾರತದ ಪರಿಕಲ್ಪನೆಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕನ್ಯಾಕುಮಾರಿ-ವಾರಾಣಸಿ ತಮಿಳ್‌ ಸಂಗಮಮ್‌ ರೈಲಿಗೂ ಹಸುರು ನಿಶಾನೆ ತೋರಿದ್ದಾರೆ. ಡಿ.17ರಿಂದ 31ರವರೆಗೆ ಸಂಗಮಮ್‌ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳು, ರೈತರು, ಶಿಕ್ಷಕರು ಸೇರಿ 1,400ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

ಏನಿದು ಡೈಮಂಡ್‌ ಬೋರ್ಸ್‌?

-ಸೂರತ್‌ ನಗರದ ಖಜೋಡ್‌ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತೀದೊಡ್ಡ ಕಾರ್ಪೊರೇಟ್‌ ಕಚೇರಿ ಅಂತಾರಾಷ್ಟ್ರೀಯ ವಜ್ರ, ಆಭರಣ ವ್ಯವಹಾರಗಳ ಕೇಂದ್ರವಿದು

-ಇಲ್ಲಿ ಒರಟು ಮತ್ತು ಪಾಲಿಶ್‌ ಮಾಡಿದ ವಜ್ರಗಳ ವ್ಯಾಪಾರ ನಡೆಯುತ್ತದೆ

-ಸುಮಾರು 4,200 ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಬಹುದು

-ಎಲ್ಲ ವಜ್ರ ಸಂಬಂಧಿ ಮೂಲಸೌಕರ್ಯಗಳು ಇಲ್ಲಿವೆ.

-ವಜ್ರ ಪ್ರಮಾಣಪತ್ರ ಕಂಪೆನಿಗಳು, ಡೈಮಂಡ್‌ ಪ್ಲ್ರಾನಿಂಗ್‌ ಸಾಫ್ಟ್ವೇರ್‌, ಮಾರಾಟ ಕೇಂದ್ರಗಳು, ವಜ್ರ ಉತ್ಪಾದನೆಯ ಸಾಧನಗಳು, ಆಮದು ಮತ್ತು ರಫ್ತಿಗೆ ಕಸ್ಟಮ್ಸ್‌ ಕ್ಲಿಯರೆನ್ಸ್‌ ಹೌಸ್‌, ಜ್ಯುವೆಲ್ಲರಿ ಮಾಲ್‌ಗಳು, ಅಂತಾ

-ರಾಷ್ಟ್ರೀಯಬ್ಯಾಂಕಿಂಗ್‌, ಸುರಕ್ಷಾ ವಾಲ್ಟ್‌ಗಳು ಇತ್ಯಾದಿಗಳಿವೆ.

ಸೂರತ್‌ ವಿಮಾನ ನಿಲ್ದಾಣಕ್ಕೆ ಈಗ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಗರಿ

ಪ್ರಧಾನಿ ಮೋದಿಯವರು ರವಿವಾರ ಸೂರತ್‌ ಏರ್‌ಪೋರ್ಟ್‌ನ ಹೊಸ ಟರ್ಮಿನಲ್‌ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಸೂರತ್‌ ವಿಮಾನನಿಲ್ದಾಣವು ಈಗ “ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂಬ ಸ್ಥಾನಮಾನ ಗಳಿಸಿದೆ. ಇದನ್ನೂ ಸೇರಿಸಿದರೆ ಗುಜರಾತ್‌ ಈಗ ಒಟ್ಟು 3 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದಂತಾಗಿದೆ. ಹೊಸ ಟರ್ಮಿನಲ್‌ ಕಟ್ಟಡವು 1,200 ದೇಶೀಯ ಪ್ರಯಾಣಿಕರು, 600 ವಿದೇಶಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next