Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ 8 ವಿಕೆಟಿಗೆ 185 ರನ್ ಗಳಿಸಿತು. ಇದು ಈ ಸರಣಿಯಲ್ಲೇ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಗರಿಷ್ಠ ಮೊತ್ತವಾಗಿದೆ. ಜವಾಬಿತ್ತ ಇಂಗ್ಲೆಂಡ್ 8 ವಿಕೆಟಿಗೆ 177 ರನ್ ಮಾಡಿತು . ಇದರೊಂದಿಗೆ ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದು ಬಂದಂತಾಯಿತು.
ಪದಾರ್ಪಣ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗದೆ, ಬಳಿಕ ತಂಡದಲ್ಲೇ ಅವಕಾಶ ಸಿಗದ ಹತಾಶೆಯಲ್ಲಿದ್ದ ಸೂರ್ಯಕುಮಾರ್ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಸುದ್ದಿಯಾದರು. ಇನ್ನು ಕಾಯಲು ಸಾಧ್ಯವಿಲ್ಲ, ಸಿಕ್ಕಿದ ಅವಕಾಶವನ್ನು ವ್ಯರ್ಥಗೊಳಿಸುವುದಿಲ್ಲ ಎಂಬ ರೀತಿಯಲ್ಲಿ ಬ್ಯಾಟ್ ಬೀಸುತ್ತ ಭಾರತದ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ವಿರಾಟ್ ಕೊಹ್ಲಿ ಬದಲು ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದ ಸೂರ್ಯಕುಮಾರ್ ಕೊಡುಗೆ 31 ಎಸೆತಗಳಿಂದ 57 ರನ್. ಇಂಗ್ಲೆಂಡಿನ ಎಲ್ಲ ಬೌಲರ್‌ಗಳನ್ನೂ ಏಕಪ್ರಕಾರವಾಗಿ ದಂಡಿಸಿ 6 ಫೋರ್, 3 ಸಿಕ್ಸರ್ ಬಾರಿಸಿದರು.
ಸೂರ್ಯಕುಮಾರ್ ಹೊರತುಪಡಿಸಿದರೆ ಗಮನಾರ್ಹ ನಿರ್ವಹಣೆ ತೋರಿದವರೆಂದರೆ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್. 6ನೇ ಕ್ರಮಾಂಕದಲ್ಲಿ ಆಡಲಿಳಿದ ಅಯ್ಯರ್ 18 ಎಸೆತ ಎದುರಿಸಿ 37 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು. ಪಂತ್ 23 ಎಸೆತಗಳಿಂದ 30 ರನ್ ಹೊಡೆದರು (4 ಬೌಂಡರಿ).
Related Articles
ಭಾರತದ ಅಗ್ರ ಕ್ರಮಾಂಕ ಮತ್ತೆ ವೈಫಲ್ಯ ಕಂಡಿತು. ರೋಹಿತ್ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ರವಾನಿಸಿದರೂ 12ರ ಗಡಿಯಲ್ಲಿ ಆರ್ಚರ್‌ಗೆ ರಿಟರ್ನ್ ಕ್ಯಾಚ್ ನೀಡಿ ವಾಪಸಾದರು. ರಾಹುಲ್ ಸ್ಥಾನ ಉಳಿಸಿಕೊಂಡರೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. 17 ಎಸೆತಗಳಿಂದ 14 ರನ್ ಮಾಡಿ ನಿರಾಸೆ ಮೂಡಿಸಿದರು. ಸೂರ್ಯಕುಮಾರ್ ಸಿಡಿದುದರಿಂದ ಪವರ್ ಪ್ಲೇ ಅವಧಿಯಲ್ಲಿ ಭಾರತ 45 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.
Advertisement
ಸತತ 2 ಅರ್ಧ ಶತಕ ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಇಲ್ಲಿ ಒಂದೇ ರನ್ನಿಗೆ ಆಟ ಮುಗಿಸಿದರು. ಅರ್ಧ ಹಾದಿ ಕ್ರಮಿಸುವಾಗ ಭಾರತ 3ಕ್ಕೆ 75 ರನ್ ದಾಖಲಿಸಿತ್ತು. 15 ಓವರ್ ಮುಕ್ತಾಯಕ್ಕೆ 4ಕ್ಕೆ 128 ರನ್ ಆಗಿತ್ತು. ಪಾಂಡ್ಯ ಕೂಡ ಕ್ಲಿಕ್ ಆಗಲಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ದಿಟ್ಟ ಆಟವಾಡಿದ ಭಾರತ 57 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
ಇಂಗ್ಲೆಂಡ್ ಪರ ಜೋಫÅ ಆರ್ಚರ್ 33 ರನ್ನಿತ್ತು 4 ವಿಕೆಟ್ ಉರುಳಿಸಿದರು.
ಸೂರ್ಯಕುಮಾರ್… ಮೊದಲ ಹೊಡೆತವೇ ಸಿಕ್ಸರ್!ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಮೋಘ ಎಂಟ್ರಿ ಕೊಟ್ಟರು. ವೇಗಿ ಜೋಫ್ರ ಆರ್ಚರ್ ಎಸೆತವನ್ನು ಒಂದು ಅಡಿ ಮುಂದೆ ಬಂದು ಆಕರ್ಷಕ ಹುಕ್ ಶಾಟ್ ಮೂಲಕ ಫೈನಲ್ ಲೆಗ್ ಬೌಂಡರಿ ಮೇಲಿನಿಂದ ಬಡಿದಟ್ಟಿ ಹೊಸ ಸಂಚಲನ ಮೂಡಿಸಿದರು. “ಸ್ಕೈ’ಗೆ (ಎಸ್.ಕೆ.ವೈ.) ಎಲ್ಲ ದಿಕ್ಕುಗಳಿಂದಲೂ ಭರ್ಜರಿ ಸ್ವಾಗತ ಲಭಿಸಿತು. ಸೂರ್ಯಕುಮಾರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿನ ಮೊದಲ ಎಸೆತವನ್ನೇ ಸಿಕ್ಸರ್‌ಗೆ ರವಾನಿಸಿದ ಕೇವಲ 3ನೇ ಆಟಗಾರ. ಪಾಕಿಸ್ಥಾನದ ಸೊಹೈಲ್ ತನ್ವೀರ್ (ಭಾರತದ ವಿರುದ್ಧ, ಜೊಹಾನ್ಸ್‌ಬರ್ಗ್, 2007) ಮತ್ತು ದಕ್ಷಿಣ ಆಫ್ರಿಕಾದ ಮಂಗಲಿಸೊ ಮೊಸೇಲೆ (ಶ್ರೀಲಂಕಾ ವಿರುದ್ಧ, ಸೆಂಚುರಿಯನ್, 2017) ಉಳಿದಿಬ್ಬರು. ಅರ್ಧ ಶತಕದ ದಾಖಲೆ
ಬಳಿಕ ಸೂರ್ಯಕುಮಾರ್ ಇನ್ನೊಂದು ಸಾಧನೆಯ ಮೂಲಕವೂ ಸುದ್ದಿಯಾದರು. ಮೊದಲ ಟಿ20 ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದ ಭಾರತದ ಕೇವಲ 5ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಉಳಿದವರೆಂದರೆ ಉತ್ತಪ್ಪ (50), ರೋಹಿತ್(ಅಜೇಯ 50), ರಹಾನೆ (61) ಮತ್ತು ಇಶಾನ್ ಕಿಶನ್ (56). ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸರ್!
ರೋಹಿತ್ ಶರ್ಮ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ 7ನೇ ಬ್ಯಾಟ್ಸ್‌ಮನ್ ಎನಿಸಿದರು. ಉಳಿದವರೆಂದರೆ ಕಮ್ರಾನ್ ಅಕ್ಮಲ್, ಕರೀಂ ಸಾದಿಕ್, ಡ್ವೇನ್ ಸ್ಮಿತ್ (2 ಸಲ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ ಮತ್ತು ಹಜ್ರತುಲ್ಲ ಜಜಾಯ್. ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಮತ್ತು ಬಿ ಆರ್ಚರ್ 12
ಕೆ.ಎಲ್. ರಾಹುಲ್ ಸಿ ಆರ್ಚರ್ ಬಿ ಸ್ಟೋಕ್ಸ್ 14
ಸೂರ್ಯಕುಮಾರ್ ಸಿ ಮಾಲನ್ ಬಿ ಕರನ್ 57
ವಿರಾಟ್ ಕೊಹ್ಲಿ ಸ್ಟಂಪ್ಡ್ ಬಟ್ಲರ್ ಬಿ ರಶೀದ್ 1
ರಿಷಭ್ ಪಂತ್ ಬಿ ಆರ್ಚರ್ 30
ಶ್ರೇಯಸ್ ಅಯ್ಯರ್ ಸಿ ಮಾಲನ್ ಬಿ ಆರ್ಚರ್ 37
ಹಾರ್ದಿಕ್ ಪಾಂಡ್ಯ ಸಿ ಸ್ಟೋಕ್ಸ್ ಬಿ ವುಡ್ 11
ಶಾದೂìಲ್ ಠಾಕೂರ್ ಔಟಾಗದೆ 10
ಸುಂದರ್ ಸಿ ರಶೀದ್ ಬಿ ಆರ್ಚರ್ 4
ಭುವನೇಶ್ವರ್ ಔಟಾಗದೆ 0
ಇತರ 9
ಒಟ್ಟು (8 ವಿಕೆಟಿಗೆ) 185
ವಿಕೆಟ್ ಪತನ: 1-21, 2-63, 3-70, 4-110, 5-144, 6-170, 7 -174, 8-179.
ಬೌಲಿಂಗ್: ಆದಿಲ್ ರಶೀದ್ 4-1-39-1
ಜೋಫ್ರ ಆರ್ಚರ್ 4-0-33-4
ಮಾರ್ಕ್ ವುಡ್ 4-1-25-1
ಕ್ರಿಸ್ ಜೋರ್ಡನ್ 4-0-41-0
ಬೆನ್ ಸ್ಟೋಕ್ಸ್ 3-0-26-1
ಸ್ಯಾಮ್ ಕರನ್ 1-0-16-1 ಇಂಗ್ಲೆಂಡ್
ಜಾಸನ್ ರಾಯ್ ಸಿ ಸೂರ್ಯಕುಮಾರ್ ಬಿ ಪಾಂಡ್ಯ 40
ಜಾಸ್ ಬಟ್ಲರ್ ಸಿ ರಾಹುಲ್ ಬಿ ಭುವನೇಶ್ವರ್ 9
ಡೇವಿಡ್ ಮಾಲನ್ ಬಿ ಚಹರ್ 14
ಜಾನಿ ಬೇರ್‌ಸ್ಟೊ ಸಿ ಸುಂದರ್ ಬಿ ಚಹರ್ 25
ಬೆನ್ ಸ್ಟೋಕ್ಸ್ ಸಿ ಸೂರ್ಯಕುಮಾರ್ ಬಿ ಶಾದೂìಲ್ 46
ಇಯಾನ್ ಮಾರ್ಗನ್ ಸಿ ಸುಂದರ್ ಬಿ ಶಾದೂìಲ್ 1
ಸ್ಯಾಮ್ ಕರನ್ ಬಿ ಪಾಂಡ್ಯ 3
ಕ್ರಿಸ್ ಜೋರ್ಡನ್ ಸಿ ಪಾಂಡ್ಯ ಬಿ ಶಾದೂìಲ್ 12
ಜೋಫ್ರ ಆರ್ಚರ್ ಔಟಾಗದೆ 18
ಆದಿಲ್ ರಶೀದ್ ಔಟಾಗದೆ 0
ಇತರ 6
ಒಟ್ಟು (8 ವಿಕೆಟಿಗೆ) 177
ವಿಕೆಟ್ ಪತನ: 1-15, 2-60, 3-66, 4-131, 5-140, 6-140, 7-153, 8-177.
ಬೌಲಿಂಗ್: ಭುವನೇಶ್ವರ್ ಕುಮಾರ್ 4 -1-30-1
ಹಾರ್ದಿಕ್ ಪಾಂಡ್ಯ 4-0-16-2
ಶಾದೂìಲ್ ಠಾಕೂರ್ 4-0-42-3
ವಾಷಿಂಗ್ಟನ್ ಸುಂದರ್ 4-0-52-0
ರಾಹುಲ್ ಚಹರ್ 4-0-35-2 ರೋಹಿತ್ ಶರ್ಮ 9 ಸಾವಿರ ರನ್
ಉಪನಾಯಕ ರೋಹಿತ್ ಶರ್ಮ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದ ವಿಶ್ವದ 9ನೇ ಹಾಗೂ ಭಾರತದ ಕೇವಲ 2ನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು. ಈ ಯಾದಿಯ ಮೊದಲಿಗ ವಿರಾಟ್ ಕೊಹ್ಲಿ.
4ನೇ ಪಂದ್ಯದಲ್ಲಿ 11 ರನ್ ಮಾಡಿದ ವೇಳೆ ರೋಹಿತ್ ಈ ಮೈಲುಗಲ್ಲು ನೆಟ್ಟರು. 13,296 ರನ್ ಪೇರಿಸಿರುವ ಕ್ರಿಸ್ ಗೇಲ್ ಈ ಯಾದಿಯ ಅಗ್ರಸ್ಥಾನದಲ್ಲಿದ್ದಾರೆ. ಕೈರನ್ ಪೊಲಾರ್ಡ್‌ಗೆ ದ್ವಿತೀಯ ಸ್ಥಾನ (10,370). ಇವರಿಬ್ಬರೂ 10 ಸಾವಿರ ರನ್ ಗಡಿ ದಾಟಿದ್ದಾರೆ. ಉಳಿದವರೆಂದರೆ ಶೋಯಿಬ್ ಮಲಿಕ್, ಬ್ರೆಂಡನ್ ಮೆಕಲಮ್, ಡೇವಿಡ್ ವಾರ್ನರ್, ಆರನ್ ಫಿಂಚ್ ಮತ್ತು ಎಬಿ ಡಿ ವಿಲಿಯರ್. ಆಡುವ ಬಳಗದಲ್ಲಿ ಸೂರ್ಯಕುಮಾರ್, ಚಹರ್
4ನೇ ಟಿ20 ಪಂದ್ಯಕ್ಕಾಗಿ ಭಾರತ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿಕೊಂಡಿತು. ಕಳೆದ ಮೂರೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೆ.ಎಲ್. ರಾಹುಲ್ ಸ್ಥಾನ ಉಳಿಸಿಕೊಂಡರು. ಆದರೆ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಹೊರಗುಳಿಯಬೇಕಾಯಿತು. ಇವರ ಬದಲು ಸೂರ್ಯಕುಮಾರ್ ಯಾದವ್ ಅವಕಾಶ ಪಡೆದರು. 2ನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ ಸೂರ್ಯಕುಮಾರ್‌ಗೆ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಹೀಗಿದ್ದೂ 3ನೇ ಮುಖಾಮುಖೀಯಲ್ಲಿ ಅವರನ್ನು ಏಕಾಏಕಿ ಹೊರಗಿರಿಸಲಾಗಿತ್ತು. ಅಷ್ಟೇನೂ ಪರಿಣಾಮ ಬೀರದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಕೈಬಿಟ್ಟು ಲೆಗ್‌ಬ್ರೇಕ್ ಗೂಗ್ಲಿ ಬೌಲರ್ ರಾಹುಲ್ ಚಹರ್ ಅವರನ್ನು ಸೇರಿಸಿಕೊಳ್ಳಲಾಯಿತು. ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಅದು ತೃತೀಯ ಪಂದ್ಯದ ವಿಜೇತ ಬಳಗವನ್ನೇ ಉಳಿಸಿಕೊಂಡಿತು.