Advertisement

ರಾಯ್‌ಪುರದಲ್ಲಿ ಯಾರ ರಾಯಭಾರ? ತಿರುಗಿ ಬೀಳುವ ಯೋಜನೆಯಲ್ಲಿ ನ್ಯೂಜಿಲ್ಯಾಂಡ್‌  

11:45 PM Jan 20, 2023 | Team Udayavani |

ರಾಯ್‌ಪುರ: ಸಾಮಾನ್ಯವಾಗಿ ಮೊದಲ ಪಂದ್ಯ ಗೆದ್ದ ತಂಡದ ಮುಂದಿರುವ ಯೋಜನೆಯೆಂದರೆ ದ್ವಿತೀಯ ಮುಖಾಮುಖಿಯಲ್ಲೂ ಮೇಲುಗೈ ಸಾಧಿಸಿ ಸರಣಿ ವಶಪಡಿಸಿ ಕೊಳ್ಳುವುದು. ಟೀಮ್‌ ಇಂಡಿಯಾದ ಶನಿವಾರದ ಯೋಜನೆ ಕೂಡ ಇದೇ ಆಗಿದೆ. ಆದರೆ ಎದುರಾಳಿ ತಂಡ ಬಲಿಷ್ಠ ನ್ಯೂಜಿಲ್ಯಾಂಡ್‌ ಆಗಿರುವ ಕಾರಣ ಭಾರತದ ಸವಾಲು ಸುಲಭದ್ದಲ್ಲ ಎನ್ನುವ ಮೂಲಕ ರಾಯ್‌ಪುರ ಸಮರವನ್ನು ಎದುರುನೋಡಬೇಕಾಗುತ್ತದೆ.

Advertisement

ಮೊನ್ನೆ ಹೈದರಾಬಾದ್‌ನಲ್ಲಿ ಏನಾಯಿತು ಎಂಬುದು ಗೊತ್ತೇ ಇದೆ. ಅಲ್ಲಿ 350ರಷ್ಟು ಟಾರ್ಗೆಟ್‌ ಇದ್ದರೂ ಉಳಿಸಿಕೊಳ್ಳುವುದು ಭಾರತದ ಕುತ್ತಿಗೆಗೆ ಬಂದಿತ್ತು. ಎದುರಾಳಿಯ 6 ವಿಕೆಟ್‌ಗಳನ್ನು ಬೇಗನೇ ಕಿತ್ತರೂ ಬಿರುಗಾಳಿಯಂತೆ ಬೀಸಿದ ಮೈಕಲ್‌ ಬ್ರೇಸ್‌ವೆಲ್‌ ರೋಹಿತ್‌ ಪಡೆಯನ್ನು ಅಡಿಗಡಿಗೂ ಬೆಚ್ಚುವಂತೆ ಮಾಡಿದರು. ಉಳಿದ 4 ವಿಕೆಟ್‌ಗಳಿಂದ 206 ರನ್‌ ಹರಿದು ಬಂತು. ಇನ್ನೇನು ಬ್ರೇಸ್‌ವೆಲ್‌ಗೆ ಎರಡೇ ಎರಡು ಹೊಡೆತ ಬೀಸಲು ಸಿಕ್ಕಿದರೆ ಸಾಕಿತ್ತು, ಭಾರತದ ಕತೆ ಮುಗಿದೇ ಹೋಗುತ್ತಿತ್ತು!

ಹೈದರಾಬಾದ್‌ನಲ್ಲಿ ಭಾರತದ ಸ್ಕೋರ್‌ಬೋರ್ಡ್‌ ಏನೋ 349ರಷ್ಟು ಬೃಹತ್‌ ಮೊತ್ತವನ್ನು ತೋರಿಸುತ್ತಿತ್ತು. ಆದರೆ ಇದರಲ್ಲಿ ಸಿಂಹಪಾಲು ಆರಂಭಕಾರ ಶುಭಮನ್‌ ಗಿಲ್‌ ಅವರದು ಎಂಬುದನ್ನು ಮರೆಯಲು ಸಾಧ್ಯವೇ? ಅವರ ಅಸಾಮಾನ್ಯ ದ್ವಿಶತಕ (208) ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಆದರೆ ಗಿಲ್‌ ಹೊರತುಪಡಿಸಿದರೆ ಅನಂತರದ ಹೆಚ್ಚಿನ ಗಳಿಕೆ ಕೇವಲ 34 ರನ್‌ ಎಂಬುದು ಮಾತ್ರ ಚಿಂತಿಸಬೇಕಾದ ಸಂಗತಿ. ಇದರರ್ಥ, ಭಾರತದ ಮಧ್ಯಮ ಕ್ರಮಾಂಕದಲ್ಲಿ ರನ್‌ ಹುಟ್ಟಲಿಲ್ಲ ಎಂಬುದು.

ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಅವರಿಂದ ನಿರೀಕ್ಷಿತ ಆಟ ಹೊರಹೊಮ್ಮಲಿಲ್ಲ.ಇವರಿಂದ ಸಂದಾಯವಾ ದದ್ದು ಕೇವಲ 44 ರನ್‌. ಇವರೆಲ್ಲರೂ ಕಳೆದ ಕೆಲವು ಪಂದ್ಯಗಳಲ್ಲಿ ಶತಕ, ದ್ವಿಶತಕ ಬಾರಿಸಿದವರೇ ಆಗಿರುವುದರಿಂದ ರಾಯ್‌ಪುರದಲ್ಲಿ ರನ್‌ ಬರಗಾಲ ಎದುರಾಗಲಿಕ್ಕಿಲ್ಲ ಎಂದು ಭಾವಿಸೋಣ. ಈ ಸಾಲಿಗೆ ಹಾರ್ದಿಕ್‌ ಪಾಂಡ್ಯ ಅವರನ್ನೂ ಸೇರಿಸಬಹುದು.

ಶುಭಮನ್‌ ಗಿಲ್‌ ಸತತ ಎರಡು ಶತಕ ಗಳೊಂದಿಗೆ ತಮ್ಮ ಪ್ರಚಂಡ ಫಾರ್ಮ್ ಅನಾವರಣ ಗೊಳಿಸಿರುವುದು ವಿಶ್ವಕಪ್‌ ವರ್ಷದ ಹೆಗ್ಗುರುತು. ಇದರಿಂದ ಭಾರತದ ಓಪನಿಂಗ್‌ ಸಮಸ್ಯೆ ಪರಿಹಾರ ಗೊಂಡಿದೆ ಎಂದು ಭಾವಿಸಲಡ್ಡಿಯಿಲ್ಲ. ಆದರೆ ನಾಯಕ ರೋಹಿತ್‌ ಶರ್ಮ ಇನ್ನಿಂಗ್ಸ್‌ ಬೆಳೆಸುವತ್ತ ಹೆಚ್ಚಿನ ಗಮನ ಕೊಡಬೇಕಾದ ಅಗತ್ಯವಿದೆ.

Advertisement

ಬೌಲಿಂಗ್‌ ವಿಭಾಗ
ಭಾರತದ ಬೌಲಿಂಗ್‌ ವಿಭಾಗವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ. ತಂಡದಲ್ಲಿ ಸಾಕಷ್ಟು ಮಂದಿ ಯುವ ವೇಗಿಗಳಿದ್ದರೂ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಗೈರು ಕಾಡುತ್ತಲೇ ಇದೆ.

ಮೊಹಮ್ಮದ್‌ ಸಿರಾಜ್‌ ಹೆಚ್ಚು ಪಕ್ವಗೊಳ್ಳುತ್ತಿ ದ್ದಾರೆ. ಮೊಹಮ್ಮದ್‌ ಶಮಿ ಅವರ ಅನುಭವ ಇನ್ನಷ್ಟು ಫ‌ಲಪ್ರದವಾಗಬೇಕಿದೆ. ಶಾರ್ದೂಲ್ ಠಾಕೂರ್‌ ಮೊನ್ನೆ ಬ್ರೇಸ್‌ವೆಲ್‌ ವಿಕೆಟ್‌ ಹಾರಿಸದೇ ಹೋಗಿದ್ದರೆ ದೊಡ್ಡ ವಿಲನ್‌ ಆಗುತ್ತಿದ್ದರು. ಇವರ ಸ್ಥಾನಕ್ಕೆ ಉಮ್ರಾನ್‌ ಮಲಿಕ್‌ ಬರಬಹುದೇ? ಅಂಥದೊಂದು ಸಾಧ್ಯತೆ ಇದೆ.
ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಯಾವ ವಿಭಾಗದಲ್ಲೂ ಯಶಸ್ಸು ಕಾಣ ಲಿಲ್ಲ. ಕ್ವಾಲಿಟಿ ಸ್ಪಿನ್‌ ಮೂಲಕ ಕಿವೀಸ್‌ಗೆ ಬ್ರೇಕ್‌ ಹಾಕಲು ಸಾಧ್ಯ ಎಂದಾದರೆ ಯಜುವೇಂದ್ರ ಚಹಲ್‌ ಅವರನ್ನು ಆಡಿಸಬಹುದು. ಆಗ ಕುಲದೀಪ್‌-ಚಹಲ್‌ ಮ್ಯಾಜಿಕ್‌ ನಿರೀಕ್ಷಿಸಲಡ್ಡಿಯಿಲ್ಲ.

ಹಾಗೆಯೇ ನಮ್ಮವರ ದೊಡ್ಡ ದೌರ್ಬಲ್ಯ ವನ್ನೂ ಇಲ್ಲಿ ಉಲ್ಲೇಖೀಸಬೇಕಾಗುತ್ತದೆ. ಇನ್ನೇನು ನಾವು ಗೆದ್ದೇ ಬಿಟ್ಟೆವು ಎಂಬ ಸಂದರ್ಭ ಎದುರಾದಾಗ ಸಂಪೂರ್ಣವಾಗಿ ಮೈಮರೆಯುತ್ತಾರೆ. ಎದುರಾಳಿಗಳು ಮುನ್ನುಗ್ಗಿ ಬೀಸತೊಡಗಿದಾಗ ನಮ್ಮ ಬೌಲರ್ ಪೂರ್ತಿ ಶರಣಾಗತಿ ಸಾರುತ್ತಾರೆ. ಇವೆರಡಕ್ಕೂ ಹೈದರಾ ಬಾದ್‌ ಪಂದ್ಯಕ್ಕಿಂತ ಮಿಗಿಲಾದ ನಿದರ್ಶನ ಬೇಕಿಲ್ಲ. ಕೊನೆಯ ವರೆಗೂ ಜೋಶ್‌ ತೋರುವುದು ಟೀಮ್‌ ಇಂಡಿಯಾದ ಮೂಲಮಂತ್ರವಾಗಬೇಕು.

ಕಿವೀಸ್‌ಗೆ ಮಸ್ಟ್‌ ವಿನ್‌ ಗೇಮ್‌
ಇನ್ನು ನ್ಯೂಜಿಲ್ಯಾಂಡ್‌. ಎಷ್ಟೇ ಕಠಿನ ಸವಾ ಲಾದರೂ ಅದು ಸುಲಭದಲ್ಲಿ ಬಗ್ಗದು. ಅವರದು “ನೆವರ್‌ ಸೇ ಡೈ’ ಸಿದ್ಧಾಂತ. ಕೊನೆಯ ತನಕ ಹೋರಾಡಿ, ಎದುರಾಳಿಯನ್ನು ಬೆಚ್ಚಿಬೀಳಿಸಿ, ಅವರ ಮನೋಸ್ಥೈರ್ಯವನ್ನೆಲ್ಲ ಉಡುಗಿಸಿ ಮುನ್ನುಗ್ಗುವುದು ಕಿವೀಸ್‌ ಸ್ಟೈಲ್‌ ಆಫ್ ಕ್ರಿಕೆಟ್‌. 2019ರ ವಿಶ್ವಕಪ್‌ ಫೈನಲ್‌ನಿಂದ ಮೊನ್ನೆಯ ಹೈದರಾಬಾದ್‌ ಪಂದ್ಯದವರೆಗೆ ನ್ಯೂಜಿಲ್ಯಾಂಡ್‌ ಆಟವನ್ನು ಗಮನಿಸುತ್ತ ಬಂದವರಿಗೆ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ಶನಿವಾರದ “ಮಸ್ಟ್‌ ವಿನ್‌ ಗೇಮ್‌’ನಲ್ಲಿ ಬ್ಲ್ಯಾಕ್‌ ಕ್ಯಾಪ್ಸ್‌ ಪಡೆಯನ್ನು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ.

ಅವರಲ್ಲಿ ಬ್ರೇಸ್‌ವೆಲ್‌ ಮಾತ್ರವೇ ಹಿಟ್ಟರ್‌ ಅಲ್ಲ. ಫಿನ್‌ ಅಲೆನ್‌, ಡೇವನ್‌ ಕಾನ್ವೇ, ಗ್ಲೆನ್‌ ಫಿಲಿಪ್ಸ್‌, ಹೆನ್ರಿ ನಿಕೋಲ್ಸ್‌, ಡ್ಯಾರಿಲ್‌ ಮಿಚೆಲ್‌, ಟಾಮ್‌ ಲ್ಯಾಥಂ ಕೂಡ ಅಪಾಯಕಾರಿಗಳೇ. ಕೇನ್‌ ವಿಲಿಯಮ್ಸನ್‌ ಗೈರಿನಿಂದ ತಂಡದ ಸಮತೋಲನದ ಲ್ಲಾಗಲಿ, ಫೈಟಿಂಗ್‌ ಸ್ಪಿರಿಟ್‌ನಲ್ಲಾಗಲಿ ಯಾವುದೇ ವ್ಯತ್ಯಯವಾಗಿಲ್ಲ.ಆದರೆ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂಥ ಅನುಭವಿಗಳಿಲ್ಲ. ತ್ರಿವಳಿ ವೇಗಿಗಳಾದ ಶಿಪ್ಲಿ, ಫ‌ರ್ಗ್ಯುಸನ್‌, ಟಿಕ್ನರ್‌ ಮೊನ್ನೆ ಗಿಲ್‌ ಅವರಿಂದ ಚೆನ್ನಾಗಿ ಹೊಡೆತ ಅನುಭವಿಸಿದ್ದಾರೆ. ಐಶ್‌ ಸೋಧಿ ಫಿಟ್‌ ಆಗಿ ಬರುವುದನ್ನು ನ್ಯೂಜಿಲ್ಯಾಂಡ್‌ ನಿರೀಕ್ಷಿಸುತ್ತಿದೆ.

ಮೊದಲ ಪಂದ್ಯಕ್ಕೆ ಅಣಿಯಾದ ರಾಯ್‌ಪುರ
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಸಜ್ಜಾಗಿದೆ. 60 ಸಾವಿರ ವೀಕ್ಷಕರ ಸಾಮರ್ಥ್ಯವುಳ್ಳ ಇಲ್ಲಿನ “ಶಹೀದ್‌ ವೀರನಾರಾಯಣ್‌ ಸಿಂಗ್‌ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಶನಿವಾರ ಭಾರತ-ನ್ಯೂಜಿಲ್ಯಾಂಡ್‌ ನಡುವೆ ದ್ವಿತೀಯ ಏಕದಿನ ಮುಖಾಮುಖಿ ನಡೆಯಲಿದೆ.

ಹೆಸರಿಗೆ ಇಂಟರ್‌ನ್ಯಾಶನಲ್‌ ಸ್ಟೇಡಿಯಂ ಆದರೂ ಇಲ್ಲಿ ಈವರೆಗೆ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ನಡೆದಿಲ್ಲ. ಆದರೆ 2013ರ ಋತುವಿನಲ್ಲಿ 29 ಐಪಿಎಲ್‌ ಪಂದ್ಯಗಳನ್ನು ಆಡಲಾಗಿದೆ. ಬಳಿಕ 2015 ಮತ್ತು 2016ರಲ್ಲೂ ಐಪಿಎಲ್‌ ಮುಖಾಮುಖಿ ಏರ್ಪಟ್ಟಿತ್ತು. ಹಾಗೆಯೇ 2014ರ ಚಾಂಪಿಯನ್ಸ್‌ ಲೀಗ್‌ ಟಿ20, 2017-18ರ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಕೂಡ ನಡೆದಿತ್ತು. ಇದೀಗ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಸ್ವಾದಿಸಲು ರಾಯ್‌ಪುರ ವೀಕ್ಷಕರು ಹೊಸ ಹುರುಪಿನಿಂದ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next