Advertisement

Independence Day; ಮೂಲಸೌಕರ್ಯ ಬಲಪಡಿಸಲು ಅನುದಾನ: ಸಚಿವ ದಿನೇಶ್‌ ಗುಂಡೂರಾವ್‌

12:23 AM Aug 16, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರವು ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸಿ, ಉತ್ತಮ ನಾಗರಿಕ ಸೌಲಭ್ಯಗಳನ್ನು ನೀಡಲು ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಅವರು ಗುರುವಾರ ನೆಹರೂ ಮೈದಾನದಲ್ಲಿ ಜರಗಿದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯ ಮತ್ತು ಉನ್ನತೀಕರಣಕ್ಕಾಗಿ ಈ ಸಾಲಿನಲ್ಲಿ 19 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 4 ಕೋಟಿ ರೂ. ಹಾಗೂ ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗೆ 1.40 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 600ಕ್ಕಿಂತ ಹೆಚ್ಚಿನ ಫಲಾನುಭವಿಗಳು ಪ್ರಯೋಜನವನ್ನು ಪಡೆದಿರುತ್ತಾರೆ. ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆ ಜಿಲ್ಲೆಯಲ್ಲಿ ಕಳೆದ ಎಪ್ರಿಲ್‌ನಿಂದ ಜಾರಿಯಾಗಿದ್ದು, ಇದರಡಿಯಲ್ಲಿ 3,534 ಮಂದಿಗೆ ಇಸಿಜಿಯನ್ನು, ಅದರಲ್ಲಿ 61 ಮಂದಿಗೆ ಟೆಲಿಕನ್ಸಲ್‌ಟೇಷನ್‌ ಮೂಲಕ ಉನ್ನತ ಮಟ್ಟದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗಿರುತ್ತದೆ ಎಂದರು.

Advertisement

ಇಂದಿರಾ ಕ್ಯಾಂಟೀನ್‌
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5, ಉಳ್ಳಾಲ ನಗರಸಭೆ, ಬಂಟ್ವಾಳ ಪುರಸಭೆ, ಪುತ್ತೂರು ನಗರಸಭೆ ಹಾಗೂ ಸುಳ್ಯ ನಗರ ಪಂಚಾಯತ್‌, ತಲಾ 1 ಸಹಿತ 9 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 10 ಕ್ಯಾಂಟೀನ್‌ಗಳು ಮಂಜೂರಾಗಿದ್ದು, ಈ ಪೈಕಿ 6ರ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ಬಹುಮಾನ ವಿತರಣೆ
ಎಸೆಸೆಲ್ಸಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹು ಮಾನ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಿಂದ ಮೌಲಾನಾ ಅಬುಲ್‌ ಕಲಾಂ ಆಝಾದ್‌ ಪ್ರತಿಭಾ ಪುರಸ್ಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂಗಾಂಗ ದಾನ ಮಾಡಿದ ಕುಟುಂಬಗಳಿಗೆ ಗೌರವ, ಡೆಂಗ್ಯೂ ನಿಯಂತ್ರಣ ರೀಲ್ಸ್‌ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕ್ರಮ ಅಗತ್ಯ
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಭಾರತೀಯರಾದ ನಮ್ಮೆಲ್ಲರಿಗೂ ಗಾಬರಿ ತರಿಸಿದೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾಕ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಮಟ್ಟದ ಕ್ರಮಗಳನ್ನು ಕೈಗೊಳ್ಳಬೇಕು. ಭಾರತ ಸಹಿತ ಜಗತ್ತಿನಾದ್ಯಂತ ಅಲ್ಪಸಂಖ್ಯಾಕರ ರಕ್ಷಣೆಯು ಬಹುಸಂಖ್ಯಾಕ ಜನರ ಕರ್ತವ್ಯವೆಂದು ಭಾವಿಸಬೇಕು. ಸಕಲ ಮಾನವ ಸಂಕುಲ ಶಾಂತಿ ಮತ್ತು ಸೌಹಾರ್ದದಿಂದ ಬಾಳಲಿ ಎಂಬುದು ನಮ್ಮ ಸಂಕಲ್ಪ ಎಂದು ದಿನೇಶ್‌ ಗುಂಡೂರಾವ್‌ ಆಶಯ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next