Advertisement

IND V/s SA: ರಬಾಡ ದಾಳಿ ತಡೆದು ನಿಂತ ರಾಹುಲ್‌

11:11 PM Dec 26, 2023 | Team Udayavani |

ಸೆಂಚುರಿಯನ್‌: ವೇಗಿಗಳಿಗೆ ಭರಪೂರ ನೆರವು ನೀಡುವ ಸೆಂಚುರಿಯನ್‌ ಪಿಚ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಬೌಲರ್ ಮೇಲುಗೈ ಸಾಧಿಸಿದ್ದಾರೆ. ಭಾರತ ಬ್ಯಾಟಿಂಗ್‌ನಲ್ಲಿ ಚಡಪಡಿಸುತ್ತ ಸಾಗಿದೆ. ಮಳೆಯಿಂದಾಗಿ ಮೊದಲ ದಿನದಾಟ 59 ಓವರ್‌ಗಳಿಗೆ ಕೊನೆಗೊಂಡಾಗ ರೋಹಿತ್‌ ಪಡೆ 8 ವಿಕೆಟಿಗೆ 208 ರನ್‌ ಗಳಿಸಿತ್ತು.

Advertisement

ವೇಗಿ ಕಾಗಿಸೊ ರಬಾಡ ಬಡಬಡನೆ ವಿಕೆಟ್‌ ಉರುಳಿಸುತ್ತ ಐವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಕಳೆದ ಕೆಲವು ಸಮಯದಿಂದ ಆಪತ್ಬಾಂಧವನ ಪಾತ್ರ ವಹಿಸುತ್ತ ಬಂದಿರುವ ಕೆ.ಎಲ್‌. ರಾಹುಲ್‌ 70 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಭಾರತೀಯ ಸರದಿಯ ಏಕೈಕ ಅರ್ಧ ಶತಕವಾಗಿದೆ.

108 ಎಸೆತ ಎದುರಿಸಿ ನಿಂತಿರುವ ರಾಹುಲ್‌ 10 ಬೌಂಡರಿ, 2 ಸಿಕ್ಸರ್‌ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಆದರೆ ಕೈಲಿರುವುದು ಎರಡೇ ವಿಕೆಟ್‌ಗಳಾದ್ದರಿಂದ ಭಾರತಕ್ಕಿಲ್ಲಿ ದೊಡ್ಡ ಮೊತ್ತ ಅಸಾಧ್ಯ. ಬೌಲರ್‌ಗಳು ತಿರುಗೇಟು ನೀಡಿದರೆ ಮೇಲುಗೈ ಸಾಧಿಸಲಡ್ಡಿಯಿಲ್ಲ. ದ್ವಿತೀಯ ದಿನದಾಟಕ್ಕೂ ಮಳೆಯಿಂದ ಅಡಚಣೆ ಆಗುವ ಸಾಧ್ಯತೆ ಇದೆ. ಇದು ಭಾರತದ ಬೌಲರ್‌ಗಳಿಗೆ ಹೆಚ್ಚಿನ ಲಾಭ ತರಬಹುದೆಂಬುದೊಂದು ನಿರೀಕ್ಷೆ.

ವಿರಾಟ್‌ ಕೊಹ್ಲಿ (38) ಮತ್ತು ಶ್ರೇಯಸ್‌ ಅಯ್ಯರ್‌ (31) ಮೂವತ್ತರ ಗಡಿ ದಾಟಿದ ಇಬ್ಬರು. ಶಾರ್ದೂಲ್‌ ಠಾಕೂರ್‌ 24 ರನ್‌ ಮಾಡಿದರು.
ಕಾಗಿಸೊ ರಬಾಡ 44 ರನ್‌ ವೆಚ್ಚದಲ್ಲಿ 5 ವಿಕೆಟ್‌ ಕೆಡವಿದರು. ಅವರು ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ 14ನೇ ನಿದರ್ಶನ ಇದಾಗಿದೆ. ಭಾರತದ ವಿರುದ್ಧ ಈ ಸಾಧನೆಗೈದದ್ದು ಇದೇ ಮೊದಲು.

ಟಾಸ್‌ ಸೋಲು
ರೋಹಿತ್‌ ಶರ್ಮ ಟಾಸ್‌ ಸೋತದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಬೌಲಿಂಗ್‌ ನಡೆಸಲು ತುದಿಗಾಲಲ್ಲಿ ನಿಂತಿದ್ದ ದಕ್ಷಿಣ ಆಫ್ರಿಕಾ ಭಾರೀ ಉಮೇದಿನಲ್ಲಿ ದಾಳಿಗೆ ಇಳಿಯಿತು. ಮೊದಲ ಗಂಟೆಯಲ್ಲಿ, 24 ರನ್‌ ಆಗುವಷ್ಟರಲ್ಲಿ ಭಾರತದ 3 ವಿಕೆಟ್‌ ಹಾರಿಸಿತು. ಮೊದಲ ನಿರ್ಗಮನದ ಸರದಿ ನಾಯಕ ರೋಹಿತ್‌ ಅವರದೇ ಆಗಿತ್ತು. ಎದುರಾಳಿ ಕಪ್ತಾನನನ್ನು ಬರ್ಗರ್‌ಗೆ ಕ್ಯಾಚ್‌ ಕೊಡಿಸಿದ ರಬಾಡ ವಿಕೆಟ್‌ ಬೇಟೆಗೆ ಮುಹೂರ್ತವಿರಿಸಿದರು. ಆಗ ಸ್ಕೋರ್‌ ಬರೀ 13 ರನ್‌ ಆಗಿತ್ತು.

Advertisement

ಇನ್ನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಬಿರುಸಿನ ಆಟಕ್ಕಿಳಿದರೂ ಬ್ಯಾಟಿಂಗ್‌ ವಿಸ್ತರಿಸಲು ವಿಫ‌ಲರಾದರು. ಜೈಸ್ವಾಲ್‌ ಗಳಿಕೆ 37 ಎಸೆತಗಳಿಂದ 17 ರನ್‌ (4 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಶುಭಮನ್‌ ಗಿಲ್‌ ಕೇವಲ 2 ರನ್‌ ಮಾಡಿ ನಿರ್ಗಮಿಸಿದರು. ಈ ಎರಡೂ ವಿಕೆಟ್‌ ಚೊಚ್ಚಲ ಟೆಸ್ಟ್‌ ಆಡಿದ ಬರ್ಗರ್‌ ಪಾಲಾಯಿತು.

ವಿರಾಟ್‌ ಕೊಹ್ಲಿ-ಶ್ರೇಯಸ್‌ ಅಯ್ಯರ್‌ ಸೇರಿಕೊಂಡು ಲಂಚ್‌ ತನಕ ಇನ್ನಿಂಗ್ಸ್‌ ಆಧರಿಸಿದರು. ಸ್ಕೋರ್‌ 91ಕ್ಕೆ ಏರಿತು. ಭೋಜನ ವಿರಾಮದ ಬಳಿಕ ರಬಾಡ ದಾಳಿ ತೀವ್ರಗೊಂಡಿತು. ಈ ಅವಧಿಯಲ್ಲಿ ಭಾರತ 4 ವಿಕೆಟ್‌ ಕಳೆದುಕೊಂಡಿತು. ನಾಲ್ಕೂ ವಿಕೆಟ್‌ ರಬಾಡ ಪಾಲಾದವು.

ಲಂಚ್‌ ಕಳೆದು ಒಂದು ರನ್‌ ಆಗುವಷ್ಟರಲ್ಲಿ ಶ್ರೇಯಸ್‌ ಅಯ್ಯರ್‌ ವಿಕೆಟ್‌ ಬಿತ್ತು. ಬಳಿಕ ಕೊಹ್ಲಿ, ಅಶ್ವಿ‌ನ್‌, ಠಾಕೂರ್‌ ಪೆವಿಲಿಯನ್‌ ಸೇರಿಕೊಂಡರು. ಅಯ್ಯರ್‌ ಭರ್ತಿ 50 ಎಸೆತ ಎದುರಿಸಿ 31 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). ಕೊಹ್ಲಿ ಗಳಿಕೆ 38 ರನ್‌. 64 ಎಸೆತ ಎದುರಿಸಿದ ಅವರು 5 ಬೌಂಡರಿ ಬೀಸಿದರು.
ಕೆ.ಎಲ್‌. ರಾಹುಲ್‌ ಜತೆಗೆ ಖಾತೆ ತೆರೆಯದ ಮೊಹಮ್ಮದ್‌ ಸಿರಾಜ್‌ ಕ್ರೀಸ್‌ನಲ್ಲಿದ್ದಾರೆ.

ಪ್ರಸಿದ್ಧ್ ಕೃಷ್ಣ ಟೆಸ್ಟ್‌ ಪದಾರ್ಪಣೆ
ಕರ್ನಾಟಕದ ಪೇಸ್‌ ಬೌಲರ್‌ ಪ್ರಸಿದ್ಧ್ ಕೃಷ್ಣ ಅವರಿಗೆ ಟೆಸ್ಟ್‌ ಪದಾರ್ಪಣೆಯ ಅದೃಷ್ಟ ಒಲಿಯಿತು. ಆದರೆ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಜಡೇಜ ಬೆನ್ನುನೋವಿಗೆ ಒಳಗಾಗಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ. ಇವರ ಬದಲು ಆರ್‌. ಅಶ್ವಿ‌ನ್‌ ಆಡಲಿಳಿದರು.

ಬಲಗೈ ಬೌಲರ್‌ ಆಗಿರುವ ಪ್ರಸಿದ್ಧ್ ಕೃಷ್ಣ 17 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಸ್‌ಪ್ರೀತ್‌ ಬುಮ್ರಾ, ಸಿರಾಜ್‌, ಶಾರ್ದೂಲ್‌ ಠಾಕೂರ್‌ ವೇಗದ ಬೌಲಿಂಗ್‌ ವಿಭಾಗದ ಉಳಿದ ಸದಸ್ಯರು.

ದ. ಆಫ್ರಿಕಾ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ ಡೇವಿಡ್‌ ಬೇಡಿಂಗ್‌ಹ್ಯಾಮ್‌ ಮತ್ತು ಬೌಲಿಂಗ್‌ ಆಲ್‌ರೌಂಡರ್‌ ನಾಂಡ್ರೆ ಬರ್ಗರ್‌ ಟೆಸ್ಟ್‌ ಕ್ಯಾಪ್‌ ಧರಿಸಿದರು. ಆತಿಥೇಯರ ಬೌಲಿಂಗ್‌ ಲೈನ್‌ಅಪ್‌ನಲ್ಲಿ ನಾಲ್ವರೂ ಸ್ಪೆಷಲಿಸ್ಟ್‌ ವೇಗಿಗಳಾಗಿದ್ದರು. ಪ್ರಧಾನ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ಅವರಿಗೂ ಅವಕಾಶ ಸಿಗಲಿಲ್ಲ.

ಸ್ನಾಯು ಸೆಳೆತಕ್ಕೆ ಸಿಲುಕಿದ ಬವುಮ
ಟೆಸ್ಟ್‌ ಸರಣಿಯ ಮೊದಲ ದಿನದಾಟದಲ್ಲೇ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬವುಮ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ಅವರು ಈ ಪಂದ್ಯದಲ್ಲಿ ಮುಂದು ವರಿಯುವ ಬಗ್ಗೆ ಅನುಮಾನ ಮೂಡಿದೆ.

ಪಂದ್ಯದ 20ನೇ ಓವರ್‌ ವೇಳೆ ಈ ಘಟನೆ ಸಂಭವಿಸಿತು. ಮಾರ್ಕೊ ಜಾನ್ಸೆನ್‌ ಎಸೆತವನ್ನು ವಿರಾಟ್‌ ಕೊಹ್ಲಿ ಡ್ರೈವ್‌ ಮಾಡಿದ್ದರು. ಆಗ ಎಕ್ಸ್‌ಟ್ರಾ ಕವರ್‌ನಲ್ಲಿದ್ದ ಬವುಮ ಚೆಂಡು ತಡೆಯುವ ವೇಳೆ ಎಡ ಪಾರ್ಶ್ವದ ಸ್ನಾಯು ಸೆಳೆತಕ್ಕೊಳಗಾದರು. ಬಳಿಕ ತಂಡದ ಫಿಸಿಯೋ ನೆರವಿನಿಂದ ಅಂಗಳ ತೊರೆದರು. ಬವುಮ ಬದಲು ವಿಯಾನ್‌ ಮುಲ್ಡರ್‌ ಅವರನ್ನು ಕ್ಷೇತ್ರರಕ್ಷಣೆಗೆ ಇಳಿಸಲಾಯಿತು. ಕೊನೆಯ ಟೆಸ್ಟ್‌ ಸರಣಿ ಆಡುತ್ತಿರುವ ಉಪನಾಯಕ ಡೀನ್‌ ಎಲ್ಗರ್‌ ತಂಡದ ನೇತೃತ್ವ ವಹಿಸಿದರು.

“ಬವುಮ ಅವರು ಎಡ ಪಾರ್ಶ್ವದ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ದಿನವೂ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿದೆ. ಅವರು ಈ ಪಂದ್ಯಕ್ಕೆ ಎಷ್ಟರ ಮಟ್ಟಿಗೆ ಫಿಟ್‌ ಆಗಲಿದ್ದಾರೆ ಎಂಬುದನ್ನು ಮುಂದೆ ನಿರ್ಧರಿಸಲಾಗುವುದು’ ಎಂದು ಕ್ರಿಕೆಟ್‌ ಸೌತ್‌ ಆಫ್ರಿಕಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next