ಕಲಬುರಗಿ: ಕೋವಿಡ್-19 ಸೋಂಕು ತಡೆ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ನಂತಹ ಸುರಕ್ಷತಾ ಕ್ರಮ ಕೈಗೊಂಡು ಯಾವುದೇ ಲೋಪವಾಗದಂತೆ ಜಿಲ್ಲೆಯಲ್ಲಿ ಆ.15ರಂದು ಸ್ವಾತಂತ್ರ್ಯೊತ್ಸವ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿ ಕಾರಿ ಶರತ್ ಬಿ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾರಂಭದಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರಬೇಕು. ಕೇಂದ್ರ ಗೃಹ ಸಚಿವಾಲಯ ನೀಡಿರುವ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಶಾಲಾ ಮಕ್ಕಳನ್ನು ಸಮಾರಂಭಕ್ಕೆ ಕರೆತರಬಾರದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಎನ್ ಸಿಸಿ, ಸ್ಕೌಟ್ಸ್, ಹೋಂಗಾರ್ಡ್ ಹಾಗೂ ಪೊಲೀಸ್ ತಂಡಗಳ ಪಥಸಂಚಲನ ಮಾತ್ರ ನಡೆಸಬೇಕು. ಈ ಸಂಬಂಧ ಮೊದಲೇ ಪೂರ್ವ ತಯಾರಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈ ಬಾರಿ ಕೋವಿಡ್ ಸೋಂಕು ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ತಬ್ದ ಚಿತ್ರಗಳನ್ನು ತಯಾರಿಸಬೇಕು. ಆರೋಗ್ಯ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ತಮ್ಮ-ತಮ್ಮ ಯೋಜನೆ-ಕ್ರಮಗಳ ಕುರಿತ ಟ್ಯಾಬ್ಲೋ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಕಚೇರಿಗಳಲ್ಲಿ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಂದು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಬೇಕು. ನಂತರ ನಗರದ ಪೊಲೀಸ್ ಮೈದಾನದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮಕ್ಕೆ ಅಂದು ಬೆಳಗ್ಗೆ 8.30ರೊಳಗಾಗಿ ಬಂದು ಸೇರಬೇಕು. ಇಲ್ಲಿ ಸರಿಯಾಗಿ ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುವುದು. ವೈದ್ಯರು, ನರ್ಸ್, ಪೌರ ಕಾರ್ಮಿಕರು ಹಾಗೂ ಕೋವಿಡ್‌ನಿಂದ ಗುಣಮುಖರಾದ ರೋಗಿಗಳನ್ನು ಸನ್ಮಾನಿಸಲಾಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪಟ್ಟಿ ತಯಾರಿಸಬೇಕು ಎಂದರು.
ಜಿಪಂ ಸಿಇಒ ಡಾ| ರಾಜಾ ಪಿ., ಎಸ್‌ಪಿ ಸಿಮಿ ಮರಿಯಂ ಜಾರ್ಜ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಡಾ| ಶಂಕರ್ ವಣಿಕ್ಯಾಳ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು