ಬೆಂಗಳೂರು: ಆನ್‌ಲೈನ್‌ನಲ್ಲಿ ಪಡೆದ ಸಾಲ ಹಿಂತಿರುಗಿಸುವುದು ತಡವಾದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಿಚಿತರ ಮೊಬೈಲ್‌ಗೆ ಸಾಲ ಪಡೆದ ವ್ಯಕ್ತಿಯ ಅಶ್ಲೀಲ ಫೋಟೊ ಕಳುಹಿಸಿದ್ದರಿಂದ ನೊಂದ ಬ್ಯಾಂಕ್ ಉದ್ಯೋಗಿಯೊಬ್ಬರು ಡೆತ್ ನೋಟ್ ಬರೆದಿಟ್ಟು ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಾಗದೇವನಹಳ್ಳಿಯ ನಿವಾಸಿ ನಂದಕುಮಾರ್ (52) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಖಾಸಗಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ನಂದಕುಮಾರ್ ಆನ್‌ಲೈನ್ ನಲ್ಲಿ ಲಕ್ಷಾಂತರ ರೂ. ಸಾಲ ತೆಗೆದುಕೊಂಡಿದ್ದರು. ಸಾಲದ ಹಣ ಮರುಪಾವತಿಸಲು ಕೊಂಚ ತಡವಾದರೂ ಸಾಲ ಕೊಟ್ಟ ಆನ್‌ಲೈನ್ ಆ್ಯಪ್ ಸಂಸ್ಥೆಯ ಸಿಬ್ಬಂದಿ ಕರೆ ಮಾಡಿ ಬೆದರಿಸುತ್ತಿದ್ದರು. ನಂದಕುಮಾರ್ ಅವರ ಭಾವಚಿತ್ರವನ್ನು ಮಾರ್ಫಿಂಗ್ ಮಾಡಿ ಅಶ್ಲೀಲವಾಗಿ ಮಾರ್ಪಡಿಸಿ ಅವರ ಫೋಟೊವನ್ನು ಕಳುಹಿಸುತ್ತಿದ್ದರು. ಇದರಿಂದ ಮನನೊಂದ ನಂದನ್ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದರು.
ಇದನ್ನೂ ಓದಿ: ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು
ಇಷ್ಟಾದರೂ, ಆನ್‌ಲೈನ್‌ನಲ್ಲಿ ಸಾಲ ಕೊಟ್ಟವರು ಕಿರುಕುಳ ಕೊಡಲಾರಂಭಿಸಿದ್ದರು. ಇದರಿಂದ ನೊಂದ ನಂದಕುಮಾರ್ ಜು.25ರಂದು ಬೆಳಗ್ಗೆ ಕೆಂಗೇರಿ ಮತ್ತು ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಮಧ್ಯದಲ್ಲಿ ಚಲಿಸುತ್ತಿರುವ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ಆ್ಯಪ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡೆತ್ ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಬೆಂಗಳೂರು ಸಿಟಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.