Advertisement
ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಕಾಂಬಿನೇಶನ್‌ನಲ್ಲಿ ಆರಂಭದಲ್ಲೇ ಗೆಲುವಿನ ಖಾತೆ ತೆರೆದ ಭಾರತ ಸಹಜವಾಗಿಯೇ ಖುಷಿಯಲ್ಲಿದೆ. ನಿಯಂತ್ರಿತ ಬೌಲಿಂಗ್, ಅಗ್ರ ಕ್ರಮಾಂಕದ ಬ್ಯಾಟಿಂಗ್ ಯಶಸ್ಸು ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಾಗೆಯೇ ಉತ್ತಮ ಲಯದಲ್ಲಿ ಸಾಗುತ್ತಿದ್ದ ಟೀಮ್ ಇಂಡಿಯಾ ಕೊನೆಯ ಹಂತದಲ್ಲಿ ಒಂದಿಷ್ಟು ಒತ್ತಡಕ್ಕೆ ಸಿಲುಕಿದ್ದನ್ನು ಮರೆಯುವಂತಿಲ್ಲ. ಅಂತಿಮ ಓವರ್ ಡ್ಯಾರಿಲ್ ಮಿಚೆಲ್ ಬದಲು ಟ್ರೆಂಟ್ ಬೌಲ್ಟ್ಗೇನಾದರೂ ಲಭಿಸಿದ್ದರೆ ಪಂದ್ಯದ ಚಿತ್ರಣ ಬದಲಾಗುವ ಸಾಧ್ಯತೆ ಇದ್ದಿತ್ತು. ಈ ಓವರನ್ನು ಸ್ಪೆಷಲಿಸ್ಟ್ ಬೌಲರ್‌ಗೆ ಮೀಸಲಿಡಲಾಗದಿದ್ದುದು ಟಿಮ್ ಸೌಥಿಯ ನಾಯಕತ್ವದ ಅನನುಭವಕ್ಕೆ ಹಿಡಿದ ಕನ್ನಡಿ.
Related Articles
Advertisement
ಭಾರತದ ಬೌಲಿಂಗ್ ವಿಭಾಗದ ಪ್ಲಸ್ ಪಾಯಿಂಟ್ ಎಂದರೆ ಭುವನೇಶ್ವರ್ ಕುಮಾರ್ ಲಯ ಕಂಡುಕೊಂಡದ್ದು. ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ವಿರುದ್ಧವಷ್ಟೇ ಆಡಿದ ಭುವಿ, ಬಳಿಕ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇದಕ್ಕೂ ಮುನ್ನ ಐಪಿಎಲ್‌ನಲ್ಲೂ ಘೋರ ವೈಫಲ್ಯ ಅನುಭವಿಸಿದ್ದರು. ಜೈಪುರದಲ್ಲಿ ಅರ್ಲಿ ಬ್ರೇಕ್ ಒದಗಿಸುವ ಜತೆಗೆ 4 ಓವರ್‌ಗಳ ಕೋಟಾದಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.
ಭಾರತದ ಸ್ಪಿನ್ ಆಕ್ರಮಣ ಹೆಚ್ಚು ಪರಿಣಾಮಕಾರಿಯಾಗಿತ್ತು. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ನ್ಯೂಜಿಲ್ಯಾಂಡ್‌ಗೆ ಭರ್ಜರಿ ಕಡಿವಾಣ ಹಾಕಿದರು.
ಭಾರತದ ಒಟ್ಟು ಬೌಲಿಂಗ್ ಯಶಸ್ಸಿಗೆ ಡೆತ್ ಓವರ್‌ಗಳೇ ಉತ್ತಮ ನಿದರ್ಶನ. ಕೊನೆಯ 5 ಓವರ್‌ಗಳಲ್ಲಿ ಕೇವಲ 41 ರನ್ ನೀಡಿದ ಭಾರತ 3 ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿತ್ತು. ಇಲ್ಲಿ ಕನಿಷ್ಠ 15ರಿಂದ 20 ರನ್ ಉಳಿತಾಯವಾದ್ದರಿಂದ ಟಾರ್ಗೆಟ್ ಸುಲಭವಾಯಿತು ಎಂಬುದು ನಾಯಕ ರೋಹಿತ್ ಶರ್ಮ ಅಭಿಪ್ರಾಯ. ಆದರೆ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್‌ಗೆ ಒಂದೇ ಒಂದು ಓವರ್ ನೀಡದಿದ್ದುದು ಅಚ್ಚರಿಯಾಗಿಯೇ ಉಳಿದಿದೆ.
ಜೈಪುರದ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ನಿವಾರಿಸಿಕೊಂಡು ಹೋರಾಟ ಸಂಘಟಿಸಿದರೆ ನ್ಯೂಜಿಲ್ಯಾಂಡ್ ತಿರುಗಿ ಬೀಳುವ ಸಾಧ್ಯತೆ ಖಂಡಿತ ಇದೆ. ಈ ನಿಟ್ಟಿನಲ್ಲಿ ಭಾರತ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
ಹರ್ಷಲ್ ಪಟೇಲ್‌ಗೆ ಅವಕಾಶ? :
ರಾಂಚಿ ಪಂದ್ಯಕ್ಕಾಗಿ ಭಾರತದ ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ. ಆದರೆ ಬೌಲಿಂಗ್ ವಿಭಾಗದಲ್ಲಿ ಒಂದು ಅಥವಾ ಎರಡು ಪರಿವರ್ತನೆ ಆಗಲೂಬಹುದು. ತವರಿನಂಗಳದಲ್ಲೇ ದುಬಾರಿಯಾದ ದೀಪಕ್ ಚಹರ್, ಕೈಗೆ ಪೆಟ್ಟು ಮಾಡಿಕೊಂಡಿರುವ ಮೊಹಮ್ಮದ್ ಸಿರಾಜ್ ಆಡುವುದು ಅನುಮಾನ. ಆದರೆ ಇಬ್ಬರನ್ನೂ ಏಕಕಾಲಕ್ಕೆ ಹೊರಗಿಡುವ ಸಾಧ್ಯತೆ ಇಲ್ಲ. ಒಂದು ಸ್ಥಾನ ಹರ್ಷಲ್ ಪಟೇಲ್ ಪಾಲಾಗಬಹುದು.
ರಾಂಚಿಯಲ್ಲಿ ಭಾರತ ಅಜೇಯ :
ಧೋನಿ ತವರಾದ ರಾಂಚಿಯಲ್ಲಿ ಭಾರತ ಈವರೆಗೆ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಎರಡನ್ನೂ ಗೆದ್ದಿದೆ. 2016ರಲ್ಲಿ ಶ್ರೀಲಂಕಾ ವಿರುದ್ಧ 69 ರನ್ ಗೆಲುವು ಸಾಧಿಸಿದರೆ, 2017ರಲ್ಲಿ ಆಸ್ಟ್ರೇಲಿಯವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಎರಡರಲ್ಲೂ ಧೋನಿಯೇ ಭಾರತದ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಧೋನಿ ಇಲ್ಲದ ಟೀಮ್ ಇಂಡಿಯಾ ಅವರ ಊರಲ್ಲಿ ಕಣಕ್ಕಿಳಿಯಲಿದೆ.
ಶ್ರೀಲಂಕಾ ವಿರುದ್ಧ ಭಾರತ 6ಕ್ಕೆ 196 ರನ್ ಪೇರಿಸಿತ್ತು. ಶಿಖರ್ ಧವನ್ 51, ರೋಹಿತ್ 43 ರನ್ ಹೊಡೆದಿದ್ದರು. ಚೇಸಿಂಗ್ ವೇಳೆ ಅಶ್ವಿನ್ (14ಕ್ಕೆ 3), ನೆಹ್ರಾ (26ಕ್ಕೆ 2), ಜಡೇಜ (24ಕ್ಕೆ 2) ಮತ್ತು ಬುಮ್ರಾ (17ಕ್ಕೆ 2) ದಾಳಿಗೆ ತತ್ತರಿಸಿದ ಲಂಕಾ 9ಕ್ಕೆ 127 ರನ್ ಮಾಡಿ ಶರಣಾಯಿತು.
ಆಸ್ಟ್ರೇಲಿಯ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿತ್ತು. ಆಸೀಸ್ 18.4 ಓವರ್‌ಗಳಲ್ಲಿ 8ಕ್ಕೆ 118 ರನ್ ಮಾಡಿದಾಗ ಭಾರೀ ಮಳೆ ಸುರಿಯಿತು. ಭಾರತಕ್ಕೆ 6 ಓವರ್‌ಗಳಲ್ಲಿ 48 ರನ್ ಟಾರ್ಗೆಟ್ ಲಭಿಸಿತು. 5.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 49 ರನ್ ಬಾರಿಸಿ ಗೆದ್ದು ಬಂದಿತು.