Advertisement

Independence Day: Mangalore-ತುಳುನಾಡಿನಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ

01:09 PM Aug 15, 2023 | Team Udayavani |

ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 ಎಂದು ಅಧಿಕೃತವಾಗಿ ಉಲ್ಲೇಖವಿದ್ದರೂ ಅದಕ್ಕಿಂತಲೂ ಎರಡು ದಶಕ ಮೊದಲೇ ಅಂದರೆ 1837ರಲ್ಲಿ ಕರಾವಳಿಯಲ್ಲಿ ರೈತ ಸಮರವೊಂದು ನಡೆದಿತ್ತು. ಅದು ಈ ಭಾಗದಲ್ಲಿ ನಡೆದ ಪ್ರಮುಖ ಸ್ವಾತಂತ್ರ್ಯ ಸಮರ ಮತ್ತು ದೇಶದ ಮೊದಲ ಸಂಗ್ರಾಮ ಎಂದೂ ಹೇಳಬಹುದು. ಇದು ಅಮರಸುಳ್ಯ ಸ್ವಾತಂತ್ರ್ಯ ಸಮರ ಎಂದೇ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಕೆದಂಬಾಡಿ ರಾಮಯ್ಯ ಗೌಡರು.

Advertisement

ಮೈಸೂರಿನಲ್ಲಿ ಟಿಪ್ಪು ಸುಲ್ತಾನನ ಆಳ್ವಿಕೆ ಕೊನೆಗೊಂಡ ಅನಂತರ ಆತನ ವಶದಲ್ಲಿದ್ದ ಮಂಗಳೂರು ಮತ್ತು ಸುತ್ತಮುತ್ತಲಿನ
ಪ್ರದೇಶ ವಸಾಹತುಶಾಹಿಗಳ ಹಿಡಿತಕ್ಕೆ ಸಿಕ್ಕಿತ್ತು. ಆದರೂ ತುಳುನಾಡಿನ ಒಂದು ಭಾಗ ಮತ್ತು ಸದ್ಯದ ಕೊಡಗನ್ನು ಹಾಲೇರಿ ರಾಜವಂಶಸ್ಥರು ಆಳುತ್ತಿದ್ದರು. ಲಿಂಗರಾಜ ಒಡೆಯರು ರಾಜನಾಗಿದ್ದರು. ಸುಳ್ಯದ ಮಿತ್ತೂರು ನಾಯರ್‌ ಉಲ್ಲಾಕುಲು ಕ್ಷೇತ್ರದ ಮೊಕ್ತೇಸರ ಮತ್ತು ಆ ಭಾಗದ ಜಮೀನ್ದಾರರಾಗಿ ಕೆದಂಬಾಡಿ ರಾಮಯ್ಯ ಗೌಡರು ಒಡೆಯರ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು.

1830ರ ಆಸುಪಾಸಿನಲ್ಲಿ ವಸಾಹತುಶಾಹಿಗಳ ಕಿರುಕುಳ ಹೆಚ್ಚಾಯಿತು. ಇದರ ವಿರುದ್ಧ ಜನಜಾಗೃತಿ, ಸಂಘಟನೆ, ಶಸ್ತ್ರಾಸ್ತ್ರ
ಕ್ರೋಡೀಕರಣ ಕಾರ್ಯಗಳು ನಡೆದವು. ಇದರಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಪ್ರಮುಖ ಪಾತ್ರ ವಹಿಸಿದ್ದರು. 1837ರಲ್ಲಿ ತಮ್ಮ ಮಗನ ಮದುವೆ ಎಂದು ಡಂಗುರ ಹೊಡೆಸಿದ ರಾಮಯ್ಯ ಗೌಡರು ಹೋರಾಟಕ್ಕೆ ಅಣಿ ಮಾಡಿದ್ದರು. ಸುಮಾರು 2 ಸಾವಿರ ಜನರನ್ನು ಸೇರಿಸಿದ್ದರು.

1837ರ ಮಾ.30ರಂದು ರೈತ ಹೋರಾಟಗಾರರ ಸೈನ್ಯ ಆಯುಧಗಳೊಂದಿಗೆ ಬೆಳ್ಳಾರೆಗೆ ಸಾಗಿ ಅಲ್ಲಿ ಕಂಪೆನಿಯ ಖಜಾನೆ ವಶಪಡಿಸಿತು. ಬೆಳ್ಳಾರೆಯಲ್ಲಿ ರೈತ ಸೈನ್ಯ ನಾಲ್ಕು ತಂಡಗಳಾಗಿ ಬೇರೆ ಬೇರೆ ಕಡೆ ಹೊರಟವು. ರಾಮಯ್ಯಗೌಡ ನೇತೃತ್ವದ ತಂಡ ಮಂಡಳೂರು ಕಡೆ ಹೊರಟು, ಪುತ್ತೂರು, ಪಾಣೆಮಂಗಳೂರಿನಲ್ಲಿ ಬ್ರಿಟಿಷ್‌ ನೆಲೆಗಳನ್ನು ವಶಪಡಿಸಿಕೊಂಡಿತು. ಮಂಗಳೂರಿಗೆ ತಲುಪುವಾಗ ತಂಡದಲ್ಲಿದ್ದ ಜನರ ಸಂಖ್ಯೆ 10 ಸಾವಿರ ಆಗಿತ್ತು.

ಮಂಗಳೂರಿನ ಬಾವುಟಗುಡ್ಡೆಯ ಲೈಟ್‌ಹೌಸ್‌ ಪ್ರದೇಶ ಆಗ ಈಸ್ಟ್‌ ಇಂಡಿಯಾ ಕಂಪೆನಿಯ ದಕ್ಷಿಣ ಭಾರತದ ಹೆಡ್‌ ಕ್ವಾಟರ್ಸ್‌
ಆಗಿತ್ತು. ಅಲ್ಲಿದ್ದ ಬ್ರಿಟಿಷ್‌ ಬಂಗಲೆಗಳಿಗೆ ಬೆಂಕಿ ಹಚ್ಚಲಾಯಿತು. ಲೈಟ್‌ಹೌಸ್‌ನಲ್ಲಿ ಸ್ಥಾಪಿಸಲಾಗಿದ್ದ ಧ್ವಜಸ್ತಂಭದ ಮೇಲಿನ
ಈಸ್ಟ್‌ ಇಂಡಿಯಾ ಕಂಪೆನಿ ಧ್ವಜ ಕೆಳಗಿಳಿಸಿ, ರಾಜಲಾಂಛನದ ಧ್ವಜವನ್ನು ಹಾರಿಸಲಾಯಿತು. ಎ.5ರಿಂದ 18ರ ವರೆಗೆ 13 ದಿನ ರಾಮಯ್ಯಗೌಡರ ನೇತೃತ್ವದಲ್ಲಿ ತುಳುನಾಡಿನ ಆಳ್ವಿಕೆ ನಡೆಯಿತು. ಇದರಿಂದ ಕುಪಿತರಾದ ಬ್ರಿಟಿಷರು ಮುಂಬಯಿ,
ಕಲ್ಲಿಕೋಟೆಯಿಂದ ಸೈನ್ಯ, ಮದ್ದು ಗುಂಡು, ಯುದ್ಧ ಸಾಮಗ್ರಿಗಳನ್ನು ತರಿಸಿಕೊಂಡರು. ಬ್ರಿಟಿಷರ ಸೇನೆ ಮತ್ತು ರೈತ ಸೈನ್ಯದ ನಡುವೆ ಭೀಕರ ಯುದ್ಧ ನಡೆಯಿತು. ಇದರಲ್ಲಿ ಹೋರಾಟಗಾರರು ಸೋಲು ಅನುಭವಿಸಿದರು. ಪ್ರಮುಖ ಪಾತ್ರ ವಹಿಸಿದ್ದ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿಯ ಮಂಜ, ಪುಟ್ಟಬಸವನನ್ನು ಈಗಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿ, ಕ್ರೂರವಾಗಿ ಕೊಲ್ಲಲಾಯಿತು.

Advertisement

ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ ಸಹಿತ ಹಲವರನ್ನು ಬೋನಿನಲ್ಲಿರಿಸಿ ಹೊರ ದೇಶಗಳಿಗೆ ಗಡಿಪಾರು
ಮಾಡಲಾಯಿತು. ಅಂದು ನಡೆದಿದ್ದ ಈ ಎಲ್ಲ ವಿಚಾರಗಳು ಕೋರ್ಟ್‌ ಪ್ರೊಸಿಡಿಂಗ್ಸ್‌, ಆಗಿನ ಬ್ರಿಟಿಷ್‌ ಮುಖ್ಯಸ್ಥನಾಗಿದ್ದ ಕ್ಯಾಪ್ಟನ್‌
ಲೆವಿನ್‌ನ ಆರ್ಡ್‌ರ್‌ ಮತ್ತು ಕೊಡಗು ಗಜೆಟಿಯರ್‌ನಲ್ಲಿ ದಾಖಲಾಗಿವೆ.

ಸ್ವಾತಂತ್ರ್ಯ ಹೋರಾಟವನ್ನು ಶಾಶ್ವತವಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಆ ಮೂಲಕ ಚರಿತ್ರೆ ಮುಂದಿನ ತಲೆಮಾರಿಗೆ ಶಾಶ್ವತವಾಗಿ ದೊರಕುವಂತೆ ಮಾಡಲಾಗಿದೆ ಎನ್ನುತ್ತಾರೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ಥಾಪನೆ ಸಮಿತಿ ಅಧ್ಯಕ್ಷ ಕಿರಣ್‌ ಬುಡ್ಲೆಗುತ್ತು.

ಮಂಗಳೂರಿಗೆ ಗಾಂಧೀಜಿ ಭೇಟಿಯ ಹೆಜ್ಜೆಗಳು
ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರು ಮೂರು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದರು.
ಅಸಹಕಾರ ಚಳವಳಿ ಪ್ರಾರಂಭಿಸಿ ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡಿದ್ದ ಮಹಾತ್ಮಾ ಗಾಂಧೀಜಿಯವರು 1920ರಲ್ಲಿ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಆ.19ರಂದು ರೈಲಿನಲ್ಲಿ ಮಂಗಳೂರಿಗೆ ಆಗಮಿಸಿ, ಹತ್ತು ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಈ ಸಂದರ್ಭದಲ್ಲಿ ಗಾಂಧೀಜಿಯವರು ಕೊಡಿಯಾಲ್‌ಬೈಲ್‌ ಸಮೀಪದ ಮನೆಯಲ್ಲಿ ತಂಗಿದ್ದರು. ಅವರ ಮೊದಲ ಭೇಟಿ ಸಂದರ್ಭ ಅವರನ್ನು ರೈಲು ನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆತರಲಾಗಿತ್ತು. ಈ ಮೆರವಣಿಗೆ ಹಂಪನಕಟ್ಟೆ, ಕಾರ್‌ ಸ್ಟ್ರೀಟ್‌, ಮಾರ್ಕೆಟ್‌, ಬಂದರು ಮೂಲಕ ಸಾಗಿತ್ತು ಎಂದು “ಮಂಗಳೂರು ದರ್ಶನ’ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

ಖಾದಿ ಪ್ರಚಾರ ಪ್ರವಾಸದ ಭಾಗವಾಗಿ ಎರಡನೇ ಬಾರಿ 1927ರ ಅ.26ರಂದು ಮಂಗಳೂರಿಗೆ ಭೇಟಿ ನೀಡಿದ್ದರು. ನಗರದ ಕೆನರಾ ಶಾಲೆಯ ಭುವನೇಂದ್ರ ಹಾಲ್‌ನಲ್ಲಿ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಅನಾವರಣಗೊಳಿಸಿದ್ದರು. ಬಡವರ ಸಹಾಯಕ್ಕಾಗಿ ಜನರಿಂದ ದೇಣಿಗೆ, ಕಾಣಿಕೆ ಸ್ವೀಕರಿಸಿದ್ದರು.

ಅಸ್ಪೃಶ್ಯರ ಏಳಿಗೆಯ ಕಾರಣಕ್ಕಾಗಿ 1933-34ರಲ್ಲಿ ಗಾಂಧೀಜಿಯವರು 9 ತಿಂಗಳ ಪ್ರವಾಸ ಕೈಗೊಂಡಿದ್ದರು. ಅದರಂತೆ ಮಡಿಕೇರಿಯಿಂದ 1934ರ ಫೆ.24ರಂದು ಸಂಜೆ 5 ಗಂಟೆಗೆ ಮಂಗಳೂರಿಗೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿದ್ದರು. 24ರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದು, 25ರ ಬೆಳಗ್ಗೆ ಹರಿಜನ ಕೇರಿ ಮತ್ತು ಸಾರ್ವಜನಿಕ ಕೃಷ್ಣಮಂದಿರಕ್ಕೆ ಶಿಲಾನ್ಯಾಸ ಮಾಡಲು ಕೆನರಾ ಶಾಲೆಗೆ ಭೇಟಿ ನೀಡಿದ್ದರು. ವಿಟ್ಟಲ್‌ಬಾಯಿ ಜಿ. ಪಟೇಲ್‌ ಅವರ ಮೂರ್ತಿ ಶಿಲ್ಪ ಅನಾವರಣ
ಮಾಡಿದ ಅನಂತರ ಗಾಂಧೀಜಿ ಭಾಷಣ ಮಾಡಿದ್ದರು. ಕುದ್ಮಲ್‌ ರಂಗರಾವ್‌ ಸ್ಥಾಪಿಸಿದ್ದ ದುರ್ಬಲ ವರ್ಗದವರ ಸಂಸ್ಥೆಗೆ ಭೇಟಿ ನೀಡಿದ ಗಾಂಧೀಜಿ, ಮಕ್ಕಳಿಗೆ ಖಾದಿಯ ಬಹುಮಾನ ವಿತರಿಸಿದ್ದರು. ಅನಂತರ ಮಂಗಳೂರಿನ ನ್ಯಾಶನಲ್‌ ಗರ್ಲ್ಸ್‌ ಸ್ಕೂಲ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ಚಳವಳಿಯ ಕುರುಹುಗಳಲ್ಲಿ ಒಂದು ನೆಹರೂ ಮೈದಾನ
ಮಂಗಳೂರಿನ ನೆಹರೂ ಮೈದಾನ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಬ್ರಿಟಿಷರ ಕಾಲದಲ್ಲಿ ಪೊಲೀಸರ ಕವಾಯತಿಗಾಗಿ ಈ ಮೈದಾನ ಬಳಕೆಯಾಗುತ್ತಿತ್ತು. ಈ ಜಾಗ ಖಾಸಗಿ ಕುಟುಂಬವೊಂದರ ಕೊಡುಗೆ. 1951ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಜವಾಹರ್‌ ಲಾಲ್‌ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಪೆವಿಲಿಯನ್‌ ಉದ್ಘಾಟಿಸಿದ್ದರು. ಬಳಿಕ ಅವರ ಭೇಟಿಯ ಹಿನ್ನೆಲೆಯಲ್ಲಿ ಈ ಮೈದಾನಕ್ಕೆ “ನೆಹರೂ ಮೈದಾನ’ವೆಂದು ನಾಮಕರಣ ಮಾಡಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ 1932ರಲ್ಲಿಯೂ ಜವಾಹರ್‌ ಲಾಲ್‌ ನೆಹರೂ ಅವರು ಇಲ್ಲಿ ಭಾಷಣ ಮಾಡಿದ್ದರು.

ದೇಶಾದ್ಯಂತ ನಡೆದ ಉಪ್ಪಿನ ಸತ್ಯಾಗ್ರಹ ಚಳವಳಿ ಮಂಗಳೂರಿನ ನೆಹರೂ ಮೈದಾನದಲ್ಲಿ ಬಹುವಿಕೋಪಕ್ಕೆ ಹೋಗಿತ್ತು. ಪ್ರತಿಭಟನಕಾರರು ಉಪ್ಪು ಸಿದ್ಧಪಡಿಸಿ ಇಲ್ಲಿ ತಂದು ಮಾರಿದ್ದರು. ಅದರಿಂದ ಬೆದರಿದ ಬ್ರಿಟಿಷ್‌ ಅಧಿಕಾರಿಗಳು ಲಾಠಿ ಚಾರ್ಜ್‌ ಮಾಡಿದ್ದರು. ಇದು “ದಕ್ಷಿಣ ಕನ್ನಡ ಜಿಲ್ಲೆಯ ಜಲಿಯನ್‌ ವಾಲಾಬಾಗ್‌’ ಎನ್ನುವಷ್ಟರ ಮಟ್ಟಿಗೆ ಹೆಸರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next