Advertisement

ಸ್ವಾತಂತ್ರ್ಯೋತ್ಸವ ದಿನಾಚರಣೆಗಿಲ್ಲ ಉಸ್ತುವಾರಿ ಸಚಿವರು, ಶಾಸಕರು

10:33 PM Aug 14, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಾದ 11 ವರ್ಷದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಉಸ್ತುವಾರಿ ಸಚಿವರು, ಕ್ಷೇತ್ರದ ಸ್ಥಳೀಯ ಶಾಸಕರು ಇಲ್ಲದೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಆಚರಣೆಗೆ ಕ್ಷಣಗಣನೆ ಆರಂಭಗೊಂಡಿದೆ.

Advertisement

ಇದೇ ಮೊದಲು: ರಾಜ್ಯ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ವಾರ ಕಳೆದರೂ ಸಚಿವ ಸಂಪುಟ ರಚನೆ ಆಗದೇ ಉಸ್ತುವಾರಿ ಸಚಿವರು ನೇಮಕಗೊಳ್ಳದ ಕಾರಣ ಜಿಲ್ಲೆಯ ಸ್ವಾತಂತ್ರ್ಯೋತ್ಸವಕ್ಕೆ ಉಸ್ತುವಾರಿ ಸಚಿವರ ಭಾಗ್ಯ ಇಲ್ಲದೇ ಇರುವುದು ಒಂದೆಡೆಯಾದರೆ ಮತ್ತೂಂದೆಡೆ ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಜಿಲ್ಲೆಯ ಸ್ವಾತಂತ್ರ್ಯೋತ್ಸವಕ್ಕೆ ಸಚಿವರು, ಶಾಸಕರು ಇಲ್ಲದೇ ಇರುವುದು ಇದೇ ಮೊದಲು ಎನ್ನುವಂತಾಗಿದೆ.

ಕ್ರೀಡಾಂಗಣ ಸ್ವಚ್ಛತೆ: ನಗರದ ಸರ್‌ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ನಡೆಯಲಿರುವ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಜಿಲ್ಲಾ ಕೇಂದ್ರದಲ್ಲಿ ಪೊಲೀಸ್‌ ಇಲಾಖೆ, ಗೃಹ ರಕ್ಷಕ ದಳ, ನಗರದ ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಕೊಡಲಿದ್ದಾರೆ. ಈಗಾಗಲೇ ಸರ್‌ಎಂವಿ ಕ್ರೀಡಾಂಗಣವನ್ನು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕಾಗಿ ಸ್ವಚ್ಛಗೊಳಿಸಿ ಸಿದ್ಧಪಡಿಸಲಾಗಿದೆ.

ಅಂಧ ಮಕ್ಕಳಿಂದ ಪಥ ಸಂಚಲನ: ಈ ಬಾರಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ರವರ ಆಸಕ್ತಿಯಿಂದ ಜಿಲ್ಲೆಯ ಅಂಧ ಮಕ್ಕಳಿಂದ ಸ್ವಾತಂತ್ರ್ಯೋತ್ಸವ ದಿನದಂದು ನಡೆಯುವ ಪಥಸಂಚಲನ ನಡೆಸಿ ಕೊಡಲಿದ್ದಾರೆ. ಹಲವು ದಿನಗಳಿಂದ ಈ ಬಗ್ಗೆ ಅವರಿಗೆ ತಾಲೀಮು ನಡೆಸಲಾಗಿದೆ. ಉಳಿದಂತೆ ದೇಶಪ್ರೇಮ ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಈಗಾಗಲೇ ಗುರುತಿಸಿದ್ದು, ಜಿಲ್ಲಾಡಳಿತದಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

ಬಿಗಿ ಪೊಲೀಸ್‌ ಭದ್ರತೆ: ದೇಶದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವುದರಿಂದ ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಶೇಷ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದ್ದು, ಸಿಬ್ಬಂದಿಗೆ ಅಲರ್ಟ್‌ ಆಗಿ ಇರುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಜಿಲ್ಲಾಡಳಿತ ಭವನ, ಜಿಲ್ಲಾ ನ್ಯಾಯಾಲಯ, ಸರ್ಕಾರಿ ಕಟ್ಟಡ, ಕಚೇರಿಗಳ ಸಮೀಪ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

Advertisement

ಜಿಲ್ಲಾಧಿಕಾರಿಗೆ ಒಲಿದ ಧ್ವಜಾರೋಹಣ ಗೌರವ: ಸಾಮಾನ್ಯವಾಗಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ರಾಷ್ಟ್ರಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡುವುದು ಮೊದಲಿನಿಂದಲೂ ಬಂದಿರುವ ರೂಢಿ ಶಿಷ್ಟಚಾರ ಕೂಡ.

ಆದರೆ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೇ ಜಿಲ್ಲಾ ಉಸ್ತುವಾರಿ ಸಚಿವರು ನೇಮಕಗೊಳ್ಳದ ಕಾರಣ ಇದೀಗ ಧ್ವಜಾರೋಹಣ ಮಾಡುವ ಗೌರವ ಜಿಲ್ಲಾಧಿಕಾರಿಗಳಿಗೆ ಒಲಿದು ಬಂದಿದ್ದು, ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಕೂಡ ಹೊರಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ವರ್ಷದ ಕಾಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಅನಿರುದ್ಧ್ ಶ್ರವಣ್‌ಗೆ ಜಿಲ್ಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಅವಕಾಶ ಸಿಕ್ಕಿದೆ.

ಇಂದು ಜಿಲ್ಲಾ ಮಕ್ಕಳ ಗ್ರಂಥಾಲಯ ಉದ್ಘಾಟನೆ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಪಕ್ಕದಲ್ಲಿರುವ ಹಳೆ ಗ್ರಂಥಾಲಯ ಕಟ್ಟಡವನ್ನು ಸಂಪೂರ್ಣ ನವೀಕರಿಸಿ ಜಿಲ್ಲಾ ಮಕ್ಕಳ ಗ್ರಂಥಾಲಯವಾಗಿ ಮಾರ್ಪಡಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಗುರುವಾರ ಜಿಲ್ಲೆಗೆ ಲೋಕಾರ್ಪಣೆಗೊಳ್ಳಲಿದೆ.

ಈಗಾಗಲೇ ಜಿಲ್ಲಾ ಮಕ್ಕಳ ಗ್ರಂಥಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಮಕ್ಕಳಿಗಾಗಿಯೇ ಮೀಸಲಿಡಲಿರುವ ಗ್ರಂಥಾಲಯ ಆವರಣದಲ್ಲಿ ಈಗಾಗಲೇ ಉದ್ಯಾನವನ ನಿರ್ಮಾಣಗೊಂಡಿದೆ. ಮಕ್ಕಳ ಆಟೋಟಗಳಿಗೆ ಆಟಿಕೆ ಸಾಮಾನುಗಳು, ಆಕರ್ಷಕವಾಗಿ ಬಿಡಿಸಿರುವ ಚಿತ್ರಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.

ಇಂದು 777 ಅಡಿ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ: ಜಿಲ್ಲಾ ಕೇಂದ್ರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಶ್ರೀ ಸಾಯಿರಾಮ್‌ ಇಂಟರ್‌ ನ್ಯಾಷನ್‌ ಸ್ಕೂಲ್‌ ಮಕ್ಕಳಿಂದ ಬರೋಬ್ಬರಿ 777 ಅಡಿ ಉದ್ದದ ರಾಷ್ಟ್ರಧ್ವಜವನ್ನು ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಿ ಪ್ರದರ್ಶಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next