ಅಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಭಾರತ ಬುಧವಾರ ಬಾಂಗ್ಲಾ ವಿರುದ್ಧ ಸೂಪರ್ 12 ಹಂತದ ಮಹತ್ವದ ಪಂದ್ಯವನ್ನಾಡಲಿದೆ. ದಕ್ಷಿಣ ಆಫ್ರಿಕಾ ಸೋತ ಬಳಿಕ ಭಾರತದ ಬ್ಯಾಟಿಂಗ್ ಚಿಂತೆ ಮತ್ತೆ ಎದುರಿಗೆ ಬಂದಿದೆ. ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡಬೇಕಿದೆ.
ರೋಹಿತ್ ಬಳಗ ಬ್ಯಾಟಿಂಗ್ ನಲ್ಲಿ ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ. ಆರಂಭಿಕರಾದ ಕೆ.ಎಲ್.ರಾಹುಲ್ ಕಳಪೆ ಫಾರ್ಮ್ ನಲ್ಲಿದ್ದಾರೆ. ಅವರು ಯಾವ ಪಂದ್ಯದಲ್ಲೂ ಹೇಳಿಕೊಳ್ಳುವಷ್ಟು ಸಮಯ ಕ್ರೀಸ್ ನಲ್ಲಿ ನಿಂತಿಲ್ಲ. ಎರಡಂಕಿ ರನ್ ಗಳಿಸಿ ಔಟಾಗುತ್ತಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಿದೆ.
ಶ್ರೇಷ್ಠ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ನೆಟ್ ನಲ್ಲಿ ಕೆ.ಎಲ್.ರಾಹುಲ್ ಅವರಿಗೆ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದಾರೆ. ಕೆ.ಎಲ್.ರಾಹುಲ್ ಸ್ವಿಂಗ್ ಬಾಲ್ ನಲ್ಲಿ ಹೆಚ್ಚಾಗಿ ವಿಕೆಟ್ ಕೊಟ್ಟಿದ್ದಾರೆ. ವೇಗಿಗಳ ವಿರುದ್ಧ ಸರಿಯಾದ ರೀತಿ ಬ್ಯಾಟ್ ಬೀಸಲು ಆಗುತ್ತಿಲ್ಲ.
ಮಂಗಳವಾರ ನೆಟ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ , ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೆ.ಎಲ್ ರಾಹುಲ್ ಅವರಿಗೆ ಬಾಲ್ ಮಾಡಿದ್ದಾರೆ. ಈ ವೇಳೆ ಕೊಹ್ಲಿ ಅಂಪೈರ್ ನಿಲ್ಲುವ ಜಾಗದಲ್ಲಿ ಅಂದರೆ ರಾಹುಲ್ ಅವರ ನೇರಕ್ಕೆ ನಿಂತಿದ್ದರು. ಬಾಲ್ ಮಾಡುವ ಮೊದಲೇ ರಾಹುಲ್ ಕ್ರೀಸ್ ನಿಂದ ಸ್ವಲ್ಪ ಸರಿದಿದ್ದಾರೆ. ಇದನ್ನು ನೋಡಿ ಕೊಹ್ಲಿ ರಾಹುಲ್ ಅವರಿಗೆ ಫಾರ್ವಾಡ್ ಪ್ರೆಸ್ ಬಗ್ಗೆ ಹೇಳಿದ್ದಾರೆ. ಆ ಬಳಿಕ ರಾಹುಲ್ ಅದೇ ರೀತಿ ಫಾರ್ವಾಡ್ ಪ್ರೆಸ್ ಮಾಡಿ ಆಡಿದ್ದಾರೆ.