Advertisement

ನಗರದಾದ್ಯಂತ ಸ್ವತಂತ್ರ್ಯದಿನದ ಪುಳಕ

12:58 PM Aug 16, 2018 | Team Udayavani |

ಬೆಂಗಳೂರು: ಎಲ್ಲೆಲ್ಲೂ ಹಾರಾಡುತ್ತಿರುವ ತಿರಂಗ ಧ್ವಜಗಳು, ಶ್ವೇತ ವರ್ಣದ ವಸ್ತ್ರ ಧರಿಸಿದ ಯುವಕರು, ದೇಶಭಕ್ತಿ ಸಾರುವ ನೃತ್ಯ -ನಾಟಕಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡ ಶಾಲಾ ಮಕ್ಕಳು, ವಂದೇ ಮಾತರಂ, ಸಾರೇ ಜಹಾಂ ಸೇ ಅಚ್ಛಾ ಗೀತೆಗಳ ಗಾಯನ… ಬೆಂಗಳೂರಿನಾದ್ಯಂತ 72ನೇ ಸ್ವಾತಂತ್ರೊéàತ್ಸವ ದಿನಾಚರಣೆಯ ಅಂಗವಾಗಿ ಬುಧವಾರ ಕಂಡಂತಹ ದೃಶ್ಯಗಳಿವು. 

Advertisement

ನಗರದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ಮಾಡಿ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ವಿವಿಧ ಸಂಘ – ಸಂಸ್ಥೆಗಳು ಸಾಮಾಜಿಕ ಕಾರ್ಯಗಳು ಹಾಗೂ ವಿನೂತನ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಹೈಕೋರ್ಟ್‌ ಮುಂಭಾಗದಲ್ಲಿ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಅವರು ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು. ಸಮಾರಂಭದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ಹೈಕೋರ್ಟ್‌ ಸಿಬ್ಬಂದಿಗಳು ಕುಟುಂಬ ಸದಸ್ಯರೊಂದಿಗೆ ಭಾಗಿಯಾಗಿದ್ದರು. 

ಲೋಕಾಯುಕ್ತರ ಕಚೇರಿಯಲ್ಲಿ ನಡೆದ ಧ್ವಜಾರೋಹಣವನ್ನು ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ನೆರವೇರಿಸಿದರು. ಈ ವೇಳೆ ಉಪ ಲೋಕಾಯುಕ್ತ ಎನ್‌.ಆನಂದ್‌, ರಿಜಿಸ್ಟ್ರಾರ್‌ ಆನಂದ್‌ ಹೋಗಾಡೆ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು. 

ಅದೇ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಈ ವೇಳೆ ಸ್ವಾತಂತ್ರ್ಯ ದಿನದ ಅಂಗವಾಗಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಅವರ ಮಕ್ಕಳಿಗಾಗಿ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ಬಹುಮಾನ ವಿತರಿಸಿದರು. 

Advertisement

ಕಸಾಪ ಆವರಣದಲ್ಲಿ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌  ನೆರವೇರಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೆಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಸೇರಿದಂತೆ ಪ್ರಮುಖರಿದ್ದರು.

ತಿರಂಗ ಆಟೋಗಳ ಸಂಚಾರ: ಕೆಲವಡೆ ಆಟೋಗಳನ್ನು ಸಂಪೂರ್ಣವಾಗಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವಾಗಿಸುವ ಮೂಲಕ ಆಟೋ ಚಾಲಕರು ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದರು. ಸಹಕಾರ ನಗರದ ಪ್ರಕಾಶ್‌ ಚಿರು ಅವರ ತಂಡವು ಸುಮಾರು 6 ಕೆ.ಜಿ. ಉಲ್ಲನ್‌ ಬಳಸಿ ಆಟೋಗಳನ್ನು ಸಂಪೂರ್ಣ ಕೇಸರಿ, ಬಿಳಿ ಹಾಗೂ ಹಸಿರಿನಿಂದ ಅಲಂಕರಿಸಿದ್ದು ಆಕರ್ಷಣಿಯವಾಗಿತ್ತು. 

ವಿವಿಯಲ್ಲಿ ಸ್ವಾತಂತ್ರ್ಯ ದಿನ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ಮಾಡಿದರು. ಈ ವೇಳೆ ಕುಲಸಚಿವ ಪ್ರೊ.ಬಿ.ಕೆ.ರವಿ, ಕುಲಸಚಿವ (ಮೌಲ್ಯಮಾಪನ) ಪ್ರೊ.ಶಿವರಾಜು ಸೇರಿದಂತೆ ಹಲವರು ಹಾಜರಿದ್ದರು.

ಶಾಲೆಗೆ ಹೊಸ ರೂಪ: ನನ್ನ ಆರೋಗ್ಯ ನನ್ನ ಭಾರತ ಅಭಿಯಾನ ಮತ್ತು 72ನೇ ಸ್ವಾತಂತ್ರೊತ್ಸವದ ಅಂಗವಾಗಿ ಆಸ್ಟೆರ್‌ ಸಿಎಂಐ ಆಸ್ಪತ್ರೆಯ ಸ್ವಯಂ ಸೇವಕರು ಹೆಬ್ಟಾಳ ವಾರ್ಡ್‌ನ ಕುಂತಿ ಗ್ರಾಮದಲ್ಲಿರುವ ಹಳೆಯ ಸರ್ಕಾರಿ ಶಾಲೆಯನ್ನು ನವೀಕರಣಗೊಳಿಸಿದ್ದಾರೆ. ಅದರಂತೆ ಶಾಲೆಯ ಪರಿಸರ ಸ್ವತ್ಛಗೊಳಿಸಿದ್ದು, ಶಾಲೆಯ ಗೋಡೆಗೆ ಬಣ್ಣ ಬಳಿದು ಆರೋಗ್ಯ ಹಾಗೂ ಶುಚಿತ್ವದ ಬಗ್ಗೆ ಸಂದೇಶ ಬರೆದಿದ್ದರು.

ವೇಷಧಾರಿ ಪುಟಾಣಿಗಳು: ನಗರದ ಸೇಂಟ್‌ ಮಾಕ್ಸ್‌ ಇಂಗ್ಲಿಷ್‌ ಶಾಲೆಯಲ್ಲಿ ಸ್ವಾತಂತ್ರೊತ್ಸವದ ಅಂಗವಾಗಿ ಪುಟಾಣಿ ಮಕ್ಕಳು ಮಹಾತ್ಮ ಗಾಂಧೀಜಿ, ಸೈನಿಕರ ವೇಷಧಾರಿಗಳಾಗಿ ನೀಡಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಣಿಯವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next