Advertisement

ಟಿ20: ಲಂಕೆಯನ್ನು ಕೆಡವಿದ ಭಾರತ 

10:18 PM Jun 23, 2022 | Team Udayavani |

ಡಂಬುಲ: ಸಾಮಾನ್ಯ ಬ್ಯಾಟಿಂಗ್‌ ಹಾಗೂ ಅಸಾಮಾನ್ಯ ಬೌಲಿಂಗ್‌ ಸಾಹಸದಿಂದ ಆತಿಥೇಯ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯವನ್ನು ಭಾರತ 34 ರನ್ನುಗಳಿಂದ ಜಯಿಸಿದೆ.

Advertisement

ಗುರುವಾರದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಗಳಿಸಿದ್ದು 6 ವಿಕೆಟಿಗೆ 138 ರನ್‌ ಮಾತ್ರ. ಶ್ರೀಲಂಕಾ ಆರಂಭದಿಂದಲೇ ಪ್ರವಾಸಿಗರ ಬೌಲಿಂಗ್‌ ದಾಳಿಗೆ ಚಡಪಡಿಸಿ 5 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿ ಶರಣಾಯಿತು.

ಸಿಡಿದು ನಿಂತ ಜೆಮಿಮಾ :

ಡೆತ್‌ ಓವರ್‌ ತನಕ ಭಾರತದ ಬ್ಯಾಟಿಂಗ್‌ ಕೂಡ ಆಮೆಗತಿಯಲ್ಲಿ ಸಾಗಿತ್ತು. ಆದರೆ ಜೆಮಿಮಾ ರೋಡ್ರಿಗಸ್‌ ಕೊನೆಯ ಹಂತದಲ್ಲಿ ಸಿಡಿದು ನಿಂತ ಪರಿಣಾಮ ಅಲ್ಪ ಮೊತ್ತದ ಸಂಕಟದಿಂದ ಪಾರಾಯಿತು. 134 ರನ್ನಿನಲ್ಲಿ 53 ರನ್‌ ಬಂದದ್ದು ಅಂತಿಮ 5 ಓವರ್‌ಗಳಲ್ಲಿ. ಇದರಲ್ಲಿ 20 ರನ್‌ ಕೊನೆಯ ಓವರ್‌ ಒಂದರಲ್ಲೇ ಸಿಡಿಯಲ್ಪಟ್ಟಿತು.

ಜೆಮಿಮಾ 27 ಎಸೆತಗಳಿಂದ 36 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 3 ಬೌಂಡರಿ ಹಾಗೂ ಪಂದ್ಯದ ಏಕೈಕ ಸಿಕ್ಸರ್‌ ಒಳಗೊಂಡಿತ್ತು. ದೀಪ್ತಿ ಶರ್ಮ 8 ಎಸೆತಗಳಿಂದ ಅಜೇಯ 17 ರನ್‌ ಮಾಡಿದರು (3 ಬೌಂಡರಿ). ಈ ಜೋಡಿಯಿಂದ 18 ಎಸೆತಗಳಲ್ಲಿ 32 ರನ್‌ ಒಟ್ಟುಗೂಡಿತು.

Advertisement

ಓಪನರ್‌ ಶಫಾಲಿ ವರ್ಮ ಎಸೆತಕ್ಕೊಂದರಂತೆ 31 ರನ್‌ ಮಾಡಿದರು (4). ಮಿಥಾಲಿ ರಾಜ್‌ ನಿವೃತ್ತಿ ಬಳಿಕ ತಂಡದ ಚುಕ್ಕಾಣಿ ಹಿಡಿದ ಹರ್ಮನ್‌ಪ್ರೀತ್‌ ಕೌರ್‌ ಗಳಿಕೆ 20 ಎಸೆತಗಳಿಂದ 22 ರನ್‌ (3 ಬೌಂಡರಿ). ಆದರೆ ಸ್ಮತಿ ಮಂಧನಾ (1), ಎಸ್‌. ಮೇಘನಾ (0) ಕ್ಲಿಕ್‌ ಆಗಲಿಲ್ಲ. ಇವರಿಬ್ಬರನ್ನು ರಣಸಿಂಘೆ ಸತತ ಎಸೆತಗಳಲ್ಲಿ ಕೆಡವಿ ಭಾರತದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು.

ಬಿಗಿ ಬೌಲಿಂಗ್‌ ದಾಳಿ :

ಭಾರತದ ಬೌಲಿಂಗ್‌ ಬೊಂಬಾಟ್‌ ಆಗಿತ್ತು. ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್‌ ಒಂದೊಂದು ಮೇಡನ್‌ ಓವರ್‌ ಎಸೆದು ಲಂಕೆಗೆ ಕಡಿವಾಣ ಹಾಕಿದರು. ಮಧ್ಯಮ ವೇಗಿ ಪೂಜಾ ಅವರ ಬೌಲಿಂಗ್‌ ಫಿಗರ್‌ ಇಷ್ಟೊಂದು ಆಕರ್ಷಕವಾಗಿತ್ತು: 4-1-13-1. ರಾಧಾ ಯಾದವ್‌ 22ಕ್ಕೆ 2 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಕಂಡರು.

ಮಧ್ಯಮ ಸರದಿಯ ಆಟಗಾರ್ತಿ ಕವಿಶಾ ದಿಲ್ಹಾರಿ ಹೊರತುಪಡಿಸಿದರೆ ಲಂಕೆಯ ಉಳಿದ ಬ್ಯಾಟರ್‌ಗಳಿಗೆ ಭಾರತದ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಕವಿಶಾ ಪಂದ್ಯದಲ್ಲೇ ಸರ್ವಾಧಿಕ 47 ರನ್‌ ಮಾಡಿ ಅಜೇಯರಾಗಿ ಉಳಿದರು (49 ಎಸೆತ, 5 ಬೌಂಡರಿ). ದ್ವಿತೀಯ ಪಂದ್ಯ ಶನಿವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ :

ಭಾರತ-6 ವಿಕೆಟಿಗೆ 138 (ಜೆಮಿಮಾ ಔಟಾಗದೆ 36, ಶಫಾಲಿ 31, ಕೌರ್‌ 22, ದೀಪ್ತಿ ಔಟಾಗದೆ 17, ಪೂಜಾ 14, ರಿಚಾ 11). ಶ್ರೀಲಂಕಾ-5 ವಿಕೆಟಿಗೆ 104 (ಕವಿಶಾ ಔಟಾಗದೆ 47, ಅತಪಟ್ಟು 16, ಕಾಂಚನಾ 11, ರಾಧಾ 22ಕ್ಕೆ 2, ದೀಪ್ತಿ 9ಕ್ಕೆ 1, ಶಫಾಲಿ 10ಕ್ಕೆ 1, ಪೂಜಾ 13ಕ್ಕೆ 1). ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next