Advertisement

ಹುಲಿ ಸಂಖ್ಯೆ ಹೆಚ್ಚಳ: ಸಂತಸದ ಜತೆ ಆತಂಕ

09:46 PM Jul 22, 2019 | Lakshmi GovindaRaj |

ಗುಂಡ್ಲುಪೇಟೆ: ಬಂಡೀಪುರ ದೇಶದ ಉದ್ಯಾನವನಗಳಲ್ಲಿ ತನ್ನದೇ ಆದ ಖ್ಯಾತಿ ಮತ್ತು ಪ್ರಸಿದ್ಧಿ ಪಡೆದಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ ಉದ್ಯಾನವನ ಎಂಬ ಹೆಸರಿಗೆ ಖ್ಯಾತಿಯಾಗಿ ಹಸಿರು ಸಿರಿಯಿಂದ ಕಂಗೊಳಿಸುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ದೇಶದಲ್ಲೇ ಅತೀ ಹೆಚ್ಚು ಹುಲಿಯನ್ನು ಅಂದರೆ 135ಕ್ಕೂ ಹೆಚ್ಚು ಹುಲಿ ಹೊಂದಿದೆ ಎಂದು ಇತ್ತೀಚಿನ ಹುಲಿಗಣತಿ ಧೃಡೀಕರಿಸಿದೆ.

Advertisement

ಆದರೆ ಹೆಚ್ಚಾದ ಹುಲಿಗಳ ಸಂಖ್ಯೆ ಒಂದೆಡೆ ಪ್ರಾಣಿ ಪ್ರಿಯರಿಗೆ ಖುಷಿಯಾದರೆ, ಮತ್ತೂಂಡೆದೆ ಕಾಡಂಚಿನ ಗ್ರಾಮಗಳಲ್ಲಿನ ಚಾನುವಾರುಗಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆಯುತ್ತಿರುವ ಹುಲಿಗಳಿಂದ ರೈತರ ಪಾಲಿಗೆ ಇದು ಕಹಿ ಸುದ್ದಿಯಾಗಿದೆ.

ಆತಂಕಕ್ಕೆ ಕಾರಣ: ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಿ ಮಾನವನ ಪ್ರವೇಶವನ್ನು ನಿರ್ಬಂಧಿಸಿದ್ದರೂ ಸಹ ಮಾನವನ ಅಕ್ರಮ ಪ್ರವೇಶ, ಹೆಚ್ಚಳವಾದ ವನ್ಯ ಜೀವಿಗಳ ಸಂಖ್ಯೆ ಮಾನವ ಹಾಗೂ ವನ್ಯಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಿರುವುದು ವನ್ಯ ಜೀವಿಪ್ರಿಯರ ಆತಂಕಕ್ಕೆ ಕಾರಣವಾಗಿದೆ.

ಹುಲಿಗಳಿಗೆ ವಿಷ ಪ್ರಾಶನ: ರಾಷ್ಟ್ರದಲ್ಲಿಯೇ ಕರ್ನಾಟಕ ಅದರಲ್ಲಿಯೂ ಬಂಡೀಪುರದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿರುವ ಬಗ್ಗೆ ಕೇಂದ್ರದ ಅರಣ್ಯ ಸಚಿವರು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಂತಸ ಪಟ್ಟಿದ್ದ ವನ್ಯಜೀವಿಪ್ರಿಯರಿಗೆ ಹಲವು ತಿಂಗಳ ಹಿಂದೆ ಹಂಗಳ ಸಮೀಪದ ಕೆರೆ ಬಳಿ ಎರಡು ಹುಲಿಗಳು ವಿಷಪ್ರಾಶನದಿಂದ ಸಾವಿಗೀಡಾಗಿದ್ದು ಆತಂಕವುಂಟು ಮಾಡಿತ್ತು. ಇದೇ ರೀತಿಯಾಗಿ ಕೆಲವು ದಿನಗಳ ಹಿಂದೆ ಪಾರ್ವತಿ ಬೆಟ್ಟದ ಸಮೀಪ ಹುಲಿ ಮತ್ತು ಚಿರತೆಗೆ ವಿಷಪ್ರಾಶನ ಮಾಡಿ ಸಾಯಿಸಲಾಗಿದೆ.

ಇಲಾಖೆ ಮೇಲಿನ ಸಿಟ್ಟಿಗೆ ಪ್ರಾಣಿಗಳ ಬಲಿ: ಅರಣ್ಯ ಇಲಾಖೆಯವರು ಸರಿಯಾಗಿ ಗಸ್ತು ಮಾಡಿದ್ದರೆ ಹುಲಿಯಾಗಲೀ, ಚಿರತೆಯಾಗಲೀ ನಮ್ಮ ಜಮೀನಿಗೆ ಬಂದು ನಮ್ಮ ಜಾನುವಾರುಗಳನ್ನು ತಿನ್ನುತ್ತಿರಲಿಲ್ಲ. ಅವರು ಅವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅದರಿಂದಲೇ ಹುಲಿ ಅಥವಾ ಚಿರತೆ ದಾಳಿಗೊಳಗಾಗಿ ಸತ್ತ ಜಾನುವಾರಿನ ಮೃತದೇಹದ ಮೇಲೆ ಕ್ರಿಮಿನಾಶಕವನ್ನು ಸುರಿದು ಅದನ್ನು ಮತ್ತೆ ತಿಂದ ವನ್ಯಜೀವಿಗಳು ಧಾರುಣವಾಗಿ ಸಾಯುವಂತೆ ಮಾಡಲಾಗುತ್ತಿದೆ.

Advertisement

ಇಂಥ ಘಟನೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಕಂದೇಗಾಲ ಗ್ರಾಮದ ಮಹದೇವಪ್ಪ ಎಂಬುವವನನ್ನು ಬಂಧಿಸಲಾಗಿದೆ. ಈ ಕೃತ್ಯವೆಸಗಿ ಹುಲಿ ಮತ್ತು ಚಿರತೆ ಸಾವಿಗೆ ಕಾರಣರಾದ ಮತ್ತೆ ಆರು ಮಂದಿ ಬಂಧನಕ್ಕೆ ಶೋಧ ಕಾರ್ಯಕೈಗೊಳ್ಳಲಾಗಿದೆ. ಇದು ಏನೇ ಇರಲಿ, ನಮ್ಮ ಕಾಡು ನಮ್ಮ ಹೆಮ್ಮೆ. ನಮ್ಮ ವನ್ಯಪ್ರಾಣಿಗಳು ದೇಶದ ಸಂಪತ್ತು, ಇವುಗಳನ್ನು ವಿಷವಿಕ್ಕಿ ಸಾಯಿಸುವುದು ಎಷ್ಟು ಸರಿ ಎಂಬುದು ಪ್ರಾಣಿಪ್ರಿಯರಲ್ಲಿ ಮೂಡಿರುವ ಆತಂಕ.

ವನ್ಯ ಮೃಗಗಳ ಸಂತತಿ ಹೆಚ್ಚು: 3200 ಎಕರೆ ವಿಸ್ತೀರ್ಣದ ಬಂಡೀಪುರ ಅರಣ್ಯವನ್ನು 1973ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದಾಗ ಕೇವಲ 40ರಷ್ಟಿದ್ದ ಹುಲಿಗಳು ಸರಾಸರಿ 90 ಕಿ.ಲೋ. ಮೀಟರ್‌ ವ್ಯಾಪಿಯಲ್ಲಿ ಒಂದರಂತೆ ವಾಸವಾಗಿದ್ದವು. ಅರಣ್ಯದೊಳಗೆ ಮಾನವನ ಪ್ರವೇಶದ ನಿಯಂತ್ರಣ, ಆಯಕಟ್ಟಿನ ಸ್ಥಳಗಳಲ್ಲಿ ಕಳ್ಳಬೇಟೆ ಶಿಬಿರಗಳ ಸ್ಥಾಪನೆ ಮೂಲಕ ಕಳ್ಳಬೇಟೆಗಳ ತಡೆ, ವಿಶೇಷ ಹುಲಿ ಸಂರಕ್ಷಣಾ ಪಡೆಗಳ ಅಳವಡಿಕೆಯಿಂದಾಗಿ ಗಣನೀಯವಾಗಿ ವನ್ಯ ಮೃಗಗಳ ಸಂತತಿಯು ಹೆಚ್ಚಳವಾಗಿದೆ.

ಈಗ ಕಳೆದ ವರ್ಷ ನಡೆದ ಹುಲಿ ಗಣತಿಯಿಂದ ಇಲ್ಲಿ ಸರಿ ಸುಮಾರು 135ಕ್ಕೂ ಹೆಚ್ಚು ಹುಲಿಗಳಿದ್ದು, ತಲಾ ಹುಲಿಗೆ 9 ಚದರ ಕಿಲೋ ಮೀಟರ್‌ ವ್ಯಾಪ್ತಿ ಪ್ರದೇಶ ಲಭ್ಯವಾಗಿದೆ. ಆದರೆ ಸರಹದ್ದಿನ ಸಮಸ್ಯೆ ಇಂದಲೂ ಸಹ ಹುಲಿಗಳಲ್ಲಿ ಕಾದಾಟವಾಗಿ ಸೋತ ಹುಲಿಯು ಕಾಡಿನಿಂದ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿದೆ. ಇಂಥ ಹುಲಿ ಹಾಗೂ ಚಿರತೆಗಳು ಸಮೀಪದ ಗ್ರಾಮಗಳ ಜಾನುವಾರುಗಳನ್ನು ಕೊಂದು ತಿನ್ನುವುದರೊಂದಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತದೆ ಹಾಗೂ ವಿಷಪ್ರಾಷನಕ್ಕೆ ಒಳಗಾಗಿ ಸಾಯುತ್ತಿವೆ.

ಬೇಟೆಯಾಡಲು ಅಸಮರ್ಥವಾದ ವಯಸ್ಸಾದ ಹುಲಿಗಳು ಹಾಗೂ ಸಾಕಷ್ಟು ವ್ಯಾಪ್ತಿ ಪ್ರದೇಶ ದೊರಕದ ಹುಲಿಗಳು ಕಾಡಿನಿಂದ ಹೊರಬಂದು ಸುಲಭವಾಗಿ ಬೇಟೆಗೆ ಸಿಲುಕುವ ರೈತರ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹುಲಿಗಳ ನಡುವೆ ನಡೆದ ಕಾದಾಟದಿಂದ ಗಾಯಗೊಂಡ ಹುಲಿಯು ಸಾವಿಗೀಡಾಗುವ ನಿದರ್ಶನಗಳು ಇದ್ದರೂ ಸಹ ವಿಷಪ್ರಾಶನದಿಂದಾಗಿ ಹುಲಿ ಸಾಗೀಡಾದ ಸುದ್ದಿ ಹೆಚ್ಚಿನ ಆಘಾತಕಾರಿಯಾಗಿದೆ.

ಕಾಡಂಚಿನ ಗ್ರಾಮಗಳಲ್ಲಿ ಹುಲಿ ಮತ್ತು ಆನೆ ದಾಳಿ ಪ್ರಕರಣಗಳು ನಡೆಯುತ್ತಿದೆ. ನಾವು ಮತ್ತು ನಮ್ಮ ಸಿಬ್ಬಂದಿ ತುರ್ತು ಕಾರ್ಯಾಚರಣೆ ಮಾಡುತ್ತಿದ್ದೇವೆ. ಕಾಡಾನೆಗಳ ಸಹಾಯದಿಂದ ಹುಲಿಗಳ ಹುಡುಕಾಟ ಚುರುಕಾಗಿ ನಡೆಯುತ್ತಿದೆ. ಹಲವು ಭಾಗಗಳಲ್ಲಿ ಆನೆ ಹಾವಳಿ ನಿಯಂತ್ರಿಸಲಾಗಿದೆ.
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕ, ಬಂಡೀಪುರ.

ಕಾಡಾನೆಗಳ ದಾಳಿಯಿಂದ ಒಂದೆಡೆ ಫ‌ಸಲು ನಾಶವಾಗುತ್ತಿದೆ. ಮತ್ತೂಂದೆಡೆ ಹುಲಿ ದಾಳಿಯಿಂದ ಹಸು, ಕರು ಎತ್ತುಗಳು ಸಾಯುತ್ತಿದೆ. ರಾತ್ರಿ ಘಸಲನ್ನು ಕಾವಲು ಕಾಯಲು ಜೀವ ಭಯವಿದೆ. ಇಂಥ ಪರಿಸ್ಥಿತಿಯಲ್ಲಿ ರೈತರ ಬದುಕು ಸಾಗುತ್ತಿದೆ. ಅರಣ್ಯ ಇಲಾಖೆ ಮತ್ತಷ್ಟು ಗಸ್ತು ಹೆಚ್ಚಿಸುವುದರೊಂದಿಗೆ ಹಾಗೂ ತುರ್ತಾಗಿ ಹುಲಿಯನ್ನು ಸೆರೆ ಹಿಡಿದು ಬೇರೆಡೆ ಸಾಗಿಸಿ ಸಹಕಾರ ನೀಡಬೇಕಾಗಿದೆ.
-ಸಿದ್ದಪ್ಪ, ಬಂಡೀಪುರ

* ಸೋಮಶೇಖರ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next