Advertisement

ರಿವರ್ಸ್‌ ಸ್ವಿಂಗ್‌ ಯಶಸ್ಸೇ ಗೆಲುವಿಗೆ ಕಾರಣ: ಕೊಹ್ಲಿ

09:04 PM Sep 07, 2021 | Team Udayavani |

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಓವಲ್‌ ಟೆಸ್ಟ್‌ ಪಂದ್ಯದಲ್ಲಿ 157 ರನ್‌ಗಳ  ಭರ್ಜರಿ ಗೆಲುವು ಪಡೆದ ಟೀಮ್‌ ಇಂಡಿಯಾ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆ ಪಡೆದಿರುವುದು ಈ ಇತಿಹಾಸ. ಇದರೊಂದಿಗೆ ಟೆಸ್ಟ್‌ ಸರಣಿಯ ಟ್ರೋಫಿಯನ್ನು  ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ತವರಲ್ಲಿ ಆಡಲಾದ 2020-21ರ 4 ಪಂದ್ಯಗಳ ಸರಣಿಯನ್ನು ಭಾರತ 3-1ರಿಂದ ಗೆದ್ದಿತ್ತು. ಓವಲ್‌ ಸೋಲಿನಿಂದಾಗಿ ಇಂಗ್ಲೆಂಡಿಗೆ ಸರಣಿ ಗೆಲುವಿನ ಅವಕಾಶ ತಪ್ಪಿದೆ.

Advertisement

2-1 ಮುನ್ನಡೆ ಬಳಿಕ ಪ್ರತಿಕ್ರಿಯಿಸಿದ ನಾಯಕ ವಿರಾಟ್‌ ಕೊಹ್ಲಿ, ಬೌಲರ್‌ಗಳ ಶ್ರೇಷ್ಠ ಪ್ರದರ್ಶನದಿಂದ ಈ ಗೆಲುವು ಒಲಿದಿದೆ ಎಂದರು.

ಚೆಂಡು ಕೇಳಿ ಪಡೆದ ಬುಮ್ರಾ :

“ಈ ಪಿಚ್‌ ಫ್ಲ್ಯಾಟ್‌ ಆಗಿತ್ತು. ಜತೆಗೆ ಇಲ್ಲಿನ ವಾತಾವರಣವೂ ಸಾಕಷ್ಟು ಬಿಸಿಯಾಗಿತ್ತು. ಒಂದು ತುದಿಯಲ್ಲಿ ರವೀಂದ್ರ ಜಡೇಜ ಬೌಲಿಂಗ್‌ ನಡೆಸುತ್ತಿದ್ದಾಗ ಚೆಂಡು ತಿರುವು ಪಡೆಯತೊಡಗಿತು. ಈ ವೇಳೆ ಬುಮ್ರಾ ಚೆಂಡನ್ನು ಕೇಳಿ ಪಡೆದುಕೊಂಡರು. ಎರಡು ವಿಕೆಟ್‌ಗಳನ್ನು ಒಂದರ ಹಿಂದೊಂದರಂತೆ ಕಿತ್ತು ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಬಳಿಕ ಉಳಿದ ಬೌಲರ್‌ಗಳೂ ರಿವರ್ಸ್‌ ಸ್ವಿಂಗ್‌ ಮಾಡಿ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು’ ಎಂದು ಕ್ಯಾಪ್ಟನ್‌ ಕೊಹ್ಲಿ ಹೇಳಿದರು.

ಶತಕವೀರ ರೋಹಿತ್‌ ಶರ್ಮ, ಆಲ್‌ರೌಂಡ್‌ ಪ್ರದರ್ಶನ ನೀಡಿದ ಶಾರ್ದೂಲ್‌ ಠಾಕೂರ್‌ ಪ್ರದರ್ಶನದ ಬಗ್ಗೆಯೂ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. “ರೋಹಿತ್‌ ಇನ್ನಿಂಗ್ಸ್‌ ಅದ್ಭುತವಾಗಿತ್ತು. ಶಾರ್ದೂಲ್‌ ಈ ಪಂದ್ಯದಲ್ಲಿ ನೀಡಿದ ಆಲ್‌ರೌಂಡ್‌ ಶೋ ಮರೆಯುವಂತಿಲ್ಲ. ಅವರ ಎರಡು ಅರ್ಧ ಶತಕಗಳು ಎದುರಾಳಿಯ ಆತ್ಮಸ್ಥೈರ್ಯವನ್ನೇ ಕುಸಿಯುವಂತೆ ಮಾಡಿತು’ ಎಂದರು.

Advertisement

ಭಾರತದ ಬೌಲಿಂಗ್‌ ಅಪಾಯಕಾರಿ :

ಇಂಗ್ಲೆಂಡ್‌ ನಾಯಕ ಜೋ ರೂಟ್‌ ಕೂಡ ಭಾರತದ ಬೌಲಿಂಗ್‌ ಸಾಹಸವನ್ನು ಪ್ರಶಂಸಿಸಿದ್ದಾರೆ. ತಮ್ಮ ಕುಸಿತಕ್ಕೆ ವೇಗಿಗಳು ನೀಡಿದ ಘಾತಕ ಪ್ರದರ್ಶನವೇ ಕಾರಣ ಎಂದಿದ್ದಾರೆ.

ಭಾರತದ ವೇಗಿಗಳು ರಿವರ್ಸ್‌ ಸ್ವಿಂಗ್‌ ಎಸೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತು ಎಂಬುದು ರೂಟ್‌ ಅಭಿಪ್ರಾಯ.

“ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ್ದಕ್ಕೆ ಬಹಳ ನೋವಾಗಿದೆ. ನಾವು ಗೆಲ್ಲುವ ಅವಕಾಶವಿದೆ ಎಂದೇ ಭಾವಿಸಿದ್ದೆವು. ಇದರ ಶ್ರೇಯಸ್ಸು ಎದುರಾಳಿ ಬೌಲರ್‌ಗಳಿಗೆ ಸಲ್ಲಬೇಕು. ಅವರು ಚೆಂಡನ್ನು ರಿವರ್ಸ್‌ ಸ್ವಿಂಗ್‌ ಮಾಡುವಲ್ಲಿ ಯಶಸ್ವಿಯಾದರು. ಇದು ಪಂದ್ಯಕ್ಕೆ ತಿರುವು ನೀಡಿತು. ಅದರಲ್ಲೂ ಬುಮ್ರಾ ಬೌಲಿಂಗ್‌ ದಾಳಿ ಪರಿಣಾಮಕಾರಿಯಾಗಿತ್ತು’ ಎಂದು ಜೋ ರೂಟ್‌ ಹೇಳಿದರು.

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಬಟ್ಲರ್‌, ಲೀಚ್‌ :

ಲಂಡನ್‌: ಮ್ಯಾಂಚೆಸ್ಟರ್‌ನ “ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌’ ಅಂಗಳದಲ್ಲಿ ಸೆ. 10ರಿಂದ ಆರಂಭವಾಗಲಿರುವ ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಇಂಗ್ಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ. ಜಾಸ್‌ ಬಟ್ಲರ್‌ ಮತ್ತು ಜಾಕ್‌ ಲೀಚ್‌ ತಂಡಕ್ಕೆ ವಾಪಸಾಗಿದ್ದಾರೆ. ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಕೈಬಿಡಲಾಗಿದೆ.

ಇಂಗ್ಲೆಂಡಿನ ನಂ.1 ಕೀಪರ್‌ ಆಗಿರುವ ಜಾಸ್‌ ಬಟ್ಲರ್‌, ಎರಡನೇ ಸಲ ತಂದೆಯಾದ ಕಾರಣ 4ನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು. ಲೀಚ್‌ ಮೊದಲೆರಡು ಟೆಸ್ಟ್‌ಗಳ ವೇಳೆ ತಂಡದಲ್ಲಿದ್ದರೂ ಬಳಿಕ ಅವರನ್ನು ಸಾಮರ್‌ಸೆಟ್‌ ಕೌಂಟಿ ಪರ ಆಡಲು ಬಿಡುಗಡೆಗೊಳಿಸಲಾಗಿತ್ತು.

ಇಂಗ್ಲೆಂಡ್‌ ತಂಡ: ಜೋ ರೂಟ್‌ (ನಾಯಕ), ರೋರಿ ಬರ್ನ್ಸ್, ಹಸೀಬ್‌ ಹಮೀದ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಓಲೀ ಪೋಪ್‌, ಮೊಯಿನ್‌ ಅಲಿ, ಡ್ಯಾನ್‌ ಲಾರೆನ್ಸ್‌, ಕ್ರಿಸ್‌ ವೋಕ್ಸ್‌, ಸ್ಯಾಮ್‌ ಕರನ್‌, ಜಾಕ್‌ ಲೀಚ್‌, ಕ್ರೆಗ್‌ ಓವರ್ಟನ್‌, ಓಲೀ ರಾಬಿನ್ಸನ್‌, ಮಾರ್ಕ್‌ ವುಡ್‌, ಜೇಮ್ಸ್‌ ಆ್ಯಂಡರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next