ದುಬಾೖ: ನ್ಯೂಜಿಲ್ಯಾಂಡ್ ವಿರುದ್ಧದ ಸೋಲಿಗೆ ಭಾರತದ ಆಮೆಗತಿಯ ಆಟವೇ ಕಾರಣ ಎಂಬುದಾಗಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಆಟಗಾರರು 54 ಎಸೆತಗಳಲ್ಲಿ ರನ್ನೇ ಗಳಿಸದಿದ್ದುದು ಭಾರೀ ಹಿನ್ನಡೆಯಾಗಿ ಪರಿಣಮಿಸಿತು ಎಂದರು.
“ನ್ಯೂಜಿಲ್ಯಾಂಡ್ ವಿರುದ್ಧ ಭಾರತ 54 ಡಾಟ್ ಬಾಲ್ ಆಡಿತು. ಇದು 9 ಓವರ್‌ಗಳಿಗೆ ಸಮ. ಬಹುಶಃ ಇದೊಂದು ದಾಖಲೆಯೂ ಆಗಿರಬಹುದು. ಈ ಎಲ್ಲ ಎಸೆತಗಳಲ್ಲಿ ಒಂದೊಂದು ರನ್ ಗಳಿಸಿದರೂ ಸವಾಲಿನ ಮೊತ್ತ ಪೇರಿಸಲು ಸಾಧ್ಯವಿತ್ತು’ ಎಂದು ಹರ್ಭಜನ್ ಹೇಳಿದರು.
“ಈ ಪಿಚ್ ಸ್ಪಿನ್ನಿಗೆ ನೆರವು ನೀಡುತ್ತಿರಲಿಲ್ಲ. ಆದರೆ ನ್ಯೂಜಿಲ್ಯಾಂಡ್ ಸ್ಪಿನ್ನರ್ ಉತ್ತಮ ಲೆಂತ್ ಕಂಡುಕೊಂಡರು. ಸ್ಪಿನ್ನಿಗೆ ಆಡುವಲ್ಲಿ ನಿಷ್ಣಾತರಾಗಿರುವ ಭಾರತೀಯರಿಗೆ ಈ ಎಸೆತಗಳಲ್ಲಿ ಸಿಂಗಲ್ಸ್ ಕೂಡ ಕಠಿನವಾಯಿತು. ಇದರಿಂದ ಒತ್ತಡ ಹೆಚ್ಚುತ್ತ ಹೋಯಿತು’ ಎಂದರು.
ಇದನ್ನೂ ಓದಿ:ದಿಟ್ಟತನದ ಕೊರತೆ ಕಾಡಿತು: ವಿರಾಟ್ ಕೊಹ್ಲಿ
“ಅಂಥ ಅನುಭವಿ ವಿರಾಟ್ ಕೊಹ್ಲಿ ಕೂಡ ಸ್ಪಿನ್ ನಿಭಾಯಿಸುವಲ್ಲಿ ಎಡವಿದರು. ಅವರಿಲ್ಲಿ ಲೆಗ್‌ಸ್ಪಿನ್ ಎಸೆತವೊಂದನ್ನು ಕ್ರಾಸ್ ಬ್ಯಾಟ್ ಶಾಟ್ ಮೂಲಕ ಮಿಡ್‌ವಿಕೆಟ್‌ನತ್ತ ಹೊಡೆದದ್ದು ಅಚ್ಚರಿಯಾಗಿ ಕಂಡಿತು. ಕೊಹ್ಲಿ ಇಂಥ ಹೊಡೆತವನ್ನು ಯಾವತ್ತೂ ಬಾರಿಸಿದವರಲ್ಲ. ಒತ್ತಡದಿಂದ ಇಂಥದ್ದೆಲ್ಲ ಸಂಭವಿಸುತ್ತದೆ’ ಎಂದರು ಭಜ್ಜಿ.