Advertisement
212 ರನ್ನುಗಳ ಸುಲಭ ಗುರಿ ಪಡೆದಿರುವ ದಕ್ಷಿಣ ಆಫ್ರಿಕಾ 2 ವಿಕೆಟಿಗೆ 101 ರನ್ ಮಾಡಿದ್ದು, ಕೇವಲ 111 ರನ್ ಗಳಿಸಬೇಕಿದೆ. ಪಂದ್ಯವಿನ್ನೂ ಭರ್ತಿ ಎರಡು ದಿನ ಕಾಣಲಿಕ್ಕಿದೆ. ಭಾರತದ ಅಭಿಮಾನಿಗಳು ಬೌಲಿಂಗ್ ಮ್ಯಾಜಿಕ್ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಪೂಜಾರ, ರಹಾನೆ ಫ್ಲಾಪ್! :
ಬೆಳಗಿನ ಅವಧಿಯ ಆಟದಲ್ಲಿ ಭಾರತಕ್ಕೆ ದೊಡ್ಡ ಆಘಾತ ಕಾದಿತ್ತು. ಅನುಭವಿ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ತಂಡದ ನೆರವಿಗೆ ನಿಲ್ಲದೇ ಹೋದರು. ಅರ್ಧ ಗಂಟೆಯೊಳಗಾಗಿ ಪೆವಿಲಿಯನ್ ಸೇರಿಕೊಂಡರು. ಪೂಜಾರ ಅವರದು ಹಿಂದಿನ ದಿನದೇ ಮೊತ್ತ (9). ಜಾನ್ಸೆನ್ ದಿನದ ದ್ವಿತೀಯ ಎಸೆತದಲ್ಲೇ ಈ ವಿಕೆಟ್ ಉಡಾಯಿಸಿದರು. ಲೆಗ್ ಸ್ಲಿಪ್‌ನಲ್ಲಿದ್ದ ಪೀಟರ್‌ಸನ್ ಅದ್ಭುತ ಕ್ಯಾಚ್ ಮೂಲಕ ಪೂಜಾರ ಆಟಕ್ಕೆ ತೆರೆ ಎಳೆದರು.
ಮುಂದಿನ ಓವರ್‌ನಲ್ಲಿ ವಿಕೆಟ್ ಕೀಳುವ ಸರದಿ ಕಾಗಿಸೊ ರಬಾಡ ಅವರದಾಗಿತ್ತು. ಅಜಿಂಕ್ಯ ರಹಾನೆ ಅವರ ಗ್ಲೌಸ್‌ಗೆ ಸವರಿ ಹೋದ ಚೆಂಡು ದಕ್ಷಿಣ ಆಫ್ರಿಕಾ ಕೀಪರ್ ವೆರೇಯ್ನ ಅವರ ಗ್ಲೌಸ್‌ಗೆ ಟಿಪ್ ಆಗಿ ಮೊದಲ ಸ್ಲಿಪ್‌ನಲ್ಲಿದ್ದ ಡೀನ್ ಎಲ್ಗರ್ ಕೈ ಸೇರಿತು. 9 ಎಸೆತ ಎದುರಿಸಿದ ರಹಾನೆ ಆಟ ಒಂದೇ ರನ್ನಿಗೆ ಮುಗಿಯಿತು. 58ಕ್ಕೆ ಭಾರತದ 4 ವಿಕೆಟ್ ಉದುರಿತು.
ತಂಡ ತೀವ್ರ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಪೂಜಾರ ಮತ್ತು ರಹಾನೆ ಕೈಕೊಟ್ಟು ಹೋದ ರೀತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಯ್ಯರ್, ಗಿಲ್, ವಿಹಾರಿ ಅವರೆಲ್ಲ ಕಾದು ನಿಂತಿರುವ ಈ ಹೊತ್ತಿನಲ್ಲಿ ಪೂಜಾರ, ರಹಾನೆ ಇಬ್ಬರ ಪಾಲಿಗೂ ಇದು ಅಂತಿಮ ಟೆಸ್ಟ್ ಇನ್ನಿಂಗ್ಸ್ ಆಗಿರುವ ಸಾಧ್ಯತೆ ಹೆಚ್ಚಿದೆ.
ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ ಇಂಥ ಸಂದಿಗ್ಧ ಸ್ಥಿತಿಯಲ್ಲೂ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ತಮ್ಮ ಟೆಸ್ಟ್ ಬಾಳ್ವೆಯಲ್ಲೇ ಅತ್ಯಂತ ರಕ್ಷಣಾತ್ಮಕ ಆಟದಲ್ಲಿ ಅವರು ತೊಡಗಿದ್ದರು. ಇನ್ನೊಂದೆಡೆ ರಿಷಭ್ ಪಂತ್ ಕೂಡಿಕೊಂಡರು. ತಂಡಕ್ಕೆ ಹೆಚ್ಚಿನ ಹಾನಿ ಆಗದಂತೆ ತಡೆದರು. ಲಂಚ್ ವೇಳೆ ಭಾರತದ ಮೊತ್ತ 4ಕ್ಕೆ 130 ರನ್ ಆಗಿತ್ತು. ಆಗಲೇ ಪಂತ್ ಅರ್ಧ ಶತಕ ಪೂರ್ತಿಗೊಳಿಸಿದ್ದರು. ದ್ವಿತೀಯ ಅವಧಿಯಲ್ಲಿ ನಿರಂತರ ವಿಕೆಟ್ ಪತನದ ನಡುವೆಯೂ ರಿಷಭ್ ಪಂತ್ ಅವರ ಶತಕ ಭಾರತದ ಸರದಿಯ ಆಕರ್ಷಣೆ ಎನಿಸಿತು. ಸ್ಕೋರ್ 152ಕ್ಕೆ ಏರಿದಾಗ ಭಾರತಕ್ಕೆ ದೊಡ್ಡ ಆಘಾತ ಎದುರಾಯಿತು. ಕ್ರೀಸಿಗೆ ಅಂಟಿಕೊಂಡು ನಿಂತಿದ್ದ ವಿರಾಟ್ ಕೊಹ್ಲಿಗೆ ಎನ್‌ಗಿಡಿ ಪೆವಿಲಿಯನ್ ಹಾದಿ ತೋರಿಸಿದರು. 143 ಎಸೆತಗಳನ್ನು ನಿಭಾಯಿಸಿದ ಕೊಹ್ಲಿ ಗಳಿಕೆ 29 ರನ್ (4 ಬೌಂಡರಿ). ಪಂತ್ ಬಳಿಕ ಭಾರತದ ಸರದಿಯ ಅತೀ ಹೆಚ್ಚಿನ ವೈಯಕ್ತಿಕ ಗಳಿಕೆ ಇದಾಗಿತ್ತು.
ಭಾರತದ ಬೌಲಿಂಗ್ ಪಡೆಯ ಸದಸ್ಯರಾದ ಅಶ್ವಿನ್, ಠಾಕೂರ್, ಶಮಿ, ಉಮೇಶ್ ಯಾದವ್, ಬುಮ್ರಾ ಸೇರಿ ಗಳಿಸಿದ್ದು ಕೇವಲ 14 ರನ್. ಇವರಲ್ಲಿ ಯಾದವ್ ಮತ್ತು ಶಮಿ ಅವರದು ಶೂನ್ಯ ಗಳಿಕೆ.