Advertisement

2nd T20; ಅಫ್ಘಾನ್‌ ವಿರುದ್ಧ ಟೀಮ್‌ ಇಂಡಿಯಾದ ಅಜೇಯ ಅಭಿಯಾನ

10:45 PM Jan 14, 2024 | Team Udayavani |

ಇಂದೋರ್‌: ಭಾರತ ಸರಣಿ ಗೆಲುವಿನ ಸಂಕ್ರಮಣವನ್ನು ಆಚರಿಸಿದೆ. ಅಫ್ಘಾನಿಸ್ಥಾನ ವಿರುದ್ಧದ ದ್ವಿತೀಯ ಟಿ20 ಪಂದ್ಯವನ್ನು 4.2 ಓವರ್‌ ಬಾಕಿ ಇರುವಾಗಲೇ 6 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿದೆ. ಇದರೊಂದಿಗೆ ಅಫ್ಘಾನ್‌ ವಿರುದ್ಧ ಟೀಮ್‌ ಇಂಡಿಯಾದ ಅಜೇಯ ಅಭಿಯಾನ ಮುಂದುವರಿಯಿತು.

Advertisement

ಇಂದೋರ್‌ ಮುಖಾಮುಖೀಯಲ್ಲಿ ಅಫ್ಘಾನ್‌ ಸರಿಯಾಗಿ 20 ಓವರ್‌ಗಳಲ್ಲಿ 172 ರನ್‌ ಗಳಿಸಿದರೆ, ಭಾರತ 15.4 ಓವರ್‌ಗಳಲ್ಲಿ 4 ವಿಕೆಟಿಗೆ 173 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಎಡಗೈ ಆಟಗಾರರಾದ ಯಶಸ್ವಿ ಜೈಸ್ವಾಲ್‌ ಮತ್ತು ಶಿವಂ ದುಬೆ ಅವರ ಅರ್ಧ ಶತಕ, 92 ರನ್‌ ಜತೆಯಾಟ ಭಾರತದ ಗೆಲುವನ್ನು ಸುಲಭಗೊಳಿಸಿತು. ಜೈಸ್ವಾಲ್‌ 34 ಎಸೆತಗಳಿಂದ 68 ರನ್‌ (5 ಬೌಂಡರಿ, 6 ಸಿಕ್ಸರ್‌), ದುಬೆ 32 ಎಸೆತಗಳಿಂದ ಅಜೇಯ 63 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌)

ರೋಹಿತ್‌ ಜೀರೋ!
ಅಫ್ಘಾನ್‌ ವಿರುದ್ಧ ಗರಿಷ್ಠ ಮೊತ್ತದ ಚೇಸಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ ಮತ್ತೂಮ್ಮೆ ಸೊನ್ನೆ ಸುತ್ತಿ ವಾಪಸಾದರು. ಇದು ಗೋಲ್ಡನ್‌ ಡಕ್‌ ಆಗಿತ್ತು. ಫಾರೂಖೀ ಅವರ ಎಸೆತದಲ್ಲಿ ಬೌಲ್ಡ್‌ ಆದರು. ಮೊದಲ ಪಂದ್ಯದಲ್ಲಿ 2ನೇ ಎಸೆತದಲ್ಲಿ ರನೌಟ್‌ ಆಗಿದ್ದರು. ಇದು ಟಿ20ಯಲ್ಲಿ ರೋಹಿತ್‌ ದಾಖಲಿಸಿದ 12ನೇ ಸೊನ್ನೆ. ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ರಾಷ್ಟ್ರಗಳ ವಿರುದ್ಧ ದಾಖಲಾದ ಗರಿಷ್ಠ ಸೊನ್ನೆಗಳ ದಾಖಲೆ.

ರೋಹಿತ್‌ ಬೇಗ ವಾಪಸಾದರೂ ಜೈಸ್ವಾಲ್‌-ಕೊಹ್ಲಿ ಸಿಡಿದು ನಿಂತರು. 2ನೇ ವಿಕೆಟಿಗೆ 4.4 ಓವರ್‌ಗಳಿಂದ 57 ರನ್‌ ಹರಿದು ಬಂತು. 14 ತಿಂಗಳ ಬಳಿಕ ಟಿ20 ಆಡಲಿಳಿದ ಕೊಹ್ಲಿ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರು. 16 ಎಸೆತಗಳಿಂದ 29 ರನ್‌ ಹೊಡೆದರು (5 ಬೌಂಡರಿ).

Advertisement

ಗುಲ್ಬದಿನ್‌ ಅರ್ಧ ಶತಕ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ಥಾನ ಪವರ್‌ ಪ್ಲೇ ಅವಧಿಯಲ್ಲಿ 2 ವಿಕೆಟ್‌ ಕಳೆದುಕೊಂಡರೂ ಸರಾಸರಿ ಹತ್ತರಂತೆ ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು. ವನ್‌ಡೌನ್‌ ಬ್ಯಾಟರ್‌ ಗುಲ್ಬದಿನ್‌ ನೈಬ್‌ ಭಾರತದ ಬೌಲಿಂಗ್‌ ಆಕ್ರಮಣವನ್ನು ಯಾವುದೇ ಒತ್ತಡವಿಲ್ಲದೆ ಎದುರಿಸಿ ನಿಂತು ಅರ್ಧ ಶತಕದ ಕೊಡುಗೆ ಸಲ್ಲಿಸಿದರು.

ರೆಹಮಾನುಲ್ಲ ಗುರ್ಬಜ್‌ (14), ನಾಯಕ ಇಬ್ರಾಹಿಂ ಜದ್ರಾನ್‌ (8) ಮತ್ತು ಅಜ್ಮತುಲ್ಲ ಒಮರ್‌ಜಾಯ್‌ (2) ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಸ್ಟ್ರೈಕ್‌ ಬೌಲರ್‌ಗಳಾದ ಅರ್ಷದೀಪ್‌ ಮತ್ತು ಮುಕೇಶ್‌ ಕುಮಾರ್‌ ನಿಯಂತ್ರಣ ಹೇರಲು ವಿಫ‌ಲರಾದರು. ಹೀಗಾಗಿ ಸ್ಪಿನ್ನರ್‌ ರವಿ ಬಿಷ್ಣೋಯಿ ಅವರನ್ನು ಬೇಗನೇ ದಾಳಿಗಿಳಿಸಲಾಯಿತು. ಇದು ಯಶಸ್ಸು ತಂದಿತ್ತಿತು.

3 ವಿಕೆಟ್‌ ಬೇಗ ಉರುಳಿದರೂ ಅಫ್ಘಾನ್‌ ಒತ್ತಡಕ್ಕೆ ಸಿಲುಕಲಿಲ್ಲ. ನೈಬ್‌ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸತೊಡಗಿದರು. 12ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಗುಲ್ಬದಿನ್‌ ಆಕ್ರಮಣಕಾರಿ ಆಟದ ಮೂಲಕ ಭಾರತದ ಬೌಲರ್‌ಗಳ ಮೇಲೆರಗಿದರು. ಇವರ ಕೊಡುಗೆ 35 ಎಸೆತಗಳಿಂದ 57 ರನ್‌. ಸಿಡಿಸಿದ್ದು 5 ಬೌಂಡರಿ ಹಾಗೂ 4 ಸಿಕ್ಸರ್‌.

ಗುಲ್ಬದಿನ್‌ ಪೆವಿಲಿಯನ್‌ ಸೇರಿಕೊಂಡ ಬಳಿಕ ನಜೀಬುಲ್ಲ ಜದ್ರಾನ್‌, ಕರೀಂ ಜನ್ನತ್‌ ಮತ್ತು ಮುಜೀಬ್‌ ಉರ್‌ ರೆಹಮಾನ್‌ ಕ್ಷಿಪ್ರ ಗತಿಯಲ್ಲಿ ರನ್‌ ಪೇರಿಸುವಲ್ಲಿ ಯಶಸ್ವಿಯಾದರು. ಈ ಮೂವರೂ ಇಪ್ಪತ್ತರ ಗಡಿ ದಾಟಿದರು. ಇವರ ಒಟ್ಟು ಗಳಿಕೆ 64 ರನ್‌. ಮೂವರಿಂದ 5 ಫೋರ್‌, 5 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಸಂಕ್ಷಿಪ್ತ ಸ್ಕೋರ್‌
ಅಫ್ಘಾನಿಸ್ಥಾನ-172 (ಗುಲ್ಬದಿನ್‌ 57, ನಜೀಬುಲ್ಲ 23, ಮುಜೀಬ್‌ 21, ಜನ್ನತ್‌ 20, ಅರ್ಷದೀಪ್‌ 32ಕ್ಕೆ 3, ಅಕ್ಷರ್‌ 17ಕ್ಕೆ 2, ಬಿಷ್ಣೋಯಿ 39ಕ್ಕೆ 2). ಭಾರತ-15.4 ಓವರ್‌ಗಳಲ್ಲಿ 4 ವಿಕೆಟಿಗೆ 173 (ದುಬೆ ಔಟಾಗದೆ 63, ಜೈಸ್ವಾಲ್‌ 68, ಕೊಹ್ಲಿ 29, ಜನ್ನತ್‌ 13ಕ್ಕೆ 2). ಪಂದ್ಯಶ್ರೇಷ್ಠ: ಅಕ್ಷರ್‌ ಪಟೇಲ್‌.

 

Advertisement

Udayavani is now on Telegram. Click here to join our channel and stay updated with the latest news.

Next